ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಸ್ತು ಪ್ರದರ್ಶನ ಮಳಿಗೆಗಳ ವಿವರ
ಮಂಡ್ಯ, ನವೆಂಬರ್ 22: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಸ್ತು ಪ್ರದರ್ಶನ ಮಳಿಗೆಗಳು ವಿನೂತನ ರೀತಿಯಲ್ಲಿ ಜನರನ್ನು ಆಕರ್ಷಿಸುವಂತಹ ವೈವಿಧ್ಯಮಯ ಮಳಿಗೆಗಳನ್ನು ಏರ್ಪಡಿಸಬೇಕು ಎಂದು ವಿಧಾನಪರಿಷತ್ ಶಾಸಕ ಮಧು ಜಿ. ಮಾದೇಗೌಡ ಅಧಿಕಾರಿಗಳಿಗೆ ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ವಸ್ತು ಪ್ರದರ್ಶನ ಸಮಿತಿ ಸಭೆ ನಡೆಸಿ ಮಾತನಾಡಿದರು.
ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬರುವ ಜನರಿಗೆ ಆಹಾರ ಮಳಿಗೆ ಜೊತೆಗೆ ಸರ್ಕಾರಿ ಕಾರ್ಯಕ್ರಮದ ಯೋಜನೆಗಳು, ಸೌಲಭ್ಯಗಳು ಹಾಗೂ ಆಯಾ ಇಲಾಖೆಗೆ ಸಂಬಂಧಿಸಿದ ಇನ್ನಿತರೆ ವಿಷಯಗಳ ಬಗ್ಗೆ ಅರಿವು ಮೂಡಿಸಿ ಎಂದು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ತಿಳಿಸಿದರು.

ವಸ್ತು ಪ್ರದರ್ಶನ ಸಮಿತಿಗೆ ಸಂಬಂಧಿಸಿದಂತೆ ಮಳಿಗೆಗಳನ್ನು ಸ್ಥಾಪಿಸಲು ಯಾವ ಇಲಾಖೆಗೆ ಎಷ್ಟು ವಿಸ್ತೀರ್ಣವುಳ್ಳ ಜಾಗಬೇಕು ಎಂಬುದರ ಬಗ್ಗೆ ಚರ್ಚಿಸಿದರು. ಸಮ್ಮೇಳನದಲ್ಲಿ ವಸ್ತು ಪ್ರದರ್ಶನದಲ್ಲಿ ಎಷ್ಟು ಮಳಿಗೆಗಳನ್ನು ಹಾಕಬಹುದು ಎಂದು ತಾತ್ಕಾಲಿಕವಾಗಿ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ನಿಖರ ಹಾಗೂ ಸ್ಪಷ್ಟವಾಗಿ ಯೋಜನೆ ರೂಪಿಸಿ ಅದರಂತೆ ಕಾರ್ಯ ನಿರ್ವಹಿಸಲಾಗುವುದು ಎಂದು ತಿಳಿಸಿದರು.
ಕನ್ನಡ ಸಾಹಿತ್ಯ, ಕಲೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಸಿಕ್ಕಿರುವ ಶಾಸನ, ಜಿಲ್ಲೆಯ ಸಾಹಿತಿಗಳ ಪರಿಚಯ, ಅವರ ಕೃತಿ ಹಾಗೂ ಪ್ರಶಸ್ತಿ, ರೈತ ಚಳುವಳಿ, ಕನ್ನಡ ಬಾವುಟ, ಕನ್ನಡ ಸಾಹಿತ್ಯಕ್ಕೆ ಮುದ್ರಣ ಸಂಸ್ಥೆಗಳು ಹಾಗೂ ಪ್ರಕಾಶಕರುಗಳು ಸಾಹಿತ್ಯಕ್ಕೆ ನೀಡಿರುವ ಕೊಡುಗೆಗಳ ಬಗ್ಗೆ ಪ್ರದರ್ಶನವನ್ನು ಏರ್ಪಡಿಸುವುದು ಅವಶ್ಯ ಎಂದು ಸಭೆಯಲ್ಲಿದ್ದವರು ಅಭಿಪ್ರಾಯ ವ್ಯಕ್ತಪಡಿಸಿದರು.
ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಚಾಲಕಿ ಡಾ. ಮೀರಾಶಿವಲಿಂಗಯ್ಯ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಅಶೋಕ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮೋಹನ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್. ಶಿವರಾಮೇಗೌಡ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ರಾಘವೇಂದ್ರ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಡಾ. ಸಿದ್ದಲಿಂಗೇಶ್, ನಬಾರ್ಡ್ ನ ಜಿಲ್ಲಾ ವ್ಯವಸ್ಥಾಪಕಿ ಹರ್ಷಿತಾ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಅರುಣ್ ಕುಮಾರ್, ಮುಖಂಡರುಗಳಾದ ಕೆಂಪರಾಜು ಮಹೇಶ್ ಚಂದ್ರಗುರು, ಸತೀಶ್ ಜವರೇಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 25 ಇಲಾಖೆಗಳ ಮಳಿಗೆಗಳು
ವಸ್ತು ಪ್ರದರ್ಶನದಲ್ಲಿ ಒಟ್ಟು 25 ಸರ್ಕಾರಿ ಇಲಾಖೆಗಳು ಮಳಿಗೆಗಳನ್ನು ತೆರೆಯಲಿವೆ. ಕೃಷಿ ಇಲಾಖೆಯಿಂದ ಬೆಲ್ಲ ತಯಾರಿಕ ಘಟಕದ ಮಾದರಿ, ತೋಟಗಾರಿಕೆ ಇಲಾಖೆಯಿಂದ ಕಲಾಕೃತಿ, ಎಕ್ಸೆಟಿಕ್ ಸಸಿ, ಬೋನ್ಸಾಯಿ, ಕನ್ನಡ ಭಾಷೆ ಬಿಂಬಿಸುವ ಪ್ರದರ್ಶನ, ಮೀನುಗಾರಿಕೆ ಇಲಾಖೆ ವತಿಯಿಂದ ಸರ್ಕಾರದ ಯೋಜನೆ, ವಿವಿಧ ಜಾತಿಯ ಮೀನುಗಳು, ಗದ್ದೆಯಲ್ಲಿ ಮೀನು ಸಾಕಾಣಿಕೆ ಪ್ರದರ್ಶನ, ರೇಷ್ಮೆ ಇಲಾಖೆಯಿಂದ ಇಲಾಖೆಯ ಯೋಜನೆಗಳ ಬಗ್ಗೆ ಅರಿವು, ರೇಷ್ಮೆ ಚಟುವಟಿಕೆ, ತಾಂತ್ರಿಕತೆಗಳು, ಉಪ ಉತ್ಪನ್ನದ ಪ್ರದರ್ಶನ, ಪಶು ಪಾಲನ ಇಲಾಖೆಯಿಂದ ಯೋಜನೆಗಳು,
ಕುರಿ/ಮೇಕೆ ಸ್ಟಾಲ್ ಫೀಡಿಂಗ್, ಅರಣ್ಯ ವಿಭಾಗದಿಂದ ರಂಗನತಿಟ್ಟು ಮತ್ತು ಕೊಕ್ಕರೆ ಬೆಳ್ಳೂರು ಮಾದರಿ, ಕಾಡು ಪ್ರಾಣಿಗಳು, ಪಕ್ಷಿಗಳ ಹಾವಳಿ ತಪ್ಪಿಸುವ ಮಾರ್ಗೋಪಾಯಗಳ ಪ್ರದರ್ಶನ ಮತ್ತು ಮಾಹಿತಿ ಭಿತ್ತಿ ಪತ್ರಗಳು, ಕೈಗಾರಿಕೆ ಇಲಾಖೆಯಿಂದ ಪ್ರಸ್ತುತ ಚಾಲ್ತಿಯಲ್ಲಿರುವ ಕೈಗಾರಿಕೆಗಳ ಪ್ರದೇಶ ನೈಜ ಮಾದರಿ/ ಫ್ಲೆಕ್ಸ್ ಮತ್ತು ಎಲ್ಇಡಿಯಲ್ಲಿ ವಿಡಿಯೋ ಪ್ರದರ್ಶನ, ಆರೋಗ್ಯ ಇಲಾಖೆ ವತಿಯಿಂದ ಹೆಣ್ಣು ಭ್ರೂಣ ಹತ್ಯೆ ತಡೆ ಬಗೆಗಿನ ಪ್ರದರ್ಶನ, ಪ್ರವಾಸೋದ್ಯಮ ಇಲಾಖೆಯಿಂದ ಪ್ರದರ್ಶನ ತಾಣದ ಕೈಪಿಡಿ ಮತ್ತು ಟೂರಿಸ್ಟ್ ರೋಡ್ ಮ್ಯಾಪ್, ಸಮಾಜ ಕಲ್ಯಾಣ ಇಲಾಖೆಯಿಂದ ಭೂ ಒಡೆತನ ಯೋಜನೆ,
ಗಂಗಾ ಕಲ್ಯಾಣ ಯೋಜನೆ, ವಿದ್ಯಾರ್ಥಿ ನಿಲಯಗಳ ಮಾದರಿ ಹಾಗೂ ಲಿಡ್ಕರ್ ಉತ್ಪನ್ನಗಳ ಪ್ರದರ್ಶನ, ಡಾ. ಬಿ. ಆರ್. ಅಂಬೇಡ್ಕರ್ ರವರು ಕರ್ನಾಟಕಕ್ಕೆ ಭೇಟಿ ನೀಡಿದ ಸ್ಥಳಗಳ ನಕ್ಷೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಬಿಸಿಯೂಟ, ಪಠ್ಯಪುಸ್ತಕ, ಸಮವಸ್ತ್ರ, ನಲಿಕಲಿ, ಕ್ಷೀರ ಭಾಗ್ಯ, ಇತ್ಯಾದಿ ಸೌಲಭ್ಯಗಳ ಪ್ಲೈವುಡ್ ನಲ್ಲಿ ಕಟೌಟ್ ಮತ್ತು ಎಲ್ಇಡಿ ವಿಡಿಯೋ ಪ್ರದರ್ಶನ, ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ಸಂಘ ಸಂಸ್ಥೆಗಳಿಂದ ಕೈಮಗ್ಗ ಪ್ರದರ್ಶನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಜಾನಪದ ಲೋಕ, ರಾಮನಗರದಿಂದ ಜಾನಪದ ಪರಿಕರಗಳ ಪ್ರದರ್ಶನ ಮಳಿಗೆ, ಚೆಸ್ಕಾಂ ವತಿಯಿಂದ ಪಿಎಂ ಕುಸುಮ್ ಯೋಜನೆ ಸೋಲಾರ್ ಮಾದರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ವಿದ್ಯಾರ್ಥಿ ನಿಲಯ,
ವಿದ್ಯಾಸಿರಿ ವಿದ್ಯಾರ್ಥಿವೇತನ, ಪ್ರೋತ್ಸಾಹ ಧನ, ಅಲೆಮಾರಿ /ಅರೆ ಅಲೆಮಾರಿ ವಿದ್ಯಾರ್ಥಿ ವೇತನ, ವಕೀಲರಿಗೆ ಪ್ರೋತ್ಸಾಹ ಧನ, ವಿದೇಶಿ ವ್ಯಾಸಂಗ ವೇತನ, ಪಿಹೆಚ್‌ಡಿ ಪ್ರೋತ್ಸಾಹ ವೇತನದ ಬಗ್ಗೆ ಅರಿವು, ಕೆಪಿಟಿಸಿಎಲ್ ಇಲಾಖೆಯಿಂದ ಶಿಂಷಾ ಮಾದರಿ ಜಲವಿದ್ಯುತ್ ಕೈಗಾರಿಕಾ ಮಾದರಿ, ನಬಾರ್ಡ್ ನಿಂದ ಎಫ್ ಪಿ ಓ ಗಳು, ಆರ್ ಎ ಡಿ ಎಫ್, ಡೈರಿ ಇಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಫಂಡ್, ಕೃಷಿ ಮೂಲ ಸೌಕರ್ಯದ ಬಗ್ಗೆ ಪ್ರದರ್ಶನ ಮಳಿಗೆಯನ್ನು ತೆರೆಯುವ ಬಗ್ಗೆ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಇಲಾಖೆಯ ಅಧಿಕಾರಿಗಳು ಸಭೆಗೆ ತಿಳಿಸಿದರು.












Click it and Unblock the Notifications