ಮಂಡ್ಯದಲ್ಲಿ ಈ ದಿನ ನಿಷೇಧಾಜ್ಞೆ ಜಾರಿ: ಕಾರಣ, ವಿವರ ಇಲ್ಲಿದೆ
ಮಂಡ್ಯ, ನವೆಂಬರ್ 20: ಮಂಡ್ಯ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತ್‌ಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ, ತೆರವಾಗಿರುವ ಸದಸ್ಯ ಸ್ಥಾನಗಳ ಉಪ ಚುನಾವಣೆಯ ಮತದಾನವು ನವೆಂಬರ್ 23ರಂದು ಬೆಳಿಗ್ಗೆ 7 ಗಂಟೆಯಿಂದದ ಸಂಜೆ 6 ಗಂಟೆಯವರೆಗೆ ನಡೆಯಲಿದೆ. ಮತದಾನದ ದಿನ ಮಂಡ್ಯ ಜಿಲ್ಲೆಯ ಗ್ರಾಮ ಪಂಚಾಯಿತಿ ಉಪ ಚುನಾವಣೆ ನಡೆಯುವ ಎಲ್ಲಾ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಷರತ್ತುಗಳನ್ನು ವಿಧಿಸಿ ನಿಷೇದಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ಡಾ.ಕುಮಾರ್ ಆದೇಶ ಹೊರಡಿಸಿದ್ದಾರೆ.
ಈ ಆದೇಶವು ಮಂಡ್ಯ ಜಿಲ್ಲೆಯ ಉಪ ಚುನಾವಣೆಯ ಮತದಾನ ನಡೆಯುವ ಗ್ರಾಮ ಪಂಚಾಯಿತಿ ಮತಗಟ್ಟೆಗಳ ವ್ಯಾಪ್ತಿಗೊಳಪಟ್ಟಿರುತ್ತದೆ. ಜಿಲ್ಲೆಯಲ್ಲಿ ಮತದಾನ ನಡೆಯಲಿರುವ ಗ್ರಾಮ ಪಂಚಾಯಿತಿ ಮತಗಟ್ಟೆಗಳ 100 ಮೀಟರ್ ಪ್ರದೇಶದ ವ್ಯಾಪ್ತಿಯಲ್ಲಿ ಯಾವುದೇ ಅಂಗಡಿ ಮುಂಗಟ್ಟುಗಳನ್ನು ತೆರೆಯಕೂಡದು. ನಿಷೇದಾಜ್ಞೆ ಇರುವ ಯಾವ ಪ್ರದೇಶದಲ್ಲೂ ಜನರು ಮಾರಕಾಸ್ತ್ರಗಳನ್ನು ಹಿಡಿದು ತಿರುಗಾಡುವಂತಿಲ್ಲ. ಯಾವುದೇ ಮೆರವಣಿಗೆ ಸಭೆ ಸಮಾರಂಭ ಮಾಡುವಂತಿಲ್ಲ.

ಪಟಾಕಿ, ಸಿಡಿಮದ್ದು ಹಾಗೂ ಇತರೆ ಸ್ಫೋಟಕಗಳನ್ನು ಉಪಯೋಗಿಸುವಂತಿಲ್ಲ. ಮನುಷ್ಯ ಶವಗಳ ಅಥವಾ ಪ್ರತಿಕೃತಿ ಅಣಕು ಪ್ರದರ್ಶನ ಮಾಡುವುದನ್ನು ಪ್ರತಿಬಂಧಿಸಲಾಗಿದೆ. ನಿಷೇದಾಜ್ಞೆ ಇರುವ ಪ್ರದೇಶದಲ್ಲಿ ಬಹಿರಂಗವಾಗಿ ಘೋಷಣೆ ಮಾಡುವುದು, ಪ್ರಚೋದನಾತ್ಮಕ ಮತ್ತು ಉದ್ರೇಕಕಾರಿ, ಕಾನೂನು ಸುವ್ಯಸ್ಥೆಗೆ ಭಂಗ ತರುವಂತಹ ಯಾವುದೇ ಕೃತ್ಯಗಳಲ್ಲಿ ತೊಡಗುವುದನ್ನು ನಿಷೇಧಿಸಲಾಗಿದೆ.
ಈ ನಿಷೇದಾಜ್ಞೆಯು ಸದುದ್ದೇಶದ ಮದುವೆ, ಶವಸಂಸ್ಕಾರ ಕಾರ್ಯಗಳಿಗೆ ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡುವ ಮತ್ತು ಚುನಾವಣಾ ಕಾರ್ಯಕ್ಕೆ ನೇಮಿಸಲ್ಪಟ್ಟಿರುವ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರಿಗೆ ಹಾಗೂ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡುವ ಮತದಾರರಿಗೆ ಅನ್ವಯಿಸುವುದಿಲ್ಲ. ಈ ಆದೇಶವನ್ನು ಉಲ್ಲಂಘಿಸಿದವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಕಲಂ 223 ರ ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಮಂಡ್ಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ. ಕುಮಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications