• search
  • Live TV
ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶಾಸಕ ನಾರಾಯಣಗೌಡರ ವಿರುದ್ಧ ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆ

|

ಕೃಷ್ಣರಾಜಪೇಟೆ, ಜುಲೈ 15: ಶಾಸಕ ನಾರಾಯಣಗೌಡ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮೈತ್ರಿ ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆ ತರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಜೆಡಿಎಸ್ ಕಾರ್ಯಕರ್ತರು ಶಾಸಕರ ಪ್ರತಿಕೃತಿ ದಹಿಸಿ, ಪ್ರತಿಭಟನಾ ಮೆರವಣಿಗೆ ನಡೆಸಿ ಧಿಕ್ಕಾರ ಕೂಗಿದ್ದಾರೆ.

ಪಟ್ಟಣದಲ್ಲಿ ಜಮಾಯಿಸಿದ ನೂರಾರು ಜೆಡಿಎಸ್ ಕಾರ್ಯಕರ್ತರು ಮೊದಲಿಗೆ ಮುಖ್ಯ ರಸ್ತೆಗಳಲ್ಲಿ ಶಾಸಕರ ಪ್ರತಿಕೃತಿಯನ್ನು ಮೆರವಣಿಗೆ ಮಾಡಿ ನಂತರ ನಗರ ಜೆಡಿಎಸ್ ಕಚೆರಿ ಮತ್ತು ಎಂ.ಕೆ.ಬೊಮ್ಮೇಗೌಡ ವೃತ್ತದಲ್ಲಿ ದಹಿಸಿ ಆಕ್ರೋಶ ಹೊರಹಾಕಿದರು.

ಏನಿದೆಯೋ ಸದನದಲ್ಲಿಯೇ ಎದುರಿಸುತ್ತೇನೆ: ಕುಮಾರಸ್ವಾಮಿ

ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಆರ್.ವೆಂಕಟಸುಬ್ಬೇಗೌಡ, ಜಿಲ್ಲಾ ಪಂಚಾಯ್ತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಟಿ.ಮಂಜು, ಸದಸ್ಯ ಬಿ.ಎಲ್.ದೇವರಾಜು, ಮುಖಂಡ ಬಸ್ ಕೃಷ್ಣೇಗೌಡ ಹಾಗೂ ಪುರಸಭಾ ಸದಸ್ಯ ಕೆ.ಎಸ್.ಸಂತೋಷ್‌ಕುಮಾರ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಶಾಸಕ ನಾರಾಯಣಗೌಡರನ್ನು ಹುಡುಕಿ ಕೊಡುವಂತೆ ವಿಧಾನ ಸಭೆಯ ಸ್ಪೀಕರ್ ಮತ್ತು ರಾಜ್ಯಪಾಲರನ್ನು ಒತ್ತಾಯಿಸಿ ತಹಶೀಲ್ದಾರ್ ಎಂ.ಶಿವಮೂರ್ತಿಯವರ ಮೂಲಕ ಮನವಿ ಪತ್ರವನ್ನು ಸಲ್ಲಿಸಿದರು.

ಬಳಿಕ ಪಟ್ಟಣದ ಮೈಸೂರು- ಚನ್ನರಾಯಪಟ್ಟಣ ರಸ್ತೆಯ ಎಂ.ಕೆ.ಬೊಮ್ಮೇಗೌಡ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ರಸ್ತೆ ತಡೆ ಮಾಡಿದರಲ್ಲದೆ, ಶಾಸಕರ ಪ್ರತಿಕೃತಿಗೆ ಚಪ್ಪಲಿಯಿಂದ ಹೊಡೆದು, ಬಳಿಕ ಪ್ರತಿಕೃತಿಯನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾ ಮೆರವಣಿಗೆ ಸಾಗುವ ಮಿನಿ ವಿಧಾನಸೌಧದ ಮಾರ್ಗದ ಮಧ್ಯದಲ್ಲೇ ಸಿಗುವ ಶಾಸಕರ ಗೃಹ ಕಚೇರಿ ಹಾಗೂ ನಗರ ಜೆಡಿಎಸ್ ಕಚೇರಿಗೆ ಅಳವಡಿಸಿದ್ದ ಬೃಹತ್ ಗಾತ್ರದ ನಾಮಫಲಕವನ್ನು ಕಿತ್ತು ಹಾಕಿದರಲ್ಲದೆ, ಕಚೇರಿಯೊಳಕ್ಕೆ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು ತಡೆದು ಮೆರವಣಿಗೆ ಮುಂದಕ್ಕೆ ಸಾಗಲು ಸೂಚಿಸಿದರು. ಆ ನಂತರ ಮಿನಿ ವಿಧಾನಸೌಧದ ಮುಂಭಾಗ ಮುಖ್ಯ ದ್ವಾರದ ಮೆಟ್ಟಿಲುಗಳ ಮೇಲೆ ಕುಳಿತು ಪ್ರತಿಭಟನಾ ಸತ್ಯಾಗ್ರಹ ನಡೆಸಿ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

ಈ ವೇಳೆ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಆರ್.ವೆಂಕಟಸುಬ್ಬೇಗೌಡ, "ತಾಲ್ಲೂಕಿನ ಮಾನ ಮರ್ಯಾದೆಯನ್ನು ಹರಾಜು ಹಾಕಿ ಹಣಕ್ಕೆ ಮಾರಾಟವಾಗಿರುವ ಶಾಸಕರು ತಾಲ್ಲೂಕು ಕಂಡ ಅತ್ಯಂತ ಕೆಟ್ಟ ರಾಜಕಾರಣಿಗಳಲ್ಲಿ ಮೊದಲಿಗರಾಗಿದ್ದಾರೆ. ತಮ್ಮನ್ನೇ ನಂಬಿದ್ದ ಕಾರ್ಯಕರ್ತರನ್ನು ನಡು ನೀರಿನಲ್ಲಿ ಬಿಟ್ಟು ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ವರ್ಗ ಹಾಗೂ ಅವರ ಹೆಣ್ಣು ಮಕ್ಕಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ" ಎಂದು ದೂರಿದರು.

ಅತೃಪ್ತರ ಕರೆತರಲು ಮುಂಬೈಗೆ ತೆರಳಲಿದ್ದಾರೆ ಖರ್ಗೆ, ದೇವೇಗೌಡ

ಪ್ರತಿಭಟನೆಯಲ್ಲಿ ಜಿಲ್ಲಾ ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಟಿ.ಮಂಜು, ರಾಜ್ಯ ಮೈಸೂರು ಲ್ಯಾಂಪ್ಸ್ ಸಂಸ್ಥೆಯ ಮಾಜಿ ಅಧ್ಯಕ್ಷ ಬಿ.ಎಲ್.ದೇವರಾಜು, ಪುರಸಭೆಯ ಸದಸ್ಯ ಸಂತೋಷ್‌ಕುಮಾರ್, ರಾಜ್ಯ ಮುಖಂಡರಾದ ಬಸ್ ಕೃಷ್ಣೇಗೌಡ, ರಾಜೇನಹಳ್ಳಿ ಕುಮಾರಸ್ವಾಮಿ, ಜಿಲ್ಲಾ ಪಂಚಾಯ್ತಿ ಸದಸ್ಯ ರಾಮದಾಸ್, ಎ.ಪಿ.ಎಂ.ಸಿ. ಅಧ್ಯಕ್ಷ ನಾಗರಾಜೇಗೌಡ, ಮಾಜಿ ಅಧ್ಯಕ್ಷ ಎಂ.ಪಿ.ಲೋಕೇಶ್, ನಿರ್ದೇಶಕ ಐನೋರಹಳ್ಳಿ ಮಲ್ಲೇಶ್, ಸಂಗಾಪುರ ಶಶಿಧರ್, ತಾಲ್ಲೂಕು ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ರಾಜು, ಸದಸ್ಯ ವಿಜಯ್‌ಕುಮಾರ್, ಶಾರದಾ ಕೃಷ್ಣೇಗೌಡ, ಮುಖಂಡರಾದ ಅಂಬಿಗರಹಳ್ಳಿ ಶಿವರಾಮ್, ಬಂಡಿಹೊಳೆ ಜಯರಾಮೇಗೌಡ, ಟಿ.ಎ.ಪಿ.ಸಿ.ಎಂ.ಎಸ್. ನಿರ್ದೇಶಕ ಲೋಕೇಶ್, ಮುಖಂಡ ಬೋಳಮಾರನಹಳ್ಳಿ ಮಂಜುನಾಥ್, ಯುವ ಮುಖಂಡ ಸಚ್ಚಿನ್ ಕೃಷ್ಣ, ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

ಜೆಡಿಎಸ್ ಕೆಲ ಮುಖಂಡರು ಗೈರು: ಶಾಸಕರ ವಿರುದ್ಧ ನಡೆದ ಪ್ರತಿಭಟನಾ ಮೆರವಣಿಗೆ ಹಾಗೂ ಸಭೆಯಲ್ಲಿ ಬಹುತೇಕ ಜೆಡಿಎಸ್ ಮುಖಂಡರು ಗೈರುಹಾಜರಾಗಿದ್ದು ಎದ್ದುಕಾಣುತ್ತಿತ್ತು. ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಜಾನಕೀರಾಂ, ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಗಾಯತ್ರಿ, ಮಾಜಿ ಅಧ್ಯಕ್ಷೆ ಜೆ.ಪ್ರೇಮಕುಮಾರಿ, ರಾಜಾಹುಲಿ ದಿನೇಶ್, ಪುರಸಭೆಯ ಹನ್ನೆರಡು ಸದಸ್ಯರ ಪೈಕಿ ಸಂತೋಷ್ ಹೊರತುಪಡಿಸಿ ಉಳಿದ ಯಾವುದೇ ಸದಸ್ಯರು ಭಾಗವಹಿಸದಿರುವುದು ಕಂಡು ಬಂದಿತು.

English summary
Jds activists protest against legislator narayanagowda in kr pete. Narayanagowda is threatening the existance of coaltion government by his resignation alleged jds activists.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X