ಅನಧಿಕೃತ ಕೋಚಿಂಗ್ ಸೆಂಟರ್: ಅಹಿತಕರ ಘಟನೆ ನಡೆದಾಗಲಷ್ಟೆ ಎಚ್ಚೆತ್ತುಕೊಳ್ಳುವ ಅಧಿಕಾರಿಗಳು?
ಮಂಡ್ಯ, ಅಕ್ಟೋಬರ್ 25 : ಅಮಾನುಷ, ಅಮಾನವೀಯ ಘಟನೆಗಳು, ಗಂಭೀರ ಪ್ರಕರಣಗಳು ನಡೆಯುವವರೆಗೂ ಯಾವುದೇ ಇಲಾಖೆ ಅಧಿಕಾರಿಗಳು ಕಣ್ತೆರೆಯುವುದೇ ಇಲ್ಲ. ಪ್ರಕರಣಗಳು ಬೆಳಕಿಗೆ ಬಂದ ನಂತರ ಸ್ವಲ್ಪ ಸಮಯದವರೆಗಷ್ಟೇ ಎಚ್ಚೆತ್ತುಕೊಂಡಂತೆ ಕಂಡುಬರುವ ಅಧಿಕಾರಿಗಳು ಮತ್ತೆ ನಿದ್ರಾವಸ್ಥೆಗೆ ಜಾರುವುದು ಸರ್ವೇ ಸಾಮಾನ್ಯವಾಗಿದೆ.
ಮಳವಳ್ಳಿಯಲ್ಲಿ 10 ವರ್ಷದ ಶಾಲಾ ಬಾಲಕಿ ಮೇಲೆ ನಡೆದ ಅತ್ಯಾಚಾರ, ಹತ್ಯೆಯಂತಹ ಅಮಾನವೀಯ ಕೃತ್ಯ ನಡೆದ ಬಳಿಕ ಇದೀಗ ಶಿಕ್ಷಣ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಅನಧಿಕೃತ ಕೋಚಿಂಗ್ ಸೆಂಟರ್‌ಗಳ ಕುರಿತಂತೆ ಮಾಹಿತಿ ಸಂಗ್ರಹಕ್ಕೆ ಮುಂದಾಗಿದ್ದಾರೆ. ಅಧಿಕಾರಿಗಳಲ್ಲಿ ಮುಂಜಾಗ್ರತೆ, ಮುನ್ನೆಚ್ಚರಿಕೆ, ಜವಾಬ್ದಾರಿಯುತ ಕಾರ್ಯನಿರ್ವಹಣೆ ಇಲ್ಲದಿರುವುದರಿಂದಲೇ ಅಮಾನುಷ ಕೃತ್ಯಗಳು ಸಂಭವಿಸುವುದಕ್ಕೆ ಮೂಲ ಕಾರಣವಾಗಿದೆ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.
ಬಾಲಕಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ನಂತರವಷ್ಟೇ ಆಕೆ ಹೋಗುತ್ತಿದ್ದ ಕೋಚಿಂಗ್ ಸೆಂಟರ್ ಅನಧಿಕೃತ ಎನ್ನುವುದು ದೃಢಪಟ್ಟಿದೆ. ಅಲ್ಲಿಯವರೆಗೂ ಅದು ಅನಧಿಕೃತ ಕೋಚಿಂಗ್ ಸೆಂಟರ್ ಎಂಬ ವಿಚಾರ ಯಾರ ಗಮನಕ್ಕೂ ಬಂದಿರಲಿಲ್ಲ. ಈ ಪ್ರಕರಣ ರಾಜ್ಯಮಟ್ಟದಲ್ಲಿ ಸುದ್ದಿಯಾಗದಿದ್ದರೆ ಅನಧಿಕೃತವಾಗಿ ನಡೆಯುತ್ತಿರುವ ಕೋಚಿಂಗ್ ಸೆಂಟರ್‌ಗಳನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿರಲೂ ಇರಲಿಲ್ಲ.
ಕೆ.ಆರ್.ಪೇಟೆಯಲ್ಲಿ ನಡೆದ ಮಹಾಕುಂಭಮೇಳದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಈ ಪ್ರಕರಣದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಬಾಲಕಿ ಕುಟುಂಬಕ್ಕೆ ತಮ್ಮ ಪರಿಹಾರ ನಿಧಿಯಿಂದ 10 ಲಕ್ಷ ರೂ. ನೆರವು ಘೋಷಿಸಿದರು. ಸಂಸದರು, ಸಚಿವರು, ಶಾಸಕರು, ಜಿಲ್ಲಾಡಳಿತ ಬಾಲಕಿ ಮನೆಗೆ ದೌಡಾಯಿಸಿ ಸಾಂತ್ವನ ಹೇಳಿಬಂದರು.
ಆನಂತರ ಎಚ್ಚೆತ್ತ ಶಿಕ್ಷಣ ಇಲಾಖೆ ಅನಧಿಕೃತ ಕೋಚಿಂಗ್ ಸೆಂಟರ್‌ಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಅವುಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯದ ಎಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಸೂಚಿಸಿ ಪತ್ರ ಬರೆದಿದ್ದು, ಅದನ್ನು ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ರವಾನಿಸಲಾಗಿದೆ.

ಅಧಿಕೃತ ಮತ್ತು ಅನಧಿಕೃತ ಸಂಸ್ಥೆ ಕಡೆ ಗಮನ ಹರಿಸದ ಅಧಿಕಾರಿಗಳು
ಶಿಕ್ಷಣ ಕಾಯಿದೆ ನಿಯಮ 36ರಂತೆ ಯಾವುದೇ ಶಿಕ್ಷಣ ಸಂಸ್ಥೆ ಅಥವಾ ಕೋಚಿಂಗ್ ಸೆಂಟರ್ ಇಲಾಖೆ ನೋಂದಣಿ ಇಲ್ಲದೆ ನಡೆಸಲು ಅವಕಾಶವಿರುವುದಿಲ್ಲ. ಪ್ರತಿ ಶೈಕ್ಷಣಿಕ ವರ್ಷದ ಪೂರ್ವದಲ್ಲಿ ಆಯಾ ತಾಲೂಕು ವ್ಯಾಪ್ತಿಯಲ್ಲಿ ಕಾರ್ಯಾಚರಣೆಯಲ್ಲಿರುವ ಎಲ್ಲಾ ಅಧಿಕೃತ ಮತ್ತು ಅನಧಿಕೃತ ಸಂಸ್ಥೆಗಳ ಬಗ್ಗೆ ಮಾಹಿತಿ ಸಂಗ್ರಹಿಸುವಂತೆ ನಿರಂತರವಾಗಿ ಸೂಚಿಸುತ್ತಿದ್ದರೂ ಗಮನಹರಿಸದಿರುವುದು ಕಂಡುಬಂದಿದೆ. ಮಳವಳ್ಳಿ ಪ್ರಕರಣದಲ್ಲಿ ಬಾಲಕಿ ಹೋಗುತ್ತಿದ್ದ ಜ್ಞಾನ ಕುಟೀರ ಕೋಚಿಂಗ್ ಸೆಂಟರ್ ಅನಧಿಕೃತವೆಂದು ದೃಢಪಟ್ಟಿರುವುದು ಇದಕ್ಕೆ ಸಾಕ್ಷಿಯಾಗಿದೆ.

ಶಿಕ್ಷಣ ಕಾಯಿದೆಯಡಿ ಪ್ರಕರಣ
ತಾಲೂಕು ವ್ಯಾಪ್ತಿಯಲ್ಲಿ ಕಾರ್ಯಾಚರಣೆಯಲ್ಲಿರುವ ಎಲ್ಲಾ ಕೋಚಿಂಗ್ ಸೆಂಟರ್‌ಗಳು ನೋಂದಣಿಯಾಗಿರುವ ಕುರಿತು ಮೂರು ದಿನದಲ್ಲಿ ಮಾಹಿತಿ ಸಂಗ್ರಹಿಸಿ ವರದಿ ಸಲ್ಲಿಸುವುದು. ನೋಂದಣಿ ಇಲ್ಲದೆ ಅನಧಿಕೃತ ಸಂಸ್ಥೆಗಳು ನಡೆಯುತ್ತಿರುವುದು ಕಂಡುಬಂದಲ್ಲಿ ಶಿಕ್ಷಣ ಕಾಯಿದೆಯಡಿ ತಕ್ಷಣ ಪ್ರಕರಣ ದಾಖಲಿಸಿ, ಸೆಂಟರ್‌ಗಳನ್ನು ಮುಚ್ಚಿಸುವಂತೆ ತಿಳಿಸಲಾಗಿದೆ.
ನೋಂದಣಿ ಆಗಿರುವ ಶಿಕ್ಷಣ ಸಂಸ್ಥೆಗಳು ಶಿಕ್ಷಣ ಕಾಯಿದೆಯಡಿ ಸೂಚಿಸಿರುವ ಎಲ್ಲಾ ಮಾನದಂಡಗಳನ್ನು ಪೂರೈಸಿರುವ ಬಗ್ಗೆ ಅಂಶವಾರು ಪರಿಶೀಲಿಸಿ ಖಚಿತಪಡಿಸಿಕೊಳ್ಳತಕ್ಕದ್ದು ಮತ್ತು ವರದಿ ಮಾಡತಕ್ಕದ್ದು ಎಂದು ಸೂಚಿಸಲಾಗಿದೆ. ಪೋಷಕರು ಅನಧಿಕೃತ ಕೋಚಿಂಗ್ ಸೆಂಟರ್‌ಗಳಿಗೆ ಮಕ್ಕಳನ್ನು ಕಳುಹಿಸದಂತೆ ವ್ಯಾಪಕ ಪ್ರಚಾರದ ಮೂಲಕ ತಿಳಿವಳಿಕೆ ಮೂಡಿಸುವಂತೆಯೂ ತಿಳಿಸಲಾಗಿದೆ.

ದಾಳಿ ಮಾಡಿದ ಉದಾಹರಣೆಯೂ ಇಲ್ಲ
ಒಂದು ಮೂಲದ ಪ್ರಕಾರ ಶಾಲಾ ಮಕ್ಕಳಿಗೆ ಕೋಚಿಂಗ್ ನೀಡುವವರು ಯಾರೂ ಅಧಿಕೃತವಾಗಿ ಪರವಾನಗಿಯನ್ನೇ ಪಡೆದುಕೊಂಡಿಲ್ಲ. ಎಲ್ಲರೂ ಅನಧಿಕೃತವಾಗಿಯೇ ಟ್ಯೂಷನ್ ಹೇಳಿಕೊಡುತ್ತಿದ್ದಾರೆ. ಪೋಷಕರು ಕೂಡ ನಂಬಿಕೆ, ಸ್ನೇಹ, ವಿಶ್ವಾಸದ ಮೇಲೆ ಮಕ್ಕಳನ್ನು ಕೋಚಿಂಗ್‌ಗೆ ಕಳುಹಿಸುತ್ತಿದ್ದಾರೆಯೇ ವಿನಃ ಟ್ಯೂಷನ್ ನಡೆಸುವವರು ಪರವಾನಗಿ ಪಡೆದಿದ್ದಾರೋ, ಇಲ್ಲವೋ ಎಂದು ವಿಚಾರಿಸುವುದೂ ಇಲ್ಲ. ಅಧಿಕೃತ ಕೋಚಿಂಗ್ ಸೆಂಟರ್‌ಗಳು ಎಲ್ಲಿವೆ ಎಂದು ಹುಡುಕಿಕೊಂಡು ಹೋಗುವುದಿಲ್ಲ. ಈ ಕೋಚಿಂಗ್ ಸೆಂಟರ್‌ಗಳು ಎಲ್ಲೆಲ್ಲಿವೆ, ಎಷ್ಟು ಮಕ್ಕಳು ಅಲ್ಲಿಗೆ ಬರುತ್ತಿದ್ದಾರೆ. ಅಲ್ಲಿನ ವಾತಾವರಣ ಹೇಗಿದೆ ಎಂಬ ಬಗ್ಗೆ ಸೂಕ್ಷ್ಮವಾಗಿ ಶಿಕ್ಷಣ ಇಲಾಖೆ ಅಧಿಕಾರಿಗಳು ಗಮನಹರಿಸಬೇಕು.
ಇದುವರೆಗೂ ಯಾವುದಾದರೊಂದು ಅನಧಿಕೃತ ಕೋಚಿಂಗ್ ಸೆಂಟರ್ ಮೇಲೆ ದಾಳಿ ನಡೆಸಿ ಪರಿಶೀಲಿಸಿದ ಒಂದೇ ಒಂದು ಉದಾಹರಣೆಯೂ ಇಲ್ಲ. ಎಲ್‌ಕೆಜಿಯಿಂದಲೇ ಮಕ್ಕಳನ್ನು ಟ್ಯೂಷನ್‌ಗೆ ಕಳುಹಿಸುವುದು ಪೋಷಕರಿಗೆ ಹವ್ಯಾಸವಾಗಿದೆ. ಇವು ಅನಧಿಕೃತ ಕೋಚಿಂಗ್ ಸೆಂಟರ್‌ಗಳು ನಾಯಿಕೊಡೆಗಳಂತೆ ಹುಟ್ಟಿಕೊಳ್ಳುವುದಕ್ಕೆ ಪ್ರಮುಖ ಕಾರಣವಾಗಿದೆ.

ದೀಪಾವಳಿ ಬಳಿಕ ಮಾಹಿತಿ ಸಂಗ್ರಹ
ಜಿಲ್ಲೆಯಲ್ಲಿ ಅಧಿಕೃತ ಕೋಚಿಂಗ್ ಸೆಂಟರ್‌ಗಳು ಎಷ್ಟಿವೆ, ಅನಧಿಕೃತ ಸೆಂಟರ್‌ಗಳು ಎಷ್ಟಿವೆ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪತ್ರ ಬರೆದು ಸೂಚನೆ ನೀಡಲಾಗಿದೆ. ಮಾಹಿತಿ ಸಂಗ್ರಹಿಸುವ ಕಾರ್ಯ ಅಧಿಕಾರಿಗಳಿಂದ ನಡೆದಿದೆ. ದೀಪಾವಳಿ ಹಬ್ಬವಿರುವ ಕಾರಣದಿಂದ ತಡವಾಗಿದೆ. ಹಬ್ಬ ಮುಗಿದ ಬಳಿಕ ಅದರ ಮಾಹಿತಿಯನ್ನು ಇಲಾಖೆಗೆ ಕಳುಹಿಸುತ್ತೇವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಟಿ.ಜವರೇಗೌಡ ತಿಳಿಸಿದ್ದಾರೆ.
-
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ












Click it and Unblock the Notifications