ನಿಖಿಲ್ ಕುಮಾರಸ್ವಾಮಿ ಗೆದ್ದರೆ ಅಂಬರೀಶ್ ಆತ್ಮಕ್ಕೆ ಶಾಂತಿ: ಡಿಕೆಶಿ
ಮಂಡ್ಯ, ಮಾರ್ಚ್ 25: ಅಂಬರೀಶ್ ಆತ್ಮಕ್ಕೆ ಶಾಂತಿ ಸಿಗಬೇಕು ಎಂದರೆ ನಿಖಿಲ್ ಕುಮಾರಸ್ವಾಮಿ ಅವರಿಗೆ ಮತ ಹಾಕಿ ಗೆಲ್ಲಿಸಬೇಕು ಎಂದು ಸಚಿವ ಡಿ.ಕೆ.ಶಿವಕುಮಾರ್ ಅವರು ಮಂಡ್ಯ ಮತದಾರರಿಗೆ ಕರೆ ನೀಡಿದರು.
ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಖಿಲ್ ಎಲ್ಲಿಂದ ಬೇಕಾದರೂ ಸ್ಪರ್ಧಿಸಬಹುದಾಗಿತ್ತು, ಆದರೆ ನಮ್ಮ ಪ್ರತಿನಿಧಿಯಾಗಿ ಅವರು ಸಂಸತ್‌ಗೆ ಹೋಗಬೇಕು ಎಂದು ಮಂಡ್ಯದ ಕಾರ್ಯಕರ್ತರು ಒತ್ತಾಯ ಮಾಡಿದ್ದಾರೆ ಎಂದು ಅವರು ಹೇಳಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ನಮ್ಮನ್ನು ಸಿಎಂ ಮಾಡಿ ಎಂದು ಕುಮಾರಸ್ವಾಮಿ ಕರೆದಿರಲಿಲ್ಲ, ದೇವೇಗೌಡ ಅವರು ಕರೆದಿಲ್ಲ, ರಾಹುಲ್ ಗಾಂಧಿ, ಸಿದ್ದರಾಮಯ್ಯ, ಪರಮೇಶ್ವರ್, ನಾನು, ಖರ್ಗೆ, ಗುಲಾಂ ನಬಿ ಆಜಾದ್ ಎಂದು ಹೇಳಿ ನಾವೇ ಕೋಮುವಾದಿ ಶಕ್ತಿ ತೊಲಗಲಿ ಎಂದು ನಾವೇ ಅನ್ ಕಂಡಿಶನ್ ಆಗಿ ಸರ್ಕಾರ ರಚನೆ ಮಾಡಿದ್ದೇವೆ, ನಾವು ಕೊಟ್ಟಿರುವ ಮಾತನ್ನು ವಾಪಸ್ ತೆಗೆದುಕೊಳ್ಳುವುದಿಲ್ಲ.

'ಕುಮಾರಸ್ವಾಮಿ ಸರ್ಕಾರಕ್ಕೆ ಅಂಬರೀಶ್ ಆಶೀರ್ವದಿಸಿದ್ದರು'
ಅಂಬರೀಶ್ ಅವರ ಬಗ್ಗೆ ಮಾತನಾಡಿದ ಡಿಕೆಶಿ, ಅಂಬರೀಶ್ ಅಣ್ಣ ನನ್ನ ಸ್ನೇಹಿತರು, ಕುಮಾರಸ್ವಾಮಿ ಸರ್ಕಾರ ರಚಿಸಿದಾಗ ಅವರು ಬದುಕಿದ್ದರು, ಅವರಿಗೆ ಅಂಬರೀಶಣ್ಣ ಆಶೀರ್ವಾದ ಮಾಡಿದ್ದರು, ಕುಮಾರಸ್ವಾಮಿ ಸರ್ಕಾರ ಕರ್ನಾಟಕಕ್ಕೆ ಬೇಕು ಎಂದು ಹೇಳಿದ್ದು ನಿಮಗೆ ನೆನಪಿಲ್ಲವೇ ಎಂದು ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ಮಂಡ್ಯಕ್ಕೆ ಅಂಬರೀಶ್ ಮೃತದೇಹ ತಂದಿದ್ದ ಎಚ್‌ಡಿಕೆ
ಅಂಬರೀಶ್ ಅವರ ಮೃತ ದೇಹವನ್ನು ಮಂಡ್ಯಕ್ಕೆ ತಂದಿದ್ದು ಕುಮಾರಸ್ವಾಮಿ, ಅರ್ಧ ರಾತ್ರಿಯಲ್ಲಿ ಅಂಬರೀಶ್ ಅವರ ದೇಹವನ್ನು ಮಂಡ್ಯಕ್ಕೆ ತೆಗೆದುಕೊಂಡು ಹೋಗಬಾರದು ಎಂದು ನಿರ್ಧರಿಸಲಾಗಿತ್ತು, ಆದರೆ ಕುಮಾರಸ್ವಾಮಿ ಅವರೇ ಮುಂದೆ ನಿಂತು ದೇಹವನ್ನು ಮಂಡ್ಯಕ್ಕೆ ತೆಗೆದುಕೊಂಡು ಬಂದರು ಎಂದು ಅವರು ಹೇಳಿದರು.

ಬಳ್ಳಾರಿಯಲ್ಲಿ ಹೇಳಿದ್ದ ಮಾತಿನ ಪುನರಾವರ್ತನೆ
ರಾಮನಗರ, ಮಂಡ್ಯ, ಬಳ್ಳಾರಿಯಲ್ಲಿ ಉಪಚುನಾವಣೆಯಲ್ಲಿ ಎರಡೂ ಪಕ್ಷ ಒಟ್ಟಾಗಿ ಸ್ಪರ್ಧಿಸಿ ಭಾರಿ ಅಂತರದಿಂದ ಗೆದ್ದೆವು, ಅದನ್ನು ಪುನರಾವರ್ತಿಸಬೇಕು ಎಂದು ಡಿ.ಕೆ.ಶಿವಕುಮಾರ್ ಹೇಳಿದರು. ಬಳ್ಳಾರಿಯಲ್ಲಿ ನಿನ್ನೆ ಒಂದು ಮಾತು ಹೇಳಿದ್ದೇನೆ, 'ನಿಮ್ಮ ಹೆಣ ಹೊರುವವರು ನಾವೇ, ನಿಮ್ಮ ಪಲ್ಲಕ್ಕಿ ಹೊರುವವರು ನಾವೇ' ಇಂದು ಸಹ ಇದೇ ಮಾತು ಹೇಳುತ್ತೇನೆ.

ಸುಮಲತಾ, ನಿಖಿಲ್ ನಡುವಿನ ಚುನಾವಣೆ ಇದಲ್ಲ
ಸುಮಲತಾ ಗೂ ನಿಖಿಲ್ ನಡುವೆ ನಡೆಯುತ್ತಿರುವ ಚುನಾವಣೆ ಇದಲ್ಲ, ಇದು, ಮೋದಿ, ಯಡಿಯೂರಪ್ಪ ವಿರುದ್ಧ ದೇವೇಗೌಡ ಅವರಿಗೆ ನಡೆಯುತ್ತಿರುವ ಚುನಾವಣೆ ಇದು. ಬಿಜೆಪಿಯ ತಂತ್ರ, ಕುತಂತ್ರಕ್ಕೆ ಕರ್ನಾಟಕ ರಾಜ್ಯದಲ್ಲಿ ಮೌಲ್ಯ ಸಿಗಲ್ಲ ಎಂದು ಡಿ.ಕೆ.ಶಿವಕುಮಾರ್ ಗುಡುಗಿದರು.

ಸುಮಲತಾ ನನ್ನ ಬೆಂಬಲವನ್ನು ಕೇಳಿದ್ದರು
ಸುಮಲತಾ ಅಂಬರೀಶ್ ಅವರು ನನ್ನ ಮತ್ತು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದರು, ಬೆಂಬಲ ಕೇಳಿದರು, ಆದರೆ ನಾವು ಹೇಳಿದೆವು, ಉಪಚುನಾವಣೆಯಲ್ಲಿ ಅವರಿಗೆ ಟಿಕೆಟ್ ಕೊಟ್ಟಿದ್ದೇವೆ, ಈ ಬಾರಿ ಕಾಂಗ್ರೆಸ್‌ಗೆ ಕೊಡಲಾಗದು ಎಂದೆವು. ಮೈಸೂರು, ಬೆಂಗಳೂರು ಎಲ್ಲಿ ಬೇಕಾದರೂ ಚುನಾವಣೆಗೆ ನಿಂತುಕೊಳ್ಳಿ ಬೆಂಬಲ ನೀಡುತ್ತೇವೆ ಎಂದು ಹೇಳಿದ್ದೆವು, ಆದರೆ ಅವರು ಕೇಳಲಿಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.












Click it and Unblock the Notifications