ಕೊಡಗಿನ ಹೋಂ ಸ್ಟೇಗಳ ಮೇಲೆ ತೀವ್ರ ನಿಗಾ ಇಡಿ; ಸಚಿವ ಸುಧಾಕರ್
ಮಡಿಕೇರಿ, ಅಕ್ಟೋಬರ್ 6: ಕೊಡಗು ಪ್ರವಾಸಿ ತಾಣವಾಗಿರುವ ಕಾರಣ ಜಿಲ್ಲೆಗೆ ಅತ್ಯಧಿಕ ಪ್ರವಾಸಿಗರು ಬರುತ್ತಿರುತ್ತಾರೆ. ಹೀಗಾಗಿ ಹೊರಜಿಲ್ಲೆ, ರಾಜ್ಯಗಳಿಂದ ಬರುವವರನ್ನು ಪರೀಕ್ಷಿಸಿಯೇ ಕೊಡಗಿಗೆ ಪ್ರವೇಶ ನೀಡಿ ಎಂದು ವೈದ್ಯಕೀಯ ಸಚಿವ ಡಾ. ಸುಧಾಕರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲೆಯಲ್ಲಿನ ಹೋಂ ಸ್ಟೇಗಳ ಮೇಲೂ ನಿಗಾ ಇರಿಸಿ. ಪ್ರವಾಸಿಗರಿಂದ ಸೋಂಕು ಹರಡದಂತೆ ಕಟ್ಟೆಚ್ಚರ ವಹಿಸಿ. ಪ್ರವಾಸಿ ತಾಣಗಳ ಹಾಟ್ ಸ್ಪಾಟ್ ಗಳಲ್ಲಿ ಪೊಲೀಸ್ ಇಲಾಖೆಯಿಂದ ಚೆಕ್ ಪೋಸ್ಟ್ ಅಳವಡಿಸಿ, ಹೆಚ್ಚು ಜನ ಒಂದೆಡೆ ಸೇರದಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.
ಇದೇ ಸಂದರ್ಭ ಕೊಡಗಿನ ಹಾಟ್ ಸ್ಪಾಟ್ ಗಳಲ್ಲಿ ಸೋಂಕು ತಡೆಗೆ ಹೆಚ್ಚಿನ ನಿಗಾ ವಹಿಸಬೇಕೆಂದು ಶಾಸಕ ಕೆ.ಜಿ.ಬೋಪಯ್ಯ ಹಾಗೂ ಎಂ.ಪಿ. ಅಪ್ಪಚ್ಚು ರಂಜನ್ ಸಲಹೆ ನೀಡಿದರು. ಪ್ರತೀ ದಿನ ಹಾಟ್ ಸ್ಪಾಟ್ ಗಳಲ್ಲಿ ಪರೀಕ್ಷೆ ಕೈಗೊಳ್ಳುವುದು ಅಗತ್ಯ. ವಿಶೇಷವಾಗಿ ಕೊಡಗಿನ ಸಂತೆ ಪ್ರದೇಶಗಳಲ್ಲಿ ಕೊರೊನಾ ಸೋಂಕಿನ ಬಗ್ಗೆ ನಿಗಾ ಅಗತ್ಯ ಎಂದು ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದರು.

ಸಂತೆಯಿಂದ ಕೊರೊನಾ ಸೋಂಕು ಜನರಿಗೆ ಬಹಳ ಬೇಗ ಹಬ್ಬುವ ಸಾಧ್ಯತೆಯಿದೆ. ಹೀಗಾಗಿ ಜಿಲ್ಲೆಯಲ್ಲಿ ಸಂತೆ ನಡೆಯುವ ಪ್ರದೇಶಗಳನ್ನು ಸೂಕ್ತ ಪ್ರದೇಶಗಳಿಗೆ ಸ್ಥಳಾಂತರ ಮಾಡುವುದು ಸೂಕ್ತ ಎಂದೂ ಹೇಳಿದರು. ಜೊತೆಗೆ ಕೇರಳದಲ್ಲಿ ಕೊರೊನಾ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೆ.144 ನಿಯಮ ವಿಧಿಸಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಆದರೆ ಕರ್ನಾಟಕದಲ್ಲಿ ಸೆ.144 ವಿಧಿಸಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.












Click it and Unblock the Notifications