ಧರ್ಮಸ್ಥಳ ಸಂಘದಿಂದ ಕಿರುಕುಳ ಆರೋಪ: ಸಾಲದ ಕಂತು ಕಟ್ಟಲಾಗದೇ ರೈತ ಮಹಿಳೆ ಸಾವು
ಮಂಡ್ಯ, ಸೆಪ್ಟೆಂಬರ್ 19: ಸಂಘದ ಸಾಲದ ಕಂತು ಕಟ್ಟಲಾಗದೇ ರೈತ ಮಹಿಳೆ ಸಾವಿಗೆ ಶರಣಾದ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಮಲಿಯೂರು ಗ್ರಾಮದಲ್ಲಿ ನಡೆದಿದೆ. ಮಲಿಯೂರು ಗ್ರಾಮದ ಮಹಾಲಕ್ಷ್ಮೀ (38) ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಈ ಘಟನೆಯಲ್ಲಿ ಧರ್ಮಸ್ಥಳ ಸಂಘದ ಸಾಲದ ಕಂತು ಕಟ್ಟಲಾಗದೇ ಕಿರುಕುಳ ತಾಳಲಾರದೇ ಮಹಿಳೆ ಸಾವಿಗೆ ಶರಣಾದ ಆರೋಪ ಕೇಳಿಬಂದಿದೆ.
ಮಲಿಯೂರು ಗ್ರಾಮದ ಮಹಾಲಕ್ಷ್ಮೀ ಕೆಲವು ಸಮಯದ ಹಿಂದೆ ಧರ್ಮಸ್ಥಳ ಸಂಘದಲ್ಲಿ 2 ಲಕ್ಷ ರೂಪಾಯಿ ಸಾಲ ತೆಗೆದುಕೊಂಡಿದ್ದರು. ಪ್ರತಿ ಬುಧವಾರ 1,700 ರೂಪಾಯಿ ಕಂತು ಕಟ್ಟಬೇಕಿತ್ತು. ಈ ವಾರ ಅಂದರೆ ನಿನ್ನೆ ಸಂಘದ ಸಾಲದ ಕಂತು ಕಟ್ಟಲು ಹಣದ ಕೊರೆತೆಯಾಗಿತ್ತು. ಹೀಗಾಗಿ ಮಹಾಲಕ್ಷ್ಮೀ ಹಣ ಕಟ್ಟಲು ಸಮಯಾವಕಾಶ ಕೇಳಿದ್ದರು. ಆದರೆ ಧರ್ಮಸ್ಥಳ ಸಂಘದ ಸಿಬ್ಬಂದಿ ಮಹಿಳೆಗೆ ಅವಕಾಶ ನೀಡದೇ ಅವಾಚ್ಯ ಶಬ್ದದಿಂದ ನಿಂದಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಈ ಘಟನೆಯಿಂದ ನೊಂದಿದ್ದ ಮಹಾಲಕ್ಷ್ಮೀ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದಾರೆ ಎನ್ನಲಾಗಿದೆ. ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಕಿರುಗಾವಲು ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸದ್ಯ ಮಹಾಲಕ್ಷ್ಮೀ ಮೃತದೇಹವನ್ನು ಮಳವಳ್ಳಿ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.
ಧರ್ಮಸ್ಥಳ ಸಂಘದ ವಿರುದ್ಧ ಶಾಸಕ ಪಿ.ಎಂ ನರೇಂದ್ರ ಸ್ವಾಮಿ ಕಿಡಿ
ಇನ್ನು ಶಾಸಕ ನರೇಂದ್ರ ಸ್ವಾಮಿ ಇತ್ತೀಚಿಗಷ್ಟೆ ಧರ್ಮಸ್ಥಳ ಸಂಘದ ಅಧಿಕ ಬಡ್ಡಿ ಬಗ್ಗೆ ಪ್ರಸ್ತಾಪಿಸಿದ್ದರು. ಈ ಆರೋಪಕ್ಕೆ ಪುಷ್ಟಿ ನೀಡುವಂತೆ ಶಾಸಕ ನರೇಂದ್ರ ಸ್ವಾಮಿ ಕ್ಷೇತ್ರದಲ್ಲೇ ಸಂಘದ ಕಂತು ಕಟ್ಟಲಾಗದೇ ಮಹಿಳೆ ಸಾವನ್ನಪ್ಪಿದ ಘಟನೆ ನಡೆದಿದೆ.

ಮಳವಳ್ಳಿ ತಾಲೂಕಿನ ಹಾಡ್ಲಿಯಲ್ಲಿ ಮಾತನಾಡಿದ್ದ ಶಾಸಕ ನರೇಂದ್ರಸ್ವಾಮಿ, ಹೆಸರಿಗೆ ಮಾತ್ರ ಅದು ಧರ್ಮಸ್ಥಳ ಸಂಘ, ಆದರೆ ಅದರಲ್ಲಿ ಧರ್ಮದ ಕೆಲಸವೇ ಇಲ್ಲ. ಈ ಸಂಘ ಬಡವರಿಂದ ಕೊಟ್ಟ ಸಾಲಕ್ಕೆ ಶೇ.40ರಷ್ಟು ಬಡ್ಡಿ ವಸೂಲಿ ಮಾಡುತ್ತಿದೆ. ನೀವು ಅವರು ಕೊಡುವ 10-20 ಸಾವಿರ ತೆಗೆದುಕೊಂಡು ಹೆಚ್ಚಿಗೆ ಬಡ್ಡಿ ಕಟ್ಟುತ್ತೀರಾ. ಅದು ನಿಮಗೆ ತಿಳಿಯುತ್ತಿಲ್ಲ. ಅದು ಹೆಸರಿಗಷ್ಟೇ ಧರ್ಮಸ್ಥಳ ಸಂಘ. ಅಲ್ಲಿ ಧರ್ಮಸ್ಥಳ ಸಂಘದಲ್ಲಿ ಧರ್ಮದ ಕಾರ್ಯ ನಡೆಯಲ್ಲ. ಆ ಕಾರಣಕ್ಕಾಗಿ ನಾವು ಅವರ ಶೋಷಣೆ ತಪ್ಪಿಸಲಿಕ್ಕೆ ಪ್ರತಿ ಮನೆಯ ಬಡ ಕುಟುಂಬಕ್ಕೆ 2 ಸಾವಿರ ಕೊಡುತ್ತಿದ್ದೇವೆ ಎಂದಿದ್ದರು.
ಇಲ್ಲಿದೆ ಮುಖ್ಯವಾದ ಮಾಹಿತಿ
Helplines: COOJ Mental Health Foundation (COOJ)- 0832-2252525, ಪರಿವರ್ತನ್- +91 7676 602 602, Connecting Trust- +91 992 200 1122/+91-992 200 4305 or Sahai- 080-25497777/ [email protected]
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ ಸ್ನೇಹಾ ಫೌಂಡೇಷನ್ ಸಹಾಯವಾಣಿ ಇಂತಿದೆ: 04424640050, ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ 02225521111ಗೆ ಕರೆ ಮಾಡಬಹುದು.












Click it and Unblock the Notifications