ಭಾರೀ ಮಳೆ; ಕೊಡಗು ಜಿಲ್ಲಾಡಳಿತದಿಂದ ಪ್ರವಾಸಿಗರಿಗೆ ಸೂಚನೆ
ಮಡಿಕೇರಿ, ಜುಲೈ 28; ಕೊಡಗು ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಆದರೆ ಪ್ರವಾಸಿಗರು ಸಹ ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಆದ್ದರಿಂದ ಕೊಡಗು ಜಿಲ್ಲಾಡಳಿತ ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಹಲವು ಸೂಚನೆಗಳನ್ನು ನೀಡಿದೆ.
ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ಪ್ರಕಟಣೆ ಮೂಲಕ ಈ ಕುರಿತು ಮಾಹಿತಿ ನೀಡಿದ್ದಾರೆ. ಮಳೆ ಹಿನ್ನಲೆಯಲ್ಲಿ ಜಿಲ್ಲೆಯ ಬಹುತೇಕ ಜಲಾಶಯಗಳು, ಜಲಪಾತಗಳು, ನದಿಗಳು ಉಕ್ಕಿ ಹರಿಯುತ್ತಿವೆ. ಅದರಲ್ಲೂ ಜಿಲ್ಲೆಯ ಪ್ರಕೃತಿ ಸೌಂದರ್ಯ ಮತ್ತಷ್ಟು ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ಜಿಲ್ಲೆಗೆ ಪ್ರಕೃತಿ ಸೌಂದರ್ಯವನ್ನು ವಿಕ್ಷೀಸಲು ಬರುವಂತಹ ಸಾರ್ವಜನಿಕರು/ ಪ್ರವಾಸಿಗರು ಸೌಂದರ್ಯಕ್ಕೆ ಮನಸೋತು ಬಹಳ ಹತ್ತಿರದಿಂದ ಫೋಟೋ ಅಥವಾ ವಿಡಿಯೋ ತೆಗೆಯುವ, ರೀಲ್ಸ್ ಮಾಡುವ ಅನಗತ್ಯ ಸಾಹಸ ಮಾಡದಿರಿ, ಕಲ್ಲು ಬಂಡೆಗಳು, ಒದ್ದೆಯಾಗಿ ಜಾರುತ್ತಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರವಾಸಿ ಮಿತ್ರರ ನಿಯೋಜನೆ; ಪ್ರವಾಸಿಗರಿಗೆ ಹೊಸ ಪ್ರದೇಶದಲ್ಲಿನ ಪರಿಸರದ ಬಗ್ಗೆ ಅರಿವಿರುವುದಿಲ್ಲ. ಆದ್ದರಿಂದ ಸ್ಥಳೀಯರ ಮಾತುಗಳನ್ನು ಗೌರವಿಸಿ, ಪ್ರವಾಸಿ ತಾಣಗಳಲ್ಲಿ ಅನುಸರಿಸಬೇಕಾದ ಕನಿಷ್ಠ ನಿಯಮಗಳ ಅನುಸರಿಸಿ, ಅಲ್ಲದೇ ಪ್ರವಾಸೋದ್ಯಮ ಇಲಾಖೆಯಿಂದ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ದೇಶಿಯ ಹಾಗೂ ವಿದೇಶಿಯ ಪ್ರವಾಸಿಗರಿಗೆ, ಸೂಕ್ತ ಸುರಕ್ಷತೆ ಮತ್ತು ಭದ್ರತೆಯನ್ನು ಕಲ್ಪಿಸುವ ದೃಷ್ಟಿಯಿಂದ ಪ್ರವಾಸಿ ಮಿತ್ರರನ್ನೂ ಸಹ ನಿಯೋಜಿಸಲಾಗಿದೆ ಎಂದು ಜಿಲ್ಲಾಡಳಿತ ಹೇಳಿದೆ.
ಆದರೂ ಸಹ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ನೀಡಿರುವ ಮುನ್ನೆಚ್ಚರಿಕೆಯನ್ನು ನಿರ್ಲಕ್ಷಿಸಿ ತಮ್ಮ ಅಮೂಲ್ಯ ಜೀವವನ್ನು ಹಾನಿ ಮಾಡಿಕೊಳ್ಳುವ ಸಾಹಸಕ್ಕೆ ಕೈ ಹಾಕದಂತೆ ಈ ಮೂಲಕ ಮನವಿ ಮಾಡಲಾಗಿದೆ. ಒಂದು ಸಣ್ಣ ತಪ್ಪು ನಡೆ ಜೀವಕ್ಕೆ ಎರವಾದೀತು ಎಂಬುದನ್ನು ಪ್ರವಾಸಿಗರು ಮನಗಂಡು ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಕರೆ ನೀಡಲಾಗಿದೆ.
ಹೋಟೆಲ್, ಹೋಂ-ಸ್ಟೇ, ರೆಸಾರ್ಟ್‍ಗಳಲ್ಲಿ ತಂಗುವ ಸಾರ್ವಜನಿಕರಿಗೆ/ ಪ್ರವಾಸಿಗರಿಗೆ ಮಾಲೀಕರು ಅಥವಾ ಸಿಬ್ಬಂದಿಗಳು ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಜಾಗೃತಿ ಹಾಗೂ ಸುರಕ್ಷತೆಯಿಂದ ಇರುವ ಬಗ್ಗೆ ಅರಿವು ಮೂಡಿಸಬೇಕು ಎಂದು ಜಿಲ್ಲಾಡಳಿತ ತಿಳಿಸಿದೆ.
ಈ ಎಲ್ಲ ಪ್ರಯತ್ನಗಳ ಹೊರತಾಗಿಯೂ ಪ್ರವಾಸಿಗರು ಸರ್ಕಾರದಿಂದ ವಿಧಿಸಿರುವ ನಿರ್ಬಂಧಗಳನ್ನು ಉಲ್ಲಂಘಿಸಿದಲ್ಲಿ ಹಾಗೂ ಸುರಕ್ಷತಾ ಕ್ರಮಗಳನ್ನು ಪಾಲಿಸದಿದ್ದಲ್ಲಿ ಪ್ರವಾಸಿಗರ ಮೇಲೆ ನಿಯಮಾನುಸಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಎಚ್ಚರಿಕೆ ನೀಡಿದ್ದಾರೆ.
ಮಳೆಯ ವಿವರ; ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 23.65 ಮಿ. ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 20.18 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 1521.47 ಮಿ. ಮೀ., ಕಳೆದ ವರ್ಷ ಇದೇ ಅವಧಿಯಲ್ಲಿ 1900.41 ಮಿ. ಮೀ. ಮಳೆಯಾಗಿತ್ತು.
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು. ಇಂದಿನ ನೀರಿನ ಮಟ್ಟ 2,854.77 ಅಡಿಗಳು. ಕಳೆದ ವರ್ಷ ಇದೇ ದಿನ 2856.98 ಅಡಿಗಳ ನೀರಿತ್ತು. ಹಾರಂಗಿಯಲ್ಲಿ ಬಿದ್ದ ಮಳೆ 15.20 ಮಿ. ಮೀ., ಕಳೆದ ವರ್ಷ ಇದೇ ದಿನ 16.40 ಮಿ. ಮೀ. ಮಳೆಯಾಗಿತ್ತು. ಹಾರಂಗಿ ಜಲಾಶಯದ ಇಂದಿನ ನೀರಿನ ಒಳಹರಿವು 9,926 ಕ್ಯುಸೆಕ್, ಹೊರ ಹರಿವು ನದಿಗೆ 5875 ಕ್ಯುಸೆಕ್. ನಾಲೆಗೆ 20 ಕ್ಯುಸೆಕ್.












Click it and Unblock the Notifications