ಆರ್.ಅಶೋಕ್ ಆರೋಪಕ್ಕೆ ಮಂಡ್ಯ ಎಸ್‌ಪಿ ಕೌಂಟರ್
ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶೋತ್ಸವ ಮೆರವಣಿಗೆ ವೇಳೆ ನಡೆದಿರುವ ಕಲ್ಲು ತೂರಾಟ ಹಾಗೂ ಗಲಭೆ ಪ್ರಕರಣವು ರಾಜ್ಯ ಸರ್ಕಾರ ಹಾಗೂ ಬಿಜೆಪಿ ನಡುವಿನ ಕಿತ್ತಾಟಕ್ಕೆ ಕಾರಣವಾಗಿತ್ತು. ಈ ಘಟನೆ ಮಾತನಾಡಿದ್ದ ವಿಪಕ್ಷ ನಾಯಕ ಆರ್.ಅಶೋಕ್ ಅವರು, ನಾಗಮಂಗಲ ಕೋಮುಗಲಭೆ ವೇಳೆ ಪಾಕ್ ಪರ ಘೋಷಣೆ ಕೂಗಿದ್ದರು ಎಂಬ ಅನುಮಾನ ವ್ಯಕ್ತಪಡಿಸಿದ್ದರು. ಇದಕ್ಕೆ ಮಂಡ್ಯ ಎಸ್‌ಪಿ ಕೂಡ ಟ್ವೀಟ್ ಮೂಲಕ ಅಶೋಕ್ ಅವರಿಗೆ ಕೌಂಟರ್ ನೀಡಿದ್ದಾರೆ.
ಘಟನೆ ಬಗ್ಗೆ ಟ್ವೀಟ್ ಮಾಡಿದ್ದ ಆರ್.ಅಶೋಕ್, ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಕೋಮುಗಲಭೆಯಲ್ಲಿ ಮೂವರು ಕಿಡಿಗೇಡಿಗಳು ಪಾಕಿಸ್ತಾನ ಜಿಂದಾಬಾದ್ ಘೋಷಣೆಗಳು ಕೂಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಿದ್ದು, ಈ ಕೋಮುದಳ್ಳುರಿಯಲ್ಲಿ ನಿಷೇಧಿತ ಸಂಘಟನೆಗಳ ಕೈವಾಡವಿರುವ ಅನುಮಾನ ಮತ್ತಷ್ಟು ಗಟ್ಟಿಯಾಗಿತ್ತಿದೆ ಎಂದಿದ್ದರು.

ಇದರ ಬೆನ್ನಲ್ಲೇ ಚಿಕ್ಕಮಗಳೂರಲ್ಲಿ ಬೈಕ್‌ನಲ್ಲಿ ಪ್ಯಾಲೆಸ್ತೀನ್ ಧ್ವಜ ಹಿಡಿದು ಪುಂಡಾಟ ಹಾಗೂ ದಾವಣಗೆರೆಯ ಗಾಂಧಿನಗರ ಹಾಗೂ ಅಹ್ಮದ್ ನಗರಗಳಲ್ಲಿ ಹಿಂದೂ ಯುವಕರು ಬಾವುಟ ಕಟ್ಟಿದ್ದಕ್ಕೆ ಮತಾಂಧ ಪುಂಡರು ಅವರ ಮೇಲೆ ಹಲ್ಲೆ ಮಾಡಿರುವುದು, ಇವನ್ನೆಲ್ಲಾ ಗಮನಿಸುತ್ತಿದ್ದರೆ ಈ ಪ್ರಚೋದನಕಾರಿ ಘಟನೆಗಳು ಗಣೇಶೋತ್ಸವವನ್ನೇ ಟಾರ್ಗೆಟ್ ಮಾಡಿರುವಂತಿದೆ ಎಂದು ಆರ್.ಅಶೋಕ್ ಟ್ವಿಟರ್‌ನಲ್ಲಿ ಎರಡು ವಿಡಿಯೋಗಳನ್ನು ಕೂಡ ಹಂಚಿಕೊಂಡಿದ್ದರು.
ಇಂತಹ ಘಟನೆಗಳು ಅಯೋಧ್ಯ ರಾಮಮಂದಿರದ ಉದ್ಘಾಟನೆ ಸಂದರ್ಭದಲ್ಲಿಯೂ ನಡೆದಿತ್ತು. ಹಿಂದೂಗಳ ಹಬ್ಬಗಳು, ಉತ್ಸವಗಳು, ಸಂಭ್ರಮಾಚರಣೆಗಳನ್ನೇ ಗುರಿಯಾಗಿಸಿ ರಾಜ್ಯಾದ್ಯಂತ ನಡೆಸುತ್ತಿರುವ ಇಂತಹ ದುಷ್ಕೃತ್ಯಗಳ ಹಿಂದೆ ಮತೀಯ ಮೂಲಭೂತವಾದಿ ಸಂಘಟನೆಗಳ ದೊಡ್ಡ ಜಾಲವೇ ಇರುವಂತಿದೆ ಎಂದು ಸಂಶಯ ವ್ಯಕ್ತಪಡಿಸಿದ್ದರು.

ಅಂತರರಾಜ್ಯ, ಅಂತರಾಷ್ಟ್ರೀಯ ನಂಟು ಹೊಂದಿರುವ ಇಂತಹ ವ್ಯವಸ್ಥಿತ, ಪ್ರಾಯೋಜಿತ, ಜಾಲವನ್ನ ಬೇಧಿಸುವುದು ಸ್ಥಳೀಯ ಪೊಲೀಸರಿಂದ ಅಸಾಧ್ಯವಾಗಿದ್ದು, ಕೂಡಲೇ ಈ ಪ್ರಕರಣಗಳನ್ನ NIA ತನಿಖೆಗೆ ಒಪ್ಪಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದರು.
ಮಂಡ್ಯ ಎಸ್‌ಪಿ ಹೇಳಿದ್ದೇನು?: ಆರ್.ಅಶೋಕ್ ಅವರ ಆರೋಪಕ್ಕೆ ಟ್ವೀಟ್‌ನಲ್ಲೇ ಉತ್ತರ ನೀಡಿರುವ ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಬಾಲದಂಡಿ, ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಗಲಭೆಯ ಸಂಬಂಧ ನಾಗಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ, ವಿವಿಧ ಆಯಾಮಗಳಲ್ಲಿ ದೊರೆತಂತಹ ಸಿಸಿಟಿವಿ ಫೂಟೇಜ್ ಹಾಗೂ ಇತರೆ ತಾಂತ್ರಿಕ ವಿಧಾನಗಳ ಸಹಾಯದಿಂದ ಪ್ರಕರಣಗಳ ತನಿಖೆಯು ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ.
ಈ ಮೇಲ್ಕಂಡ ವಿಡಿಯೋಗಳನ್ನು ಪರಿಶೀಲಿಸಲಾಗಿ ಸದರಿ ಘಟನೆಗಳು ದಾವಣೆಗೆರೆ ಮತ್ತು ಚಿಕ್ಕಮಗಳೂರಿನಲ್ಲಿ ನಡೆದಿದ್ದು, ಈ ಸಂಬಂಧ ಸದರಿ ಜಿಲ್ಲೆಗಳಲ್ಲಿ ಪ್ರಕರಣಗಳು ದಾಖಲಾಗಿರುತ್ತವೆ. ಮೇಲ್ಕಂಡ ವಿಡಿಯೋಗಳಿಗೂ ನಾಗಮಂಗಲದ ನಡೆದಿರುವ ಘಟನೆಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ನೇಮಿಸಿದ್ದ ಸತ್ಯಶೋಧನಾ ಸಮಿತಿ ಸದಸ್ಯರು ಇಂದು ಮಂಡ್ಯ ಜಿಲ್ಲೆಯ ನಾಗಮಂಗಲಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿ ಗಲಭೆ ನಡೆದಿರುವ ಸ್ಥಳದಲ್ಲಿ ಸತ್ಯಾಸತ್ಯತೆ ಪರಿಶೀಲಿಸಿ ವರದಿ ಸಲ್ಲಿಸಲು ಮುಂದಾಗಿದ್ದಾರೆ.












Click it and Unblock the Notifications