ಐಟಿ ಅಧಿಕಾರಿಗಳ ಮುಂದೆ ಹಾಜರಾದ ರಶ್ಮಿಕಾ ಮಂದಣ್ಣ
ಕೊಡಗು, ಜನವರಿ 16 : ನಟಿ ರಶ್ಮಿಕಾ ಮಂದಣ್ಣ ನಿವಾಸದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಪರಿಶೀಲನೆ ಮುಂದುವರೆದಿದೆ. ಚೆನ್ನೈನಿಂದ ರಶ್ಮಿಕಾ ಮಂದಣ್ಣ ವಿರಾಜಪೇಟೆಗೆ ಆಗಮಿಸಿದ್ದು, ಅಧಿಕಾರಿಗಳ ಮುಂದೆ ಹಾಜರಾದರು.
ಗುರುವಾರ ರಾತ್ರಿ ವಿರಾಜಪೇಟೆಯ ನಿವಾಸಕ್ಕೆ ರಶ್ಮಿಕಾ ಮಂದಣ್ಣ ಆಗಮಿಸಿದರು. ಆದಾಯ ತೆರಿಗೆ ಇಲಾಖೆಯ 10 ಅಧಿಕಾರಿಗಳ ತಂಡ ಅವರ ವಿಚಾರಣೆಯನ್ನು ನಡೆಸುತ್ತಿದ್ದಾರೆ. ಬೆಳಗ್ಗೆಯಿಂದ ಸಂಗ್ರಹಿಸಿದ ದಾಖಲೆಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ನಿವಾಸದ ಮೇಲೆ ಗುರುವಾರ ಬೆಳಗ್ಗೆ 7.30ರ ಸುಮಾರಿಗೆ ಐಟಿ ದಾಳಿ ನಡೆದಿತ್ತು. ತಡರಾತ್ರಿಯಾದರೂ ಪರಿಶೀಲನೆ ಕಾರ್ಯ ಮುಂದುವರೆದಿದ್ದು, ರಾತ್ರಿ ಊಟವನ್ನು ಮನೆಗೆ ತರಿಸಿಕೊಂಡು ಅಧಿಕಾರಿಗಳು ಕಾರ್ಯಾಚರಣೆ ಮುಂದುವರೆಸಿದ್ದಾರೆ.

ಚೆನ್ನೈನಲ್ಲಿ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದ ರಶ್ಮಿಕಾ ಮಂದಣ್ಣ ಅವರಿಗೆ ಅಧಿಕಾರಿಗಳ ಮುಂದೆ ಹಾಜರಾಗಲು ಸೂಚನೆ ನೀಡಲಾಗಿತ್ತು. ಅವರು ಚೆನ್ನೈನಿಂದ ಹೊರಟು ರಾತ್ರಿ ವಿರಾಜಪೇಟೆಯ ನಿವಾಸಕ್ಕೆ ಆಗಮಿಸಿದರು.
ಒಂದು ಬಾರಿ ನಟಿ ರಶ್ಮಿಕಾ ಮಂದಣ್ಣ ತಂದೆಯ ವಿಚಾರಣೆಯನ್ನು ಅಧಿಕಾರಿಗಳು ಮುಗಿಸಿದ್ದಾರೆ. ಅವರು ನೀಡಿರುವ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಈಗ ಅಧಿಕಾರಿಗಳು ರಶ್ಮಿಕಾ ವಿಚಾರಣೆ ನಡೆಸುತ್ತಿದ್ದು, ತಡರಾತ್ರಿ ತನಕ ಮುಂದುವರೆಯುವ ಸಾಧ್ಯತೆ ಇದೆ.












Click it and Unblock the Notifications