KRS Dam: ಕೆಆರ್‌ಎಸ್ ಜಲಾಶಯದಿಂದ 1.70 ಲಕ್ಷ ಕ್ಯೂಸೆಕ್ಸ್ ಹೊರಹರಿವು; ಪ್ರವಾಹದ ಆತಂಕ
ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣರಾಜಸಾಗರ ಜಲಾಶಯಕ್ಕೆ ಒಳಹರಿವು ಪ್ರಮಾಣ ಹೆಚ್ಚಾಗುತಿದೆ. ಕೆಆರ್‌ಎಸ್ ಜಲಾಶಯದಿಂದ 1,70,000 ಕ್ಯೂಸೆಕ್ಸ್ ಹೊರಹರಿವು (Out flow) ನೀರನ್ನು ನದಿಗೆ ಬಿಡಲಾಗುತ್ತಿದೆ. ಜಲಾಶಯದ ಒಳಹರಿವು ಮತ್ತಷ್ಟು ಹೆಚ್ಚಾದರೆ, 2 ಲಕ್ಷ ಕ್ಯೂಸೆಕ್ಸ್ ನೀರು ಹೊರಬಿಡುವ ಸಾಧ್ಯತೆ ಇದೆ.
ಕಾವೇರಿ ನದಿ ಪಾತ್ರದಲ್ಲಿನ ಸಾರ್ವಜನಿಕರು ಸ್ವಯಂ ಮುಂಜಾಗ್ರತೆ ವಹಿಸುವುದು. ಕಾವೇರಿ ನದಿ ಪಾತ್ರಕ್ಕೆ ಅಥವಾ ತಗ್ಗು ಪ್ರದೇಶಗಳಿಗೆ ಭೇಟಿ ನೀಡುವುದನ್ನು ಕಡ್ಡಾಯವಾಗಿ ನಿಷೇದಿಸುವುದು. ನದಿಪಾತ್ರದಲ್ಲಿ ಮತ್ತು ತಗ್ಗು ಪ್ರದೇಶಗಳಲ್ಲಿರುವ ರೈತರು ಕೃಷಿ ಚಟುವಟಿಕೆಗಳಿಗೆ ಹೋಗದಂತೆ ಹಾಗೂ ಜಾನುವಾರುಗಳನ್ನು ಬಿಡದಂತೆ ಸೂಚನೆ ನೀಡಲಾಗಿದೆ.

ನದಿಪಾತ್ರದಲ್ಲಿ ಮತ್ತು ಸೇತುವೆ ಇನ್ನಿತರ ಪ್ರೇಕ್ಷಣಿಯ ಸ್ಥಳಗಳಿಗೆ ಭೇಟಿ ನೀಡುವುದು, ನೀರಿನಲ್ಲಿ ಈಜುವುದು ಹಾಗೂ ಸೆಲ್ಫಿ ತೆಗೆಯುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ತಾಲ್ಲೂಕು ಆಡಳಿತದ ವತಿಯಿಂದ ಈಗಾಗಲೇ ಮುನ್ನೆಚ್ಚರಿಕಾ ಕ್ರಮವಾಗಿ ಕೈಗೊಂಡಿರುವ ವ್ಯಾಪಕ ಪ್ರಚಾರಗಳನ್ನು ಹಾಗೂ ಅಪಾಯಕಾರಿ ಸ್ಥಳಗಳಲ್ಲಿ ಅಳವಡಿಸಿರುವ ಸೂಚನಾ ಫಲಕಗಳನ್ನು ಗಮನಿಸಬೇಕೆಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಡಾ. ಕುಮಾರ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಸೇತುವೆ ಮುಳುಗಡೆ
ಧಾರಾಕಾರ ಮಳೆಯಿಂದ ಕೆಆರ್‌ಎಸ್ ಜಲಾಶಯದಿಂದ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಇದರಿಂದ ತಿ.ನರಸೀಪುರದ ಹೆಮ್ಮಿಗೆ ಸೇತುಗೆ ಮುಳುಗಿದೆ. ನಂಜನಗೂಡಿನಲ್ಲೂ 4 ಹಾಗೂ ಎಚ್.ಡಿ.ಕೋಟೆಯಲ್ಲೂ ಮೂರು ಸೇತುವೆ ಮುಳುಗಿದೆ. ಮುಂಜಾಗ್ರತಾ ಕ್ರಮವಾಗಿ ಕಾಳಜಿ ಕೇಂದ್ರ ತೆರೆಯಲಾಗಿದೆ. ಸೇತುವೆ ಹಾಗೂ ನದಿಪಾತ್ರದ ಬಳಿ ಸಾರ್ವಜನಿಕರ ಓಡಾಟವನ್ನು ನಿಷೇಧಿಸಲಾಗಿದೆ.












Click it and Unblock the Notifications