ಈ ಬಾರಿ ಚುನಾವಣೆಯಲ್ಲಿ ಮಹದಾಯಿ ಯಾರಿಗೆ ವರ? ಯಾರಿಗೆ ಶಾಪ?

Posted By: ಜ್ಯೋತಿ ದೇವಾಂಗಮತ
Subscribe to Oneindia Kannada

ಹುಬ್ಬಳ್ಳಿ, ಏಪ್ರಿಲ್ 16 : ಮಹದಾಯಿ ಹೋರಾಟ ಚುನಾವಣೆ ಹಾಗೂ ರಾಷ್ಟ್ರೀಯ ಪಕ್ಷಗಳ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರುತ್ತದೆ ಎಂಬುದು ಇದೀಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಹೌದು, ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ಚುನಾವಣೆ ಕಾವು ಬಿಸಿಲಿನ ಪ್ರಖರದಂತೆ ಏರುತ್ತಲಿದ್ದು, ಇದೇ ರೀತಿ ಏರು ಮುಖವಾಗಿದ್ದ ಮಹದಾಯಿ ಹೋರಾಟ ಇದೀಗ ಕವಲುದಾರಿ ಹಿಡಿದಿದೆ. ಆದರೆ ಮಹದಾಯಿ ಈ ಚುನಾವಣೆಯಲ್ಲಿ ಯಾರಿಗೆ ವರ ಕೊಡುತ್ತಾಳೆ? ಶಾಪವಾಗಿ ಕಾಡಲಿದ್ದಾಳೆ ಎಂಬುದನ್ನು ಎಲ್ಲರೂ ಚುನಾವಣಾ ಫಲಿತಾಂಶ ನಂತರ ನೋಡಬೇಕಿದೆ.

ಭಾಷಣಕ್ಕೆ ಸೀಮಿತವಾಯಿತೇ ಮಹದಾಯಿ..?
ತಕ್ಕ ಮಟ್ಟಿಗೆ ಹೋರಾಟಗಾರರಿಗೆ ಜೀವಸೆಲೆಯಾಗಿರುವ, ಪಕ್ಷಗಳಿಗೆ ರಾಜಕೀಯ ವಸ್ತುವಾಗಿರುವ ಮಹದಾಯಿ ಚುನಾವಣೆ ಹೊಸ್ತಿಲಲ್ಲಿ ಅಕ್ಷರಶಃ ಯಾರಿಗೂ ಬೇಡವಾಗಿದ್ದಾಳೆ! ಅಂದರೆ ಕೇವಲ ರಾಜಕೀಯ ಭಾಷಣಕ್ಕಷ್ಟೇ ಸೀಮಿತವಾಗಿದೆ ಮಹದಾಯಿ ಹೋರಾಟ.

'ನೀರು ಮೊದಲು, ಧರ್ಮ ಆಮೇಲೆ': ಕಳಸಾ-ಬಂಡೂರಿ ಹೋರಾಟಗಾರರ ಒತ್ತಾಯ

ಒಂದು ಕಡೆ ಹೋರಾಟದ ಟ್ರೆಂಡ್ ಬದಲಾದಂತೆ ಹೋರಾಟದ ಹಾದಿ ಮತ್ತು ಆಲೋಚನೆಗಳು ಬದಲಾದವು. ಅಲ್ಲದೆ ಈ ಮಹದಾಯಿ ವಿವಾದದಿಂದಲೇ ಮುಖ್ಯ ವಾಹಿನಿಗೆ ಬಂದ ಕೆಲ ಹೋರಾಟಗಾರರು ಒಂದೊಂದು ಪಕ್ಷಕ್ಕೆ ಅಂಟಿಕೊಂಡರು. ಏತನ್ಮಧ್ಯೆ ಮಹದಾಯಿ, ಕಳಸಾ ಬಂಡೂರಿ ಹೋರಾಟದ ಮೂಲಕ ಮುಖ್ಯವಾಹಿನಿಗೆ ಬಂದ ಲೋಕನಾಥ ಹೆಬಸೂರ, ವೇಮನಗೌಡ ಹೀಗೆ ಕೆಲ ಹೋರಾಟಗಾರರು ಜನಾಭಿಪ್ರಾಯ ಸಂಗ್ರಹದ ಮೂಲಕ ಚುನಾವಣೆಗೆ ಸಿದ್ಧತೆ ನಡೆಸಿದ್ದಾರೆ. ಅಲ್ಲದೆ ಈ ಭಾಗದಲ್ಲಿ ಸುಮಾರು 25 ಕ್ಷೇತ್ರಗಳಲ್ಲಿ ಹೋರಾಟಗಾರರು ಕಣಕ್ಕೆ ಇಳಿಯಲಿದ್ದಾರೆ.

Mahadayi fight will affect the election

ರಾಜಕೀಯ ಅಸ್ತ್ರವಾಗಿ ಬಳಕೆ
ಸುಮಾರು ಮೂರು ವರ್ಷಗಳಿಂದ ನಡೆಯುತ್ತಿರುವ ಹೋರಾಟದ ಸೂಕ್ಷ್ಮತೆ ಅರಿತಿದ್ದ ಎರಡು ರಾಜಕೀಯ ಪಕ್ಷಗಳು ಇದೇ ವಿಷಯವನ್ನು ರಾಜಕೀಯ ಅಸ್ತ್ರವಾಗಿ ಬಳಸಲು ಆಲೋಚನೆ ನಡೆಸಿದವು. ಹೀಗಾಗಿ ಒಂದು ಪಕ್ಷ ಹೋರಾಟ ಹತ್ತಿಕ್ಕಲು ಪ್ರಯತ್ನ ಮಾಡಿದರೆ, ಇನ್ನೊಂದು ಪರೋಕ್ಷವಾಗಿ ಬೆಂಬಲ ನೀಡಿತು. ತೆನೆ ಹೊತ್ತ ಪಕ್ಷ ಸಹ ಮಹದಾಯಿ ಹೋರಾಟಕ್ಕೆ ರೈತರ ಜೊತೆಯಲ್ಲಿ ನಿಂತು ಹೋರಾಟ ಮಾಡಿದ್ದು ಸುಳ್ಳಲ್ಲ.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ಗಂಟುಮೂಟೆ ಕಟ್ಟಿದ ಹೋರಾಟಗಾರರು
ಮಹದಾಯಿ ಹೋರಾಟದಲ್ಲಿ ನಡೆದ ಕೆಲ ನಾಟಕೀಯ ಬೆಳವಣಿಗೆಗಳಿಂದ ಹೋರಾಟಗಾರರ ಮೇಲೆ ಇಲ್ಲಿನ ಜನ ಇಟ್ಟಿದ್ದ ನಂಬಿಕೆ ಮತ್ತಷ್ಟು ಕಡಿಮೆಯಾಯಿತು. ಏಕೆಂದರೆ ಹುಬ್ಬಳ್ಳಿ ನವಲಗುಂದಕ್ಕೆ ಸೀಮಿತವಾಗಿದ್ದ ಮಹದಾಯಿ ಹೋರಾಟ ರಾತ್ರೊ ರಾತ್ರಿ ರಾಜ್ಯ ಬಿಜೆಪಿ ಕಚೇರಿಯ ಬಾಗಿಲಿಗೆ ಶಿಫ್ಟ್‍ ಆಗಿತ್ತು. ನಾಲ್ಕಾರು ದಿನಗಳ ಕಾಲ ಅಹೋರಾತ್ರಿ ನಡೆದ ಹೋರಾಟದ ಕಾವು ನೋಡಿದ್ದ ಜನರಿಗೆ ಮತ್ತೊಮ್ಮೆ ಮಲಪ್ರಭೆಯಲ್ಲಿ ಮಹದಾಯಿ ನೀರು ಮಿಲನದ ಕಾಲ ಹತ್ತಿರವಾಗಿದೆ ಅನಿಸಿತು. ಆದರೆ ಹೋರಾಟಗಾರರಿಗೆ ಯಾವ ಮೋಡಿ ಮಾಡಿದ್ರೋ ಗೊತ್ತಿಲ್ಲ ಹೋರಾಟಕ್ಕೆ ತಿಲಾಂಜಲಿ ಇಟ್ಟು ಗಂಟು ಮೂಟೆ ಕಟ್ಟಿಕೊಂಡು ಊರಿನ ಕಡೆ ಮುಖ ಮಾಡಿದರು. ಇತ್ತ ಬಿಜೆಪಿ ಚಾಣಕ್ಷತನದಿಂದ ನಡೆದುಕೊಂಡು ಮಹದಾಯಿ ಅಸ್ತ್ರವನ್ನು ಮತ್ತೆ ಕಾಂಗ್ರೆಸ್ ಕಡೆಗೆ ತಿರುಗುವಂತೆ ಮಾಡಿತು.

ಇನ್ನೆಷ್ಟು ದಿನ ಕಾಯಬೇಕು?
ಸಾವಿರಕ್ಕೂ ಹೆಚ್ಚು ದಿನಗಳ ಕಾಲ ಏಳೂ ಬೀಳಿನ ಮಧ್ಯೆ ನಡೆದ ಮಹದಾಯಿ ಹೋರಾಟ, ಇನ್ನು ಮುಂದೆ ರಾಜಕೀಯ ಮುಖಂಡರ ಭಾಷಣಕ್ಕೆ ಮಾತ್ರ ಸೀಮಿತವಾಗಲಿದೆ. ಈ ಭಾಗಕ್ಕೆ ಬರುವ ಸ್ಟಾರ್ ಪ್ರಚಾರಕರ ಭಾಷಣದಲ್ಲಿ ಮಹದಾಯಿ ನೀರು ಹರಿಯಲಿದೆ ಹೊರತು ನಿಜಕ್ಕೂ ನೀರು ಹರಿಸಬೇಕಾದ್ರೆ ಜನ ಮತ್ತೆಷ್ಟು ದಿನಗಳ ಕಾಲ ಕಾಯಬೇಕು ಗೊತಿಲ್ಲ.

ಅಮರಣ ಉಪವಾಸ ಸತ್ಯಾಗ್ರಹ
ಪ್ರಧಾನಿ ನರೇಂದ್ರ ಮೋದಿ ಅವರು ಹುಬ್ಬಳ್ಳಿ ಜಿಲ್ಲೆಗೆ ಆಗಮನ ಮುನ್ನವೇ ಮಹದಾಯಿ ಹೋರಾಟಗಾರರಿಂದ ವಿರೋಧ ವ್ಯಕ್ತವಾಗಿದೆ.

ಚುನಾವಣೆ ಪ್ರಚಾರ ಹಿನ್ನೆಲೆಯಲ್ಲಿ ಮೋದಿ ಧಾರವಾಡ ಜಿಲ್ಲಾ ಪ್ರವಾಸ ಮಾಡಲಿದ್ದು, ಏ. 25, 26 ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಅಮರಣ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ಮಹದಾಯಿ ಹೋರಾಟ ಸಮಿತಿ ಅಧ್ಯಕ್ಷ ಲೋಕನಾಥ್ ಹೆಬಸೂರು ತಿಳಿಸಿದ್ದಾರೆ.

ಧಾರವಾಡದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಮ್ಮ ಹೋರಾಟಕ್ಕೆ ಸರಿಯಾಗಿ ಸ್ಪಂದಿಸಿಲ್ಲ. ಮೂರು ಪಕ್ಷಗಳು ರೈತರಿಗೆ ಮೋಸ ಮಾಡುತ್ತಿವೆ. ನೀರಿನ ವಿಚಾರದಲ್ಲಿ ರಾಜಕೀಯ ಮಾಡುತ್ತಿವೆ ಎಂದು ಆರೋಪಿಸಿದರು.

ಮಹದಾಯಿ, ಕಳಾಸಾ-ಬಂಡೂರಿ ನೀರು, ರೈತರ ಸಾಲಮನ್ನಾಕ್ಕಾಗಿ ಈ ಬಾರಿ ವಿಧಾನಸಭಾ ಚುನಾವಣೆಗೆ ನಮ್ಮ ಸ್ಪರ್ಧೆ ಅನಿವಾರ್ಯ ಎಂದರು.

ಮಹದಾಯಿ ಹೋರಾಟಕ್ಕಾಗಿ ಎಲ್ಲರೂ ಒಂದಾಗಿದ್ದೆವು. ಆದರೆ ಇದೀಗ ಕೆಲವರು ವೈಯಕ್ತಿಕ ಹಿತಾಸಕ್ತಿಗಾಗಿ ನಮಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ನಾವು ಪ್ರತ್ಯೇಕವಾಗಿ ಹೋರಾಟ ನಡೆಸಬೇಕಾಗಿದೆ. ಮಹದಾಯಿಗಾಗಿ ಹೋರಾಟ ಮಾಡುವ ಎಲ್ಲ ಸಂಘಟನೆಗಳ ಬೆಂಬಲ ಪಡೆದು ಚುನಾವಣೆ ಎದುರಿಸುತ್ತೇವೆ ಎಂದು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Karnataka Assembly elections 2018 is very close. In this time Mahadayi fight will affect the election and national parties. Because Mahadayi used only for politics, Limited to speech.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ