ಕೊಡಗಿನಲ್ಲಿ ಹುಲಿ ದಾಳಿಗೆ ಒಂದೇ ಕುಟುಂಬದ ಇಬ್ಬರು ಬಲಿ
ಸೋಮವಾರ ಬೆಳಗ್ಗೆ ಕೇರಳದ ಹೊರವಲಯದಲ್ಲಿರುವ ಕೊಡಗಿನ ಪಲ್ಲೇರಿಯಲ್ಲಿ ಹುಲಿ ದಾಳಿಗೆ 75 ವರ್ಷದ ಕೃಷಿ ಕಾರ್ಮಿಕ ರಾಜು ಎಂಬುವವರು ಸಾವನ್ನಪ್ಪಿದ್ದಾರೆ.
ಮಡಿಕೇರಿ, ಫೆಬ್ರವರಿ 13: ಕಳೆದ 24 ಗಂಟೆಗಳಲ್ಲಿ ಕೊಡಗಿನಲ್ಲಿ ಹುಲಿ ಪ್ರತ್ಯೇಕ ದಾಳಿಗೆ ಒಂದೇ ಕುಟುಂಬದ ಇಬ್ಬರು ಬಲಿಯಾಗಿದ್ದಾರೆ.
ಸೋಮವಾರ ಬೆಳಗ್ಗೆ ಕೇರಳದ ಹೊರವಲಯದಲ್ಲಿರುವ ಕೊಡಗಿನ ಪಲ್ಲೇರಿಯಲ್ಲಿ ಹುಲಿ ದಾಳಿಗೆ 75 ವರ್ಷದ ಕೃಷಿ ಕಾರ್ಮಿಕ ರಾಜು ಎಂಬುವವರು ಸಾವನ್ನಪ್ಪಿದ್ದಾರೆ. ಇದಕ್ಕೂ ಮೊದಲು ಭಾನುವಾರ ರಾಜು ಅವರ ಮೊಮ್ಮಗ ಚೇತನ್ (18) ಹುಲಿ ದಾಳಿಗೆ ಬಲಿಯಾಗಿದ್ದರು. ಭಾನುವಾರ ಹುಲಿ ದಾಳಿಯನ್ನು ತಡೆಯಲು ಯತ್ನಿಸಿದ ರಾಜು ಅವರ ಮಗ ಮತ್ತು ಚೇತನ್ ಅವರ ತಂದೆ ಮಧು ಗಾಯಗೊಂಡಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಜು ಬೆಳಗ್ಗೆ ಮನೆಯಿಂದ ಹೊರಗೆ ಬಂದಾಗ ಹುಲಿ ದಾಳಿ ಮಾಡಿದೆ. ಆಗ ತೀವ್ರವಾಗಿ ಗಾಯಗೊಂಡ ರಾಜು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ನಾಗರಹೊಳೆ ಎಸಿಎಫ್ ಗೋಪಾಲ್ ಹಾಗೂ ಹುಲಿ ಕಾರ್ಯಾಚರಣೆ ತಂಡದ ಸಿಬ್ಬಂದಿ ಭೇಟಿ ನೀಡಿದ್ದಾರೆ. ಕಾಫಿ ಎಸ್ಟೇಟ್‌ನಲ್ಲಿ ಕಾಣಿಸಿಕೊಂಡಿರುವ ಹುಲಿಯನ್ನು ಹಿಡಿಯಲು ಅರಣ್ಯಾಧಿಕಾರಿಗಳು ಸಕಲ ಸಿದ್ಧತೆ ನಡೆಸುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಭೇಟಿ ನೀಡಿದ್ದಾರೆ. ಹುಲಿ ದಾಳಿಯಿಂದ ನಿವಾಸಿಗಳಲ್ಲಿ ಭಯ ಆವರಿಸಿದೆ. ಕಳೆದ ಐದು ವರ್ಷಗಳಿಂದ ಕೊಡಗಿನ ದಕ್ಷಿಣ ಭಾಗದಲ್ಲಿ ಮನುಷ್ಯ ಹಾಗೂ ಹುಲಿ ಸಂಘರ್ಷ ಹೆಚ್ಚಿದ್ದು, ಕಾಡು ಪ್ರಾಣಿಗಳ ಹಾವಳಿ ನಿಯಂತ್ರಣಕ್ಕೆ ಕ್ರಮಕೈಗೊಳ್ಳುವಂತೆ ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.
ಹುಲಿ ದಾಳಿಗೆ ಅರಣ್ಯ ಇಲಾಖೆ ಕಾರಣ ಎಂದು ಆರೋಪಿಸಿ ಸಮೀಪದ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಈ ಎರಡೂ ಸಾವಿಗೆ ಒಂದೇ ಹುಲಿ ಕಾರಣವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಘಟನೆಯಿಂದ ಕೊಡಗು ಜಿಲ್ಲೆಯಲ್ಲಿ ಭಯ ಆವರಿಸಿದ್ದು, ಹಲವು ಕೂಲಿ ಕಾರ್ಮಿಕರು ಕೆಲಸಕ್ಕೆ ಹಾಜರಾಗಿಲ್ಲ. ಹುಲಿ ಹಿಡಿಯಲು ಅರಣ್ಯಾಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದಾರೆ.
ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್, ಎಚ್.ಪಿ.ಮಂಜುನಾಥ್ ಅವರು ವಿಧಾನಸಭೆ ಶೂನ್ಯವೇಳೆಯಲ್ಲೂ ಈ ವಿಷಯ ಪ್ರಸ್ತಾಪಿಸಿದ್ದರು. ಸರ್ಕಾರದ ಪರವಾಗಿ ಪ್ರತಿಕ್ರಿಯಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಮಾತನಾಡಲಾಗುವುದು. ಯಾವುದೇ ಅಧಿಕಾರಿಗಳ ನಿರ್ಲಕ್ಷ್ಯವು ಸಾವಿಗೆ ಕಾರಣವಾದರೆ ಸರ್ಕಾರವು ಬಿಡುವುದಿಲ್ಲ ಎಂದು ಅವರು ಹೇಳಿದರು.












Click it and Unblock the Notifications