ಈ ಬಾರಿ ಮಡಿಕೇರಿ ದಸರಾದಲ್ಲಿ ಕಾಫಿ ಘಮಲು: ಹೆಚ್ಚಿನ ಮಾಹಿತಿ ವಿವರ ತಿಳಿಯಿರಿ
ಮಡಿಕೇರಿ ಸೆಪ್ಟೆಂಬರ್ 16: ಈ ಬಾರಿಯ ಮಡಿಕೇರಿ ದಸರಾಕ್ಕೆ ಭರ್ಜರಿ ಸಿದ್ಧತೆ ಆರಂಭವಾಗಿದ್ದು, ಮಂಜಿನ ನಗರಿಯ ದಸರಾ ವೈಭವವನ್ನು ಕಣ್ತುಂಬಿಕೊಳ್ಳಲು ಜನ ಕಾತುರರಾಗಿದ್ದಾರೆ. ಈ ಬಾರಿಯ ವಿಶೇಷವೆಂದರೆ ಮಡಿಕೇರಿ ದಸರಾದಲ್ಲಿ ಕಾಫಿ ಕಂಗೊಳಿಸಲಿದೆ. ಯುವ ದಸರಾ, ಸಾಂಸ್ಕೃತಿಕ ದಸರಾ, ಜಾನಪದ ದಸರಾ ಜೊತೆಗೆ 2024ರ ವಿಶೇಷವಾಗಿ ಕಾಫಿ ದಸರಾ ನಡೆಯಲಿದೆ.
ಅಕ್ಟೋಬರ್ 6 ಮತ್ತು 7ರಂದು ಮಡಿಕೇರಿ ದಸರಾ ಪ್ರಯುಕ್ತ ಗಾಂಧಿ ಮೈದಾನದಲ್ಲಿ ಕಾಫಿ ದಸರಾ ಕಂಗೊಳಿಸಲಿದ್ದು, ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಪರಿಕಲ್ಪನೆಯಲ್ಲಿ ಮಡಿಕೇರಿ ದಸಾರಕ್ಕೆ ಈ ವರ್ಷದಿಂದ ಕಾಫಿ ದಸರಾ ಸೇರ್ಪಡೆಯಾಗುತ್ತಿದೆ ಎಂದು ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಹೆಚ್.ಟಿ ಮಾಹಿತಿ ನೀಡಿದ್ದಾರೆ

ಜಿಲ್ಲಾ ಉಸ್ತುವಾರಿ ಸಚಿವ ಎನ್ ಎಸ್ ಬೋಸರಾಜು ಅಧ್ಯಕ್ಷತೆಯಲ್ಲಿ ನಡೆದ ದಸರಾ ಪೂವ೯ಭಾವಿ ಸಭೆಯಲ್ಲಿ ಮಾಹಿತಿ ನೀಡಿದ ಅನಿಲ್, ಮಕ್ಕಳ ದಸರಾಕ್ಕೆ 11 ವರ್ಷ, ಮಹಿಳಾ ದಸರಾಕ್ಕೆ 7 ವರ್ಷ, ಜಾನಪದ ದಸರಾಕ್ಕೆ 5 ವರ್ಷವಾದ ಈ ಸಂದರ್ಭದಲ್ಲಿ ಮಡಿಕೇರಿ ಶಾಸಕ ಡಾ ಮಂಥರ್ ಗೌಡ ಅವರ ಕಲ್ಪನೆಯಂತೆ ದಸರಾಕ್ಕೆ ಕಾಫಿ, ತೋಟಗಾರಿಕಾ ಕೃಷಿಯನ್ನು ಸೇರ್ಪಡೆಯಾಗಿಸಿಕೊಂಡು ವಿನೂತನ ಕಾರ್ಯಕ್ರಮ ರೂಪಿಸಲಾಗುತ್ತಿದೆ.
ಶಾಸಕ ಮಂಥರ್ ಗೌಡ ಪ್ರಯತ್ನದ ಫಲವಾಗಿ ರಾಜ್ಯ ತೋಟಗಾರಿಕಾ ಇಲಾಖೆ, ಕೇಂದ್ರೀಯ ಕಾಫಿ ಮಂಡಳಿಯವರು ವಿವಿಧ ಮಳಿಗೆಗಳನ್ನು ತೆರೆಯಲಿದ್ದಾರೆ. ಕಾಫಿ ದಸರಾಕ್ಕೆ ಕಾಫಿಗೆ ಸಂಬಂಧಿಸಿದ ವಿವಿಧ ಬೆಳೆಗಾರರ ಸಂಘಸಂಸ್ಥೆಗಳ ಸಹಕಾರವನ್ನು ಪಡೆಯಲಾಗುತ್ತದೆ ಎಂದು ಮಾಹಿತಿ ನೀಡಿದರು.
ಅಕ್ಟೋಬರ್ 4 ರಂದು ಗಾಂಧಿ ಮೈದಾನದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ದೊರಕಲಿದೆ. 5 ರಂದು ಮಕ್ಕಳ ದಸರಾ, 6 ರಂದು ಯುವದಸರಾ, 6 ಮತ್ತು 7 ರಂದು ಬೆಳಗ್ಗೆ ಕಾಫಿ ದಸರಾ ಉತ್ಸವ, 8 ರಂದು ಮಹಿಳಾ ದಸರಾ, 9 ರಂದು ಕವಿಗೋಷ್ಟಿ, 10 ರಂದು ಜಾನಪದ ದಸರಾ, 11 ರಂದು ಆಯುಧಪೂಜೆ, 12 ರಂದು ವಿಜಯದಶಮಿ ಕಾರ್ಯಕ್ರಮಗಳು ಆಯೋಜಿತವಾಗಿದೆ ಎಂದು ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಸಭೆಗೆ ಮಾಹಿತಿ ನೀಡಿದರು.

ದಸರಾ ಸಂದರ್ಭ ಮಡಿಕೇರಿಯ ರಸ್ತೆ ಗುಂಡಿಗಳನ್ನು ಮುಚ್ಚುವುದು, ದಶ ಮಂಟಪ ಸಾಗಲು ಸೂಕ್ತ ರಸ್ತೆ ದುರಸ್ಥಿ ಮಾಡುವಂತೆ ಹಾಗೂ ದಸರಾಕ್ಕೆ ಹೆಚ್ಚಿನ ಅನುದಾನ ನೀಡುವಂತೆ ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ಮಹೇಶ್ ಜೈನಿ, ಎಂ ಬಿ ದೇವಯ್ಯ, ಸತೀಶ್ ಪೈ, ಕೆ.ಎಸ್ ರಮೇಶ್, ಬಿ.ಎಂ ರಾಜೇಶ್ ಅನಿತಾ ಪೂವಯ್ಯ ಮನವಿ ಮಾಡಿದರು. ಈ ವೇಳೆ ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾಕ್ಕೆ ಅನುದಾನ ಸಂಬಂಧಿತ ಮಂಗಳವಾರ ಮಾಹಿತಿ ನೀಡುವುದಾಗಿ ಜನಪ್ರತಿನಿಧಿಗಳು ಭರವಸೆ ನೀಡಿದರು.












Click it and Unblock the Notifications