ಜನರ ಹಣವನ್ನು ಮೋದಿ ಸರ್ಕಾರ ಪಿಕ್‌ಪಾಕೆಟ್ ಮಾಡುತ್ತಿದೆ
ಮಂಡ್ಯ, ಜೂನ್ 15: "ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ವರ್ಷದಲ್ಲಿ 17 ಬಾರಿ ತೈಲ ಬೆಲೆ ಹೆಚ್ಚಳ ಮಾಡುವ ಮೂಲಕ ಜನರ ಹಣವನ್ನು ಪಿಕ್‌ಪಾಕೆಟ್ ಮಾಡಲು ಮುಂದಾಗಿದೆ," ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಟೀಕಿಸಿದರು.
ಮಂಡ್ಯ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಖಂಡಿಸಿ ತಾಲ್ಲೂಕಿನ ಯಲಿಯೂರು ಸರ್ಕಲ್‌ನ ಪೆಟ್ರೋಲ್ ಬಂಕ್ ಮುಂದೆ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಪ್ರತಿಭಟನೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭಾಗವಹಿಸಿದ್ದರು.
ಕರ್ನಾಟಕದ 15 ಜಿಲ್ಲೆಗಳಲ್ಲಿ ಮತ್ತೆ ಪೆಟ್ರೋಲ್ ಬೆಲೆ 100 ರು ಗೂ ಅಧಿಕ
"ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ನಿರಂತರವಾಗಿ ಇಂಧನ ಬೆಲೆ ಹೆಚ್ಚಳ ಮಾಡುವ ಮೂಲಕ ಜನಸಾಮಾನ್ಯರ ಬದುಕಿನ ಮೇಲೆ ಬರೆ ಎಳೆಯುತ್ತಿದೆ," ಎಂದು ಕಿಡಿಕಾರಿದರು.
"ಇಂಧನ ಬೆಲೆ ಏರಿಕೆ ಮಾಡುವವರು ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ವೇತನ ಏಕೆ ಮಾಡಲಿಲ್ಲವೆಂದು ಪ್ರಶ್ನಿಸಿದ ಡಿಕೆಶಿ, ಸರ್ಕಾರಿ ನೌಕರರ ಸಂಬಳವನ್ನೂ ಏರಿಕೆ ಮಾಡಬೇಕಿತ್ತು. ಜನರ ಹಣವನ್ನು ಈ ರೀತಿ ಲೂಟಿ ಮಾಡುವ ಪ್ರಯತ್ನಕ್ಕೆ ಕೈ ಹಾಕಬಾರದು," ಎಂದು ಟೀಕಿಸಿದರು.
"ಅಮೆರಿಕದಂತಹ ದೇಶದಲ್ಲಿ ಇಂಧನ ಬೆಲೆ ಭಾರತಕ್ಕೆ ಹೋಲಿಸಿದರೆ ಶೇ. 60ರಷ್ಟು ಮಾತ್ರ ಇದೆ. ಅಕ್ಕ ಪಕ್ಕದ ಬಾಂಗ್ಲಾದೇಶ, ಬರ್ಮಾ ಸೇರಿದಂತೆ ಸಣ್ಣ ಪುಟ್ಟ ರಾಷ್ಟ್ರಗಳಲ್ಲಿ ಇಂಧನ ಬೆಲೆ ಕಡಿಮೆ ಇದೆ. ಹೀಗಿರುವಾಗ ನಮ್ಮ ದೇಶದಲ್ಲಿ ಯಾಕೆ ಹೆಚ್ಚು ಮಾಡಿದ್ದೀರಿ," ಎಂದು ಪ್ರಶ್ನಿಸಿದರು.

ರಾಮ ಮಂದಿರ ಭೂಮಿ ಖರೀದಿಯಲ್ಲಿ ಹಗರಣ
"ರಾಮ ಮಂದಿರ ನಿರ್ಮಾಣದ ಭೂಮಿ ಖರೀದಿಯಲ್ಲಿ ದೊಡ್ಡ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದ್ದು, ಇದು ಇಡೀ ದೇಶ ಹಾಗೂ ಜನರ ಭಾವನೆಗೆ ಮಾಡಿರುವ ಅಪಮಾನ. ಈ ಹಗರಣದಲ್ಲಿ ಭಾಗಿಯಾದವರಿಗೆ ಶಿಕ್ಷೆಯಾಗಬೇಕೆಂದು," ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒತ್ತಾಯಿಸಿದ್ದಾರೆ.
"ರಾಮ ಮಂದಿರ ನಿರ್ಮಾಣಕ್ಕಾಗಿ ಹಳ್ಳಿ, ಹಳ್ಳಿಗಳಲ್ಲಿ ಜನ ದೇಣಿಗೆ ಸಂಗ್ರಹಿಸಿ ಕೊಟ್ಟಿದ್ದಾರೆ. ಹೀಗಿರುವಾಗ ಇವರು ಭೂಮಿ ಖರೀದಿಯಲ್ಲಿ ಅವ್ಯವಹಾರ ಮಾಡಿ ದ್ರೋಹ ಬಗೆದಿದ್ದಾರೆ. ಇದನ್ನು ಇಡೀ ದೇಶ ಖಂಡಿಸಬೇಕು. ಜನ ಕೊಟ್ಟಿರುವ ದೇಣಿಗೆಯನ್ನು ಹಿಂದಿರುಗಿಸಬೇಕು. ಈ ಹಗರಣದಲ್ಲಿ ಭಾಗಿಯಾದವರನ್ನು ಬಂಧಿಸಿ, ಶಿಕ್ಷೆ ನೀಡಬೇಕು," ಎಂದು ಕೇಂದ್ರ ಹಾಗೂ ಉತ್ತರ ಪ್ರದೇಶ ಸರ್ಕಾರಕ್ಕೆ ಆಗ್ರಹಿಸಿದರು.