ಜೆಡಿಎಸ್ ನಾಯಕರ ಕಾರಿನಲ್ಲಿ ಬಂದು ಮತದಾನ ಮಾಡಿದ ಅಂಬರೀಶ್!
ಮಂಡ್ಯ, ಮೇ 12 : ಮಾಜಿ ಸಚಿವ, ಮಂಡ್ಯ ಕ್ಷೇತ್ರದ ಶಾಸಕ ಅಂಬರೀಶ್ ಮತದಾನ ಮಾಡಿದರು. ಜೆಡಿಎಸ್ ನಾಯಕರ ಕಾರಿನಲ್ಲಿ ಬಂದು ಅಂಬರೀಶ್ ಮತ ಚಲಾವಣೆ ಮಾಡಿದ್ದು ವಿಶೇಷ.
ಡಿ.ಸಿ.ತಮ್ಮಣ್ಣ ಕಾರಿನಲ್ಲಿ ಆಗಮಿಸಿದ ಅಂಬರೀಶ್, ದೊಡ್ಡರಸಿನಕೆರೆಯ ಮತಗಟ್ಟೆ ಸಂಖ್ಯೆ 164ರಲ್ಲಿ ಶನಿವಾರ ತಮ್ಮ ಹಕ್ಕು ಚಲಾಯಿಸಿದರು. ಅಂಬರೀಶ್ ಅವರು ಆಗಮಿಸುತ್ತಿದ್ದಂತೆ ಜೈಕಾರ ಹಾಕಿ ಯುವಕರು ಸ್ವಾಗತಿಸಿದರು.

ಡಿ.ಸಿ.ತಮ್ಮಣ್ಣ ಮದ್ದೂರು ಕ್ಷೇತ್ರದ ಶಾಸಕರು, ಜೆಡಿಎಸ್ ನಾಯಕರು. ಚುನಾವಣಾ ರಾಜಕಾರಣಕ್ಕೆ ನಿವೃತ್ತಿ ಘೋಷಣೆ ಮಾಡಿರುವ ಅಂಬರೀಶ್ ಜೆಡಿಎಸ್ ಬೆಂಬಲಿಸಿದ್ದಾರೆ. ಅಂಬರೀಶ್ ಜೊತೆ ಗುರುತಿಸಿಕೊಂಡಿದ್ದ ಮಂಡ್ಯದ ಹಲವು ನಾಯಕರು ಈಗಾಗಲೇ ಜೆಡಿಎಸ್ ಸೇರಿದ್ದಾರೆ.
ಕಳೆದ ವಾರ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಅಂಬರೀಶ್ ಅವರನ್ನು ಭೇಟಿ ಮಾಡಿ ಜೆಡಿಎಸ್ ಬೆಂಬಲಿಸುವಂತೆ ಮನವಿ ಮಾಡಿದ್ದರು. ಮತದಾನಕ್ಕೆ ಒಂದು ದಿನ ಮೊದಲು ಮಂಡ್ಯದ ಅಂಬರೀಶ್ ಬೆಂಬಲಿಗರು ಜೆಡಿಎಸ್ ಸೇರಿದ್ದರು.
ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಹಂಚಿಕೆ ವೇಳೆ ಭಾರೀ ಹಗ್ಗ-ಜಗ್ಗಾಟ ನಡೆದಿತ್ತು. ಕೊನೆ ಕ್ಷಣದಲ್ಲಿ ಅಂಬರೀಶ್ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ್ದರು. ಗಣಿಗೆ ರವಿ ಅವರಿಗೆ ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ನೀಡಲಾಗಿತ್ತು.












Click it and Unblock the Notifications