2025ರ ಮುಂಗಾರು ಮಳೆ: ಕೊಡಗು ಜಿಲ್ಲಾಧಿಕಾರಿಗಳ ಮಹತ್ವದ ಸಭೆ
ಮಡಿಕೇರಿ, ಮೇ 11: 2025ರ ಮುಂಗಾರು ಮಳೆ ಲೆಕ್ಕಾಚಾರಗಳು ಆರಂಭವಾಗಿದೆ. ಮೇ ಅಂತ್ಯಕ್ಕೆ ರಾಜ್ಯಕ್ಕೆ ಮುಂಗಾರು ಆಗಮಿಸುವ ನಿರೀಕ್ಷೆ ಇದೆ. ಈ ಭಾರಿ ವಾಡಿಕೆಯಷ್ಟು ಮಳೆಯಾಗಲಿದೆ ಎಂದು ಈಗಾಗಲೇ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂಗಾರು ಮಳೆ ಆರಂಭವಾಗುವ ಹಿನ್ನಲೆಯಲ್ಲಿ ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅಧಿಕಾರಿಗಳ ಜೊತೆ ಸಭೆಯನ್ನು ನಡೆಸಿದರು, ಹಲವು ಸೂಚನೆಗಳನ್ನು ನೀಡಿದರು.
ಮಡಿಕೇರಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು, "ಮುಂಗಾರು ಸಂಬಂಧ ನೋಡಲ್ ಅಧಿಕಾರಿಗಳು ಹಾಗೂ ಎಂಜಿನಿಯರ್‌ಗಳು ಈಗಿನಿಂದಲೇ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು" ಎಂದು ಸೂಚಿಸಿದರು.

"ಜಿಲ್ಲೆಯಲ್ಲಿ ಜೂನ್ ತಿಂಗಳಲ್ಲಿ ಮುಂಗಾರು ಆರಂಭವಾಗುವ ಸಾಧ್ಯತೆ ಇದೆ. ಆದ್ದರಿಂದ ವ್ಯಾಪಕ ಮಳೆಯಿಂದ ಸಂಭವಿಸಬಹುದಾದ ಅನಾಹುತವನ್ನು ತಡೆಯುವ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ಮುಂಗಾರು ಸಂದರ್ಭದಲ್ಲಿ ಯಾವುದೇ ರೀತಿಯ ಪ್ರಾಣ ಹಾನಿ, ಜಾನುವಾರು ಹಾನಿಯಾಗದಂತೆ ಎಚ್ಚರವಹಿಸಬೇಕು" ಎಂದು ಜಿಲ್ಲಾಧಿಕಾರಿಗಳು ಹೇಳಿದರು.
"ಈಗಾಗಲೇ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ತಮ್ಮ ತಮ್ಮ ವ್ಯಾಪ್ತಿಯಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ನಿಗಾವಹಿಸಬೇಕು. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜನರ ಸುರಕ್ಷತೆ ಕಾಪಾಡುವ ನಿಟ್ಟಿನಲ್ಲಿ ಅಗ್ನಿಶಾಮಕ ಸಿಬ್ಬಂದಿಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಎನ್‍ಡಿಆರ್‍ಎಫ್ ತಂಡದ ಜೊತೆ ಸಮನ್ವಯ ಸಾಧಿಸಬೇಕು" ಎಂದು ತಿಳಿಸಿದರು.
"ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಔಷಧಿಗಳನ್ನು ದಾಸ್ತಾನು ಮಾಡಿಕೊಂಡು ಮುಂಗಾರು ಸಂದರ್ಭದಲ್ಲಿ ಸಾಂಕ್ರಾಮಿಕ ರೋಗಗಳು ಉಲ್ಭಣಗೊಳ್ಳದಂತೆ ಹೆಚ್ಚಿನ ಜಾಗೃತಿ ಮೂಡಿಸಬೇಕು. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಎಚ್ಚರವಹಿಸಬೇಕು. ಲೋಕೋಪಯೋಗಿ, ಪಂಚಾಯತ್ ರಾಜ್ ಇಲಾಖೆ ಎಂಜಿನಿಯರ್‌ಗಳು ತಮ್ಮ ತಮ್ಮ ವ್ಯಾಪ್ತಿಯ ರಸ್ತೆಯನ್ನು ಸರಿಪಡಿಸಬೇಕು" ಎಂದು ಸೂಚಿಸಿದರು.
ಪೊಲೀಸ್, ಕಂದಾಯ, ಪಂಚಾಯತ್ ರಾಜ್, ಲೋಕೋಪಯೋಗಿ, ಅಗ್ನಿಶಾಮಕ ಹೀಗೆ ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ತಮ್ಮ ಇಲಾಖಾ ವ್ಯಾಪ್ತಿಯಲ್ಲಿ ಆಗಬೇಕಿರುವ ಕಾರ್ಯಗಳ ಬಗ್ಗೆ ಅಗತ್ಯ ಕ್ರಮವಹಿಸುವಂತೆ ಸಭೆಯಲ್ಲಿ ಸೂಚಿಸಲಾಯಿತು. ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಐಶ್ವರ್ಯ, ಉಪ ವಿಭಾಗಾಧಿಕಾರಿ ವಿನಾಯಕ ನರ್ವಡೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.
ಬೇಗ ಮುಂಗಾರು ಆಗಮನ: ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ 12 ವರ್ಷಗಳ ಬಳಿಕ ಮುಂಗಾರು ಬೇಗನೇ ಆಗಮಿಸಲಿದೆ. ಕೇರಳಕ್ಕೆ ಮೇ 27ರಂದು ಮುಂಗಾರು ಪ್ರವೇಶ ಮಾಡಲಿದ್ದು, ಕರ್ನಾಟಕಕ್ಕೆ ಮೇ 30, 31ರಂದು ಆಗಮಿಸಲಿದೆ. ವಾಡಿಕೆಯಷ್ಟು ಮಳೆ ಈ ಬಾರಿ ರಾಜ್ಯದಲ್ಲಿ ಸುರಿಯಲಿದೆ.
2024ರ ಮುಂಗಾರು ಹಂಗಾಮಿನಲ್ಲಿಯೂ ರಾಜ್ಯದಲ್ಲಿ ಉತ್ತಮ ಮಳೆಯಾಗಿತ್ತು. ಆದ್ದರಿಂದ ಎಲ್ಲಾ ಡ್ಯಾಂಗಳು ಭರ್ತಿಯಾಗಿ ಕೃಷಿ ಚಟುವಟಿಕೆಗೆ ಸಹಾಯಕವಾಗಿತ್ತು. ಈ ಬಾರಿಯೂ ಉತ್ತಮ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
2009ರ ಮೇ ತಿಂಗಳ 23ರಂದು ಕೇರಳಕ್ಕೆ ಮುಂಗಾರು ಪ್ರವೇಶ ಮಾಡಿತ್ತು. ಆದಾದ ಬಳಿಕ ಮೇ ಅಂತ್ಯ ಜೂನ್ ಮೊದಲ ವಾರದಲ್ಲಿ ಮುಂಗಾರು ಮಳೆ ಪ್ರಾರಂಭವಾಗುತ್ತಿತ್ತು. ಆದರೆ ಈ ಬಾರಿ ಅವಧಿಗೂ ಮೊದಲೇ ಮುಂಗಾರು ಮಳೆ ಆರಂಭವಾಗುವ ನಿರೀಕ್ಷೆ ಇದೆ.












Click it and Unblock the Notifications