ಕೊಡಗು ಪ್ರವಾಸಿಗರಿಗೆ ಗುಡ್‌ನ್ಯೂಸ್: ಪ್ರವಾಸೋದ್ಯಮ ಇಲಾಖೆ ಹೊಸ ವೆಬ್‌ಸೈಟ್ ಬಿಡುಗಡೆ
ಮಡಿಕೇರಿ, ಫೆಬ್ರವರಿ 02: ಕೊಡಗು ಪ್ರವಾಸ ಕೈಗೊಳ್ಳುವ ಪ್ರವಾಸಿಗರಿಗೆ ಅನುಕೂಲವಾಗುವಂತೆ ಪ್ರವಾಸೋದ್ಯಮ ಇಲಾಖೆ ಹೊಸ ವೆಬ್‌ಸೈಟ್ ವಿನ್ಯಾಸಗೊಳಿಸಿದೆ. ಜಿಲ್ಲೆಗೆ ಪ್ರವಾಸ ಹೋಗುವವರಿಗೆ ಅನುಕೂಲ ಮಾಡಿಕೊಡುವ ಅಗತ್ಯ ಮಾಹಿತಿಯನ್ನು ನೀಡುವ ವೆಬ್‌ಸೈಟ್ ಇದಾಗಿದ್ದು, ಪ್ರವಾಸದ ಯೊಜನೆ ರೂಪಿಸುತ್ತಿರುವವರು ವೆಬ್‌ಸೈಟ್ ಮೂಲಕ ಮಾಹಿತಿ ಪಡೆಯಬಹುದಾಗಿದೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ಈ ಹೊಸ ವೆಬ್‌ಸೈಟ್ ಲೋಕಾರ್ಪಣೆ ಮಾಡಿದ್ದಾರೆ. ಕೊಡಗು ಪ್ರಯಾಣ ಅನುಭವಗಳಿಗಾಗಿ ವಿಶ್ವಾಸಾರ್ಹ ಮಾಹಿತಿ ಮೂಲವನ್ನು ನೀಡುವ ಪ್ರವಾಸೋದ್ಯಮ ಇಲಾಖೆಯ ಅಧಿಕೃತ ವೆಬ್‍ಸೈಟ್ explorekodagu.com ಅನ್ನು ಅನಾವರಣಗೊಳಿಸಲಾಗಿದೆ.

ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು, ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ, ಕೊಡಗು ಜಿಲ್ಲೆಯ ಮುಖಾಂತರ ಕೊಡಗು ಪ್ರವಾಸೋದ್ಯಮದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜಿಲ್ಲೆಯ ಸಮಗ್ರ ಮಾಹಿತಿ ಹೊಂದಿರುವ ಅಧಿಕೃತ ವೆಬ್‍ಸೈಟ್ ತಯಾರು ಮಾಡಲಾಗಿದೆ.
ವೆಬ್‌ಸೈಟ್‌ನ ವಿಶೇಷತೆಗಳು: ಈ ವೆಬ್‍ಸೈಟ್ ಕೊಡಗಿನ ಸುಂದರ ಪ್ರವಾಸಿ ತಾಣಗಳನ್ನು ಸಂದರ್ಶಿಸಲು ಬಯಸುವವರು ಅಗತ್ಯ ಮಾಹಿತಿಯನ್ನು ನೀಡುತ್ತದೆ. ಅತ್ಯುತ್ತ ಮಾಹಿತಿಯನ್ನು ನೀಡುವ ಆನ್‍ಲೈನ್ ವೇದಿಕೆ ಇದಾಗಿದೆ. ವೆಬ್‍ಸೈಟ್‍ನಲ್ಲಿ ಅಧಿಕೃತವಾಗಿ ನೋಂದಾಯಿತ ಮತ್ತು ಪ್ರಮಾಣೀಕೃತ ಹೋಂ ಸ್ಟೇ, ರೆಸಾರ್ಟ್, ರೆಸ್ಟೋರೆಂಟ್, ಪ್ರವಾಸಿ ಮಾರ್ಗದರ್ಶಿಗಳು, ಟ್ಯಾಕ್ಸಿ ನಿರ್ವಾಹಕರ ಮಾಹಿತಿ ಇದೆ.
ನೋಂದಾಯಿತ ಹೋಂಸ್ಟೇ ಮತ್ತು ರೆಸಾರ್ಟ್‍ಗಳ ವಿವರಗಳನ್ನು ನೀಡಲಾಗಿದ್ದು, ಇವು ಪ್ರವಾಸಿಗರಿಗೆ ವಿಶ್ವಾಸಾರ್ಹ ಮತ್ತು ಸುರಕ್ಷಿತ ಅನುಭವ ಖಾತರಿಪಡಿಸುತ್ತದೆ. ಪ್ರವಾಸಿಗರಿಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಪ್ರಮಾಣೀಕರಿಸಿದ ರೆಸ್ಟೋರೆಂಟ್‌ಗಳ ವಿವರವನ್ನು ನೀಡಲಾಗಿದೆ.
ಪ್ರವಾಸೋದ್ಯಮ ನೀತಿ 2025-29 ಅಡಿಯಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಗುರುತಿಸಲ್ಪಟ್ಟ 778 ಪ್ರವಾಸಿ ತಾಣಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಗುರುತಿಸಿದ 23 ಪ್ರವಾಸಿ ತಾಣಗಳನ್ನು ಹಾಗೂ ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು, ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ, ಕೊಡಗು ಜಿಲ್ಲೆಯ ಮುಖಾಂತರ ಗುರುತಿಸಿರುವ ಪ್ರವಾಸಿ ತಾಣಗಳನ್ನು ಪಟ್ಟಿ ಮಾಡಲಾಗಿದೆ.
ಕೊಡಗು ಜಿಲ್ಲೆಯ ಪ್ರವಾಸೋದ್ಯಮವನ್ನು ಅಭಿವೃದ್ಧಿ ಹಾಗೂ ಪ್ರಚಾರ ಪಡಿಸುವ ಉದ್ದೇಶದಿಂದ ಜಿಲ್ಲೆಯ ಪ್ರವಾಸಿ ತಾಣಗಳ ಐತಿಹಾಸಿಕ, ಧಾರ್ಮಿಕ, ಸಾಹಿತ್ಯಕ, ಸಾಂಸ್ಕೃತಿಕ ಹಾಗೂ ಕಲಾ ವೈವಿಧ್ಯತೆಗಳನ್ನು ಒಳಗೊಂಡ ಸಂಪೂರ್ಣ ಮಾಹಿತಿಯನ್ನು ದೇಶ/ ವಿದೇಶಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ನೀಡಲಾಗಿದೆ.
ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಸಾರಿಗೆ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಲು ಸುರಕ್ಷಿತ ಮತ್ತು ವಿಶ್ವಾಸರ್ಹ ಸಾರಿಗೆ ಆಯ್ಕೆ, ಪ್ರಯಾಣ ಮಾರ್ಗಸೂಚಿಗಳನ್ನು ಪಾಲಿಸುವ ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಾಯಿಸಿರುವ ಅನುಮೋದಿತ ಟೂರ್ ಅಂಡ್ ಟ್ರಾವೆಲ್ ಆಪರೇಟರ್‌ಗಳ ವಿವರಗಳನ್ನು ನೀಡಲಾಗಿದೆ.
ಅಲ್ಲದೇ ವೆಬ್‌ಸೈಟ್‌ನಲ್ಲಿ ಜಿಲ್ಲೆಯ ಹೋಂಸ್ಟೇ, ರೆಸಾರ್ಟ್, ರೆಸ್ಟೋರೆಂಟ್ ಹಾಗೂ ಇತರೆ ಪ್ರವಾಸಿ ಉತ್ಪನ್ನಗಳನ್ನು ಮಾಲೀಕರು ಫೋಟೋ, ಫೋನ್ ನಂಬರ್ ಇತರ ಅಗತ್ಯ ವಿವರಗಳನ್ನು ತಮ್ಮ ಹಂತದಲ್ಲಿ ವೆಬ್‍ಸೈಟ್‍ಗೆ ಸೇರಿಸಲು ಅವಕಾಶ ಕಲ್ಪಿಸಲಾಗಿದೆ. ನಂತರ, ಬದಲಾವಣೆಗಳನ್ನು ಪ್ರವಾಸೋದ್ಯಮ ಇಲಾಖೆಯು ವೆಬ್‍ಸೈಟ್‍ನಲ್ಲಿ ಪ್ರದರ್ಶಿಸುವ ಮೊದಲು ಇಲಾಖೆಯಿಂದ ಪರಿಶೀಲಿಸಿ ವಿವರಗಳನ್ನು ಅನುಮೋದಿಸಲಾಗುತ್ತದೆ.












Click it and Unblock the Notifications