ಕೆಆರ್‌ಎಸ್ ಬೃಂದಾವನದಲ್ಲಿ ಕೊನೆಗೂ ಬೋನಿಗೆ ಬಿದ್ದ ಚಿರತೆ, ನಷ್ಟದ ವಿವರ ಇಲ್ಲಿದೆ
ಮಂಡ್ಯ, ಡಿಸೆಂಬರ್, 28: ಕಳೆದ ಎರಡು ತಿಂಗಳಿನಿಂದ ಕೆಆರ್‌ಎಸ್ ಜಲಾಶಯದ ಬೃಂದಾವನದಲ್ಲಿ ಸ್ಥಳೀಯರು ಹಾಗೂ ಪ್ರವಾಸಿಗರಿಗೆ ಭಯ ಹುಟ್ಟಿಸಿದ್ದ ಚಿರತೆ ಕೊನೆಗೂ ಬಲೆಗೆ ಬಿದ್ದಿದೆ.
ಕಳೆದ ತಿಂಗಳು ಜಲಾಶಯದ ಮೇಲೆ ಹಾಗೂ ಬೃಂದಾವನದ ದಕ್ಷಿಣ ಗೇಟ್‌ನಲ್ಲಿ ಕಾಣಿಸಿಕೊಂಡಿದ್ದ ಚಿರತೆ ಪ್ರವಾಸಿಗರು, ಹಾಗೂ ಸ್ಥಳೀಯರಿಗೆ ಆತಂಕ ಸೃಷ್ಟಿಸಿತ್ತು. ಚಿರತೆ ಸೆರೆಗೆ ಅರಣ್ಯ ಇಲಾಖೆಯವರು ಕೂಬಿಂಗ್, ಸಿಸಿ ಕ್ಯಾಮೆರಾ ಹಾಗೂ ಎಂಟು ಕಡೆ ಬೋನು ಇರಿಸಿದ್ದರು. ಆದರೂ ಕೂಡ ಅರಣ್ಯ ಇಲಾಖೆಯ ಸಿಬ್ಬಂದಿಗಳ ಕಣ್ತಪ್ಪಿಸಿಕೊಂಡು ಚಿರತೆ ಒಡಾಡುತ್ತಿತ್ತು. ಹಾಗೆಯೇ ಆಗಾಗ ಕಾಣಿಸಿಕೊಂಡು ಪ್ರವಾಸಿಗರಿಗೆ ಭಯ ಹುಟ್ಟಿಸಿತ್ತು. ಚಿರತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪ್ರವಾಸಿಗರ ಹಿತದೃಷ್ಟಿಯಿಂದ ಅರಣ್ಯ ಇಲಖೆ ಬೃಂದಾವನವನ್ನು ಬಂದ್ ಮಾಡಿತ್ತು. ಬೃಂದಾವನ ಬಂದ್ ಆಗಿದ್ದರಿಂದ ಸುಮಾರು 75 ಲಕ್ಷ ರೂಪಾಯಿಗೂ ಹೆಚ್ಚು ನಷ್ಟ ಉಂಟಾಗಿತ್ತು ಎಂದು ಅಲ್ಲಿನ ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದರು. ಚಿರತೆ ದಿನಗಳ ಕಾಲ ಕಾಣದಿದ್ದರಿಂದ ಬೃಂದಾವನಕ್ಕೆ ಪ್ರವಾಸಿಗರ ನಿರ್ಬಂಧವನ್ನು ತೆರವುಗೊಳಿಸಲಾಗಿತ್ತು.
75 ಲಕ್ಷ ರೂಪಾಯಿಗೂ ಹೆಚ್ಚು ನಷ್ಟ
ಆದರೂ ಕೂಡ ಪ್ರವಾಸಿಗರು ಚಿರತೆ ಆಗಾಗ ಕಾಣಿಸಿಕೊಳ್ಳುತ್ತಿದ್ದ ಕಾರಣ ಆತಂಕಕ್ಕೆ ಒಳಗಾಗಿ ಬೃಂದಾವನದ ಕಡೆಗೆ ಬರುವುದನ್ನು ನಿಲ್ಲಿಸಿದ್ದರು. ಇದರಿಂದ ಬೃಂದಾವನಕ್ಕೆ 75 ಲಕ್ಷ ರೂಪಾಯಿಗೂ ಹೆಚ್ಚು ನಷ್ಟವಾಗಿತ್ತು ಎಂದು ತಿಳಿದುಬಂದಿತ್ತು. ಆದರೆ ಇದೀಗ ಬುಧವಾರ (ಡಿಸೆಂಬರ್ 28) ಮುಂಜಾನೆ ಬೃಂದಾವನ ಬಳಿ ಇರಿಸಿದ್ದ ಬೋನಿಗೆ ಚಿರತೆ ಬಿದ್ದಿದ್ದು, ಅಲ್ಲಿನ ಸ್ಥಳೀರು ಹಾಗೂ ಪ್ರವಾಸಿಗರು ನಿಟ್ಟುಸಿರು ಬಿಟ್ಟಿದ್ದಾರೆ. ಹಾಗೆಯೇ ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದ ಚಿರತೆಯನ್ನು ಕಾಡಿಗೆ ಬಿಡಲು ಮುಂದಾಗಿದ್ದಾರೆ.

ಮಂಡ್ಯ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿರುವ ಕೆಆರ್‌ಎಸ್ ಬೃಂದಾವನದಲ್ಲಿ ಇತ್ತೀಚೆಗಷ್ಟೇ ಚಿರತೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಕಳೆದ ನವೆಂಬರ್ 6 ರಿಂದ ಅಂದರೆ ಸುಮಾರು 17 ದಿನಗಳಿಂದ ಬೃಂದಾವನ ಉದ್ಯಾನವನವನ್ನು ಬಂದ್ ಮಾಡಲಾಗಿತ್ತು. ಇದರಿಂದ ಕಾವೇರಿ ನೀರಾವರಿ ನಿಗಮಕ್ಕೆ 50 ಲಕ್ಷಕ್ಕೂ ರೂಪಾಯಿಗೂ ಹೆಚ್ಚು ನಷ್ಟ ಉಂಟಾಗಿತ್ತು. ಜೊತೆಗೆ ಚಿರತೆಯನ್ನು ಇನ್ನು ಹಿಡಿದಿಲ್ಲ ಎಂದು ಅರಣ್ಯ ಇಲಾಖೆ ವಿರುದ್ಧ ಪ್ರವಾಸಿಗರು, ಸ್ಥಳೀಯರು ಕೆಂಡಕಾರಿದ್ದರು.
ಆತಂಕ ವ್ಯಕ್ತಪಡಿಸಿದ್ದ ಹೋಟೆಲ್ ಮಾಲೀಕರು
ಅಕ್ಟೋಬರ್ 21ರಿಂದ ಬೃಂದಾವನ ಗಾರ್ಡನ್ನಲ್ಲಿ ಚಿರತೆ ನಾಲ್ಕು ಬಾರಿ ಕಾಣಿಸಿಕೊಂಡಿತ್ತು. ಹೀಗಾಗಿ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ನವೆಂಬರ್ 6ರಿಂದ ಚಿರತೆ ಸೆರೆ ಹಿಡಿಯುವವರೆಗೂ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧವನ್ನು ಹೇರಿದ್ದರು. ಅಲ್ಲದೆ ಪ್ರಮುಖ ತಾಣವಾದ ಬೃಂದಾವನಕ್ಕೆ ವಾರದ ದಿನಗಳಲ್ಲಿ 3 ಸಾವಿರಕ್ಕೂ ಹೆಚ್ಚು ಜನ ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಬೃಂದಾವನ ಪ್ರವೇಶಕ್ಕೆ ಪ್ರವಾಸಿಗರಿಗೆ ತಲಾ 50 ರೂಪಾಯಿ ಶುಲ್ಕವನ್ನು ನಿಗದಿಪಡಿಸಲಾಗಿದೆ. 17 ದಿನಗಳಿಂದ ಪ್ರವೇಶ ನಿರ್ಬಂಧ ಆಗಿರುವ ಕಾರಣ ನಿಗಮಕ್ಕೆ ಆದಾಯ ಬರುತ್ತಿಲ್ಲ. ಮತ್ತೊಂದೆಡೆ ಇಷ್ಟು ದಿನ ಕಳೆದರೂ ಚಿರತೆ ಹಿಡಿಯುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದರು. ಸದ್ಯ ನಿಗಮದ ಸಿಬ್ಬಂದಿ, ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕೆಆರ್‌ಎಸ್‌ನ ಬೃಂದಾವನ ಪ್ರವಾಸಿಗರನ್ನೇ ನಂಬಿ ಕುಳಿತಿದ್ದ ನೂರಾರು ವ್ಯಾಪಾರಿಗಳಿಗೆ ತುಂಬಾ ನಷ್ಟವಾದಂತಾಗಿತ್ತು.












Click it and Unblock the Notifications