ಮಂಡ್ಯ ದೊಡ್ಡಾಸ್ಪತ್ರೆಯ ಪ್ರಸೂತಿ ಶಸ್ತ್ರಚಿಕಿತ್ಸಾ ಕೊಠಡಿಗೆ 'ಆಪರೇಷನ್' ಅಗತ್ಯ
ಮಂಡ್ಯ, ನವೆಂಬರ್ 14: ದೊಡ್ಡಾಸ್ಪತ್ರೆಯ ಪ್ರಸೂತಿ ಶಸ್ತ್ರ ಚಿಕಿತ್ಸಾ ವಿಭಾಗ ನೋಡಿದರೆ ಅದೊಂದು ನರಕ. ಇಡೀ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ. ಮಳೆ ಬಂದರೆ ಕಟ್ಟಡ ಸೋರುತ್ತದೆ. ಪಾರಂಪರಿಕ ಕಟ್ಟಡವಾಗಿದ್ದರೂ ಸುಸ್ಥಿತಿಯಲ್ಲಿಡಲಾಗದಷ್ಟು ನಿರ್ಲಕ್ಷ್ಯ ವಹಿಸಿರುವ ಮಿಮ್ಸ್ ವೈದ್ಯಾಕಾರಿಗಳು ಕೇವಲ ಹೆರಿಗೆಗಷ್ಟೇ ಸೀಮಿತಗೊಳಿಸಿದ್ದಾರೆ. ಪ್ರಸೂತಿ ಶಸ್ತ್ರಚಿಕಿತ್ಸಾ ವಾರ್ಡ್‌ನತ್ತ ಕಣ್ತೆರೆದು ನೋಡುವವರೇ ಇಲ್ಲದಂತಾಗಿದೆ.
ಮೈಸೂರು ಮಹಾರಾಜರು ಕಟ್ಟಿಸಿದ ಮಿಮ್ಸ್ ಆಸ್ಪತ್ರೆಯ ಕಟ್ಟಡ ಹೊರಗಿನಿಂದ ನೋಡುವುದಕ್ಕೆ ಬಹಳ ಆಕರ್ಷಣೀಯವಾಗಿದೆ. ಒಳಗೆ ಹೋದಾಗಷ್ಟೇ ಅಲ್ಲಿರುವ ಕೊಳಕು ಅನಾವರಣಗೊಳ್ಳುತ್ತದೆ. ಅದರಲ್ಲೂ ಪ್ರಸೂತಿ ಶಸ್ತ್ರಚಿಕಿತ್ಸಾ ವಿಭಾಗದ ಕಟ್ಟಡವಂತೂ ನೋಡುವುದಕ್ಕೆ ಅಸಹ್ಯ ಹುಟ್ಟಿಸುವಂತಿದೆ. ಇಂತಹ ವಿಭಾಗದೊಳಗೆ ಶಸ್ತ್ರಚಿಕಿತ್ಸೆಗೆ ಒಳಗಾಗುವ ರೋಗಿಗಳ ಪರಿಸ್ಥಿತಿ ದಯನೀಯವಾಗಿದ್ದರೂ ಕೇಳೋರೇ ದಿಕ್ಕಿಲ್ಲ.
ಜಿಲ್ಲಾಸ್ಪತ್ರೆಯ ಕಲ್ಲು ಕಟ್ಟಡ ಸಂಕೀರ್ಣ ಸಾಂಸ್ಕೃತಿಕ ಪರಂಪರೆಯ ಕಟ್ಟಡವೆಂದು ಹೆಸರುವಾಸಿಯಾಗಿದೆ. ಈ ಕಟ್ಟಡವನ್ನು ಸುಸ್ಥಿತಿಯಲ್ಲಿ ಕಾಪಾಡಿಕೊಂಡು ಬರಬೇಕಿದ್ದ ಮಿಮ್ಸ್ ಅಕಾರಿಗಳು ದುರಸ್ತಿ ನೆಪದಲ್ಲಿ ಕೋಟ್ಯಂತರ ರೂಪಾಯಿ ಕೊಳ್ಳೆ ಹೊಡೆಯುವುದಕ್ಕಷ್ಟೇ ಸೀಮಿತಗೊಳಿಸಿಕೊಂಡರು. ಈ ಕಟ್ಟಡ ದುರಸ್ತಿಗೆ ಎಷ್ಟು ಕೋಟಿ ಹಣ ಹರಿದುಹೋಗಿದೆಯೋ ಯಾರಿಗೂ ಗೊತ್ತಿಲ್ಲ. ಆದರೆ, ಕಟ್ಟಡ ಮಾತ್ರ ಸುಸ್ಥಿತಿಗೆ ಬಂದಿಲ್ಲ. ಇಂದಿಗೂ ಕಟ್ಟಡ ಮಳೆ ನೀರಿನಿಂದ ಸೋರುವುದು, ಗೋಡೆಗಳು ಶೀತಮಯವಾಗಿ ಶಿಥಿಲಾವಸ್ಥೆಯಲ್ಲೇ ಉಳಿದಿರುವುದು ಗೋಚರಿಸುತ್ತದೆ.

ಚುರುಕಿ ಗಾರೆ ತೆಗೆದ ಕಾರಣ ಮಳೆ ಬಂದರೆ ಸೋರುವ ಕಟ್ಟಡ
ದುರಸ್ತಿ ನೆಪದಲ್ಲಿ ಕಟ್ಟಡದ ಮೇಲ್ಭಾಗದಲ್ಲಿ ಹಾಕಿದ್ದ ಚುರುಕಿ ಗಾರೆಯನ್ನು ಕಿತ್ತುಹಾಕಲಾಗಿದೆ. ಹೊಸದಾಗಿ ಚುರುಕಿ ಹಾಕಿಲ್ಲ. ಇದರ ಪರಿಣಾಮ ಸಣ್ಣ ಮಳೆ ಬಂದರೂ ಕಟ್ಟಡದೊಳಗೆ ನೇರವಾಗಿ ನೀರಿಳಿಯುವುದು ಸಾಮಾನ್ಯವಾಗಿದೆ. ಶಸ್ತ್ರ ಚಿಕಿತ್ಸಾ ವಿಭಾಗದೊಳಗೆ ನೀರು ತುಂಬಿಕೊಳ್ಳುತ್ತದೆ. ಇಂತಹ ಅವ್ಯವಸ್ಥೆಯೊಳಗೆ ಸ್ತ್ರೀರೋಗಿಗಳು ಶಸತ್ತ್ರಚಿಕಿತ್ಸೆ ನಡೆಸಿಕೊಳ್ಳುವ ದೌರ್ಭಾಗ್ಯ ಬಂದೊದಗಿದೆ.
ವರ್ಷವಾದರೂ ಕಟ್ಟಡದ ದುರಸ್ತಿಪಡಿಸುವ ಆಸಕ್ತಿ, ಇಚ್ಛಾಶಕ್ತಿ ಯಾರಲ್ಲೂ ಇಲ್ಲ. ಕಟ್ಟಡದ ಮೇಲ್ಭಾಗದ ಕಬ್ಬಿಣದ ಶೀಟ್ ಹಾಕುವ ಕಾಮಗಾರಿಯ ಅಂದಾಜುಪಟ್ಟಿಯನ್ನು ನಿರ್ಮಿತಿ ಕೇಂದ್ರದವರು ತಯಾರಿಸುತ್ತಿದ್ದು, ಅದನ್ನು ಸರ್ಕಾರಕ್ಕೆ ಕಳುಹಿಸಿ ಮಂಜೂರಾತಿ ದೊರಕಿಸಿಕೊಂಡ ಬಳಿಕ ಕಾಮಗಾರಿ ಶುರುಮಾಡಲಾಗುತ್ತದೆ ಎನ್ನುವ ಮಾತು ಕೇಳಿ ಬರುತ್ತಿದೆಯಾದರೂ ಎಂದಿಗೆ ಎಂಬುದು ಮಾತ್ರ ಯಾರಿಗೂ ಗೊತ್ತಿಲ್ಲ.

ಹೆರಿಗೆ ಬಿಟ್ಟು ಬೇರೆ ಶಸ್ತ್ರಚಿಕಿತ್ಸೆ ನಡೆಯುತ್ತಿಲ್ಲ
ಮಿಮ್ಸ್ ಆಸ್ಪತ್ರೆ ಕೇವಲ ಹೆರಿಗೆಗೆ ಮಾತ್ರ ಸೀಮಿತವಾಗಿದೆ. ಸಿಜೇರಿಯನ್ ಮತ್ತು ಸಾಮಾನ್ಯ ಹೆರಿಗೆಗಳಷ್ಟೇ ಇಲ್ಲಿ ನಡೆಯುತ್ತಿವೆ. ಉಳಿದಂತೆ ಗರ್ಭಕೋಶ, ಹೊಟ್ಟೆಯಲ್ಲಿ ಬೆಳೆದಿರುವ ಗಡ್ಡೆ, ಅಂಡಾಶಯಗಳ ಮೇಲಿನ ಗುಳ್ಳೆಗಳು ಸೇರಿದಂತೆ ಇನ್ನಿತರ ಸ್ತ್ರೀಯರಿಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಗಳು ಸಮರ್ಪಕವಾಗಿ ನಡೆಯುತ್ತಲೇ ಇಲ್ಲ. ಎಲ್ಲವೂ ಆಸ್ಪತ್ರೆಯ ಹೊರಗೇ ನಡೆಯುತ್ತಿವೆ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಆರೋಪವಾಗಿದೆ.

ಸುಸ್ಥಿತಿಗೆ ತಂದರೆ ಶಸ್ತ್ರಚಿಕಿತ್ಸೆಗಳ ಸಂಖ್ಯೆ 3 ಪಟ್ಟು ಹೆಚ್ಚಳ
ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿರುವ ಲ್ಯಾಪ್ರೋಸ್ಕೋಪಿ ಸೇರಿದಂತೆ ಇನ್ನಿತರ ಉಪಕರಣಗಳು ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಈ ಶಸ್ತ್ರಚಿಕಿತ್ಸಾ ವಿಭಾಗವನ್ನು ಸುಸ್ಥಿತಿಗೆ ತಂದರೆ ಶಸ್ತ್ರಚಿಕಿತ್ಸೆಗಳ ಸಂಖ್ಯೆಯನ್ನು ಈಗ ನಡೆಯುತ್ತಿರುವುದಕ್ಕಿಂತಲೂ ಮೂರುಪಟ್ಟು ಹೆಚ್ಚಿಸಬಹುದು. ಇದರಿಂದ ಬಡ ಸ್ತ್ರೀರೋಗಿಗಳಿಗೆ ಹೆಚ್ಚಿನ ಅನುಕೂಲವಾಗುವುದಾದರೂ ಯಾರಿಗೂ ಈ ವಿಭಾಗವನ್ನು ಸುಧಾರಣೆ ಮಾಡುವ ಆಸಕ್ತಿ, ಇಚ್ಛಾಶಕ್ತಿಯೇ ಇಲ್ಲದಂತಾಗಿದೆ.
ಈ ಕಾರಣದಿಂದ ಬಹಳಷ್ಟು ರೋಗಿಗಳು ಜಿಲ್ಲಾಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಲು ಸಾಧ್ಯವಾಗದೆ ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ದುಪ್ಪಟ್ಟು ಹಣ ಕೊಟ್ಟು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತಿದ್ದಾರೆ. ಎಬಿಆರ್‌ಕೆ ಆರೋಗ್ಯ ಕಾರ್ಡ್ ಇದ್ದರೂ ಅದರ ಉಪಯೋಗ ಪಡೆದುಕೊಳ್ಳುವುದಕ್ಕೆ ಅವರಿಂದ ಸಾಧ್ಯವಾಗುತ್ತಿಲ್ಲ. ಇಲ್ಲದಿದ್ದರೆ ಆಪರೇಷನ್‌ಗಾಗಿ ಸಾಕಷ್ಟು ಸಮಯ ಕಾದು ಕೂರಬೇಕಾದ ಸನ್ನಿವೇಶ ಎದುರಾಗಿದೆ ಎಂಬ ಆರೋಪಗಳು ಆಸ್ಪತ್ರೆ ವಲಯದಿಂದಲೇ ಕೇಳಿಬರುತ್ತಿವೆ.

ದುರಸ್ತಿಗೆ ಬಿಡುಗಡೆಯಾದ ಹಣ ಬೇರೆ ಕೆಲಸಕ್ಕೆ ಬಳಕೆ
ಪ್ರಸೂತಿ ಶಸ್ತ್ರ ಚಿಕಿತ್ಸಾ ವಿಭಾಗದಲ್ಲಿ ಶಸ್ತ್ರಚಿಕಿತ್ಸೆಗಳು ನಡೆಯುತ್ತಿಲ್ಲವೇಕೆ ಎಂದು ಆಸ್ಪತ್ರೆ ವೈದ್ಯಾಕಾರಿಗಳನ್ನು ಕೇಳಿದರೆ ಕೊರೊನಾ ನೆಪ ಹೇಳುತ್ತಾರೆ. ಕೊರೊನಾ ಸೋಂಕು ಹೆಚ್ಚಿದ್ದ ಕಾರಣ ಹೆರಿಗೆಯನ್ನು ಹೊರತುಪಡಿಸಿ ಉಳಿದ ಶಸ್ತ್ರಚಿಕಿತ್ಸೆಗಳನ್ನು ನಡೆಸುತ್ತಿರಲಿಲ್ಲ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಶಸ್ತ್ರ ಚಿಕಿತ್ಸಾ ವಿಭಾಗದೊಳಗಿನ ಕೊಳಕನ್ನು ಹೊರಗಿನ ಪ್ರಪಂಚದಿಂದ ಮುಚ್ಚಿಡಲು ಪ್ರಯತ್ನಿಸುತ್ತಿದ್ದಾರೆ. ವಾಸ್ತವದಲ್ಲಿ ಕೊರೊನಾ ಸೋಂಕು ದೂರವಾಗಿ ವರ್ಷವೇ ಸಮೀಪಿಸುತ್ತಿದೆ. ಆಸ್ಪತ್ರೆ ವೈದ್ಯಾಕಾರಿಗಳು ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಕೊರೊನಾ ಕಾರಣವನ್ನು ಮುಂದಿಡುತ್ತಿದ್ದಾರೆ. ಇದು ಆಸ್ಪತ್ರೆಯ ಅದಕ್ಷ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.
ಕಳೆದೆರಡು ವರ್ಷಗಳ ಹಿಂದೆ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಆಸ್ಪತ್ರೆ ಕಟ್ಟಡದ ದುರಸ್ತಿಗೆ 2 ಕೋಟಿ ರೂ. ಅನುದಾನ ಬಿಡುಗಡೆಯಾಗಿರುವುದಾಗಿ ಹೇಳಲಾಗಿದ್ದು, ಆ ಹಣವನ್ನು ಅನ್ಯ ಉದ್ದೇಶಗಳಿಗೆ ಬಳಕೆ ಮಾಡಿಕೊಂಡು ಕಟ್ಟಡದ ದುರಸ್ತಿಯನ್ನು ನೆನೆಗುದಿಗೆ ಬೀಳುವಂತೆ ಮಾಡಿದರು. ಈಗ ಹಣವೆಲ್ಲಾ ಖರ್ಚಾಗಿರುವುದರಿಂದ ಹೊಸದಾಗಿ ಅಂದಾಜುಪಟ್ಟಿ ಸಲ್ಲಿಸಿ ಸರ್ಕಾರದ ಅನುಮತಿ ಪಡೆಯುವುದಕ್ಕೆ ಈಗಿರುವ ಮಿಮ್ಸ್ ನಿರ್ದೇಶಕರು ಹರಸಾಹಸ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

ಅವ್ಯವಸ್ಥೆ ಗುರುತಿಸುವ ಅಗತ್ಯ
ಜಿಲ್ಲಾ ಆಸ್ಪತ್ರೆಯ ಕಡೆ ಸ್ಥಳೀಯ ಜನಪ್ರತಿನಿಗಳು, ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಸೇರಿದಂತೆ ಯಾರೊಬ್ಬರೂ ತಿರುಗಿ ನೋಡುವುದೇ ಇಲ್ಲ. ಹೀಗಾಗಿ ಈ ಆಸ್ಪತ್ರೆಯನ್ನೇ ನಂಬಿಕೊಂಡಿರುವ ಬಡರೋಗಿಗಳು ಅನುಭವಿಸುತ್ತಿರುವ ಗೋಳನ್ನು ಕೇಳುವವರೆ ದಿಕ್ಕಿಲ್ಲದಂತಾಗಿದೆ. ಅವರು ಆಸ್ಪತ್ರೆಯೊಳಗೆ ಮೂಕ ರೋದನ ಅನುಭವಿಸುವಂತಾಗಿದೆ.
ಆಸ್ಪತ್ರೆ ವೈದ್ಯಾಕಾರಿಗಳಿಗೆ ಆಸ್ಪತ್ರೆಯಲ್ಲಿರುವ ಸೌಲಭ್ಯಗಳನ್ನು ಹೆಚ್ಚಿಸಿ, ಕಟ್ಟಡಗಳನ್ನು ಸುಸ್ಥಿತಿಯಲ್ಲಿಟ್ಟು ಚಿಕಿತ್ಸೆಯಲ್ಲಿ ಸುಧಾರಣೆ ತರುವುದಕ್ಕಿಂತ ಹೆಚ್ಚಾಗಿ ಹಣ ಲೂಟಿ ಹೊಡೆಯುವುದಕ್ಕೆ ಹೆಚ್ಚಿನ ಆಸಕ್ತಿ, ಮುತುವರ್ಜಿ ತೋರಿಸುತ್ತಿದ್ದಾರೆ ಎಂಬ ಆರೋಪವೂ ಇದೆ. ಯಾರೊಬ್ಬರಿಗೂ ಬಡ ರೋಗಿಗಳ ಬಗ್ಗೆ ಚಿಂತೆಯೇ ಇಲ್ಲ. ಆಸ್ಪತ್ರೆಯೊಳಗಿರುವ ಅವ್ಯವಸ್ಥೆಯನ್ನು ಗುರುತಿಸಿ ಅಧಿಕಾರಿಗಳಿಗೆ ಬಿಸಿಮುಟ್ಟಿಸುವ ಕೆಲಸ ಯಾರೊಬ್ಬರಿಂದಲೂ ಆಗುತ್ತಿಲ್ಲ. ಆಸ್ಪತ್ರೆಯ ಅಧಿಕಾರಿಗಳ ಮೇಲೆ ಯಾರೊಬ್ಬರಿಗೂ ಹಿಡಿತವಿಲ್ಲದ ಕಾರಣ ವೈದ್ಯಾಧಿಕಾರಿಗಳೇ ಸುಪ್ರೀಂ ಆಗಿದ್ದಾರೆ.

ಸುಸ್ಥಿತಿಯಲ್ಲಿಡುವುದಕ್ಕೆ ಕ್ರಮ
''ಪ್ರಸೂತಿ ಶಸ್ತ್ರಚಿಕಿತ್ಸಾ ವಿಭಾಗದ ಕೊಠಡಿ ದುಸ್ಥಿತಿಯಲ್ಲಿರುವುದು ನಿಜ. ಆ ಕಟ್ಟಡಕ್ಕೆ ಕ್ಯಾನೋಪಿ ಅಳವಡಿಸಲು ನಿರ್ಮಿತಿ ಕೇಂದ್ರಕ್ಕೆ ಜವಾಬ್ದಾರಿ ನೀಡಲಾಗಿದೆ. ಅದರ ಅಂದಾಜುಪಟ್ಟಿಯನ್ನು ತಯಾರಿಸಲಾಗುತ್ತಿದ್ದು, ಅದನ್ನು ಸರ್ಕಾರದ ಮುಂದಿಟ್ಟು ಅನುಮತಿ ಪಡೆಯುವುದರೊಂದಿಗೆ ಶಸ್ತ್ರಚಿಕಿತ್ಸಾ ವಿಭಾಗವನ್ನು ಸುಸ್ಥಿತಿಗೆ ತರಲಾಗುವುದು'' ಎಂದು ಮಿಮ್ಸ್ ನಿರ್ದೇಶಕ ಡಾ.ಬಿ.ಜೆ.ಮಹೇಂದ್ರ ತಿಳಿಸಿದ್ದಾರೆ.
''ಕೊರೊನಾ ಕಾರಣದಿಂದ ಪ್ರಸೂತಿ ಶಸ್ತ್ರ ಚಿಕಿತ್ಸಾ ವಿಭಾಗದಲ್ಲಿ ಆಪರೇಷನ್ ನಡೆಸಲಾಗುತ್ತಿರಲಿಲ್ಲ. ಈಗಷ್ಟೇ ಆಪರೇಷನ್‌ಗಳನ್ನು ಪುನಾರಂಭಿಸಲಾಗಿದೆ. ಇಡೀ ವಿಭಾಗವನ್ನು ಉತ್ತಮ ಸ್ಥಿತಿಯಲ್ಲಿಡುವುದಕ್ಕೆ ಮಿಮ್ಸ್ ನಿರ್ದೇಶಕರು ವಿಶೇಷ ಆಸಕ್ತಿ ವಹಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಹೋಗಲಿದೆ'' ಎಂದು ಮಿಮ್ಸ್ ಆಸ್ಪತ್ರೆ ಆರ್‌ಎಂ ಡಾ.ವೆಂಕಟೇಶ್ ಮಾಹಿತಿ ನೀಡಿದ್ದಾರೆ.












Click it and Unblock the Notifications