ಕೊರೊನಾದಿಂದ ಕೊಡಗಿನ ದುಬಾರೆ ಸಾಕಾನೆ ಶಿಬಿರದತ್ತಲೂ ಕಣ್ಣು
ಮಡಿಕೇರಿ, ಏಪ್ರಿಲ್ 13: ಕೊರೊನಾ ವೈರಸ್ ಮನುಷ್ಯರನ್ನು ಮಾತ್ರ ಕಾಡದೆ, ಸಾಕು ಪ್ರಾಣಿಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿರುವ ಕಾರಣ ಮೃಗಾಲಯ ಸೇರಿದಂತೆ ಸಾಕಾನೆ ಶಿಬಿರಗಳತ್ತ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ.
ಇದೀಗ ಕೊಡಗಿನ ಕುಶಾಲನಗರ ಸಮೀಪದ ದುಬಾರೆ ಸಾಕಾನೆ ಶಿಬಿರದಲ್ಲಿ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗಿದೆ. ಎಲ್ಲವೂ ಸರಿಯಾಗಿದ್ದಿದ್ದರೆ ಇಷ್ಟರಲ್ಲೇ ಕೊಡಗಿನ ಪ್ರವಾಸಿ ತಾಣಗಳಲ್ಲೊಂದಾದ ದುಬಾರೆಗೆ ಸಹಸ್ರಾರು ಮಂದಿ ಪ್ರವಾಸಿಗರು ಆಗಮಿಸಿ, ಕಾವೇರಿ ನದಿ ನೀರಲ್ಲಿ ಆಟವಾಡಿ, ಸಾಕಾನೆಗಳ ಮೇಲೆ ಕುಳಿತು ಸವಾರಿ ಮಾಡಿ ಹೋಗುತ್ತಿದ್ದರು. ಆದರೆ ಈಗ ಎಲ್ಲವೂ ಉಲ್ಟಾ ಆಗಿದೆ.
ಸದ್ಯ ಇಲ್ಲಿನ ಸಾಕಾನೆಗಳನ್ನು ಆರೋಗ್ಯವಾಗಿಡುವುದರತ್ತ ಅರಣ್ಯಾಧಿಕಾರಿಗಳು ಮುತುವರ್ಜಿ ವಹಿಸಿದ್ದಾರೆ. ಈಗಾಗಲೇ ಮಡಿಕೇರಿ ಭಾಗದ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಅವರು ದುಬಾರೆ ಸಾಕಾನೆ ಶಿಬಿರಕ್ಕೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಪರಿಶೀಲಿಸಿದ್ದು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಅದರಂತೆ ಒಂದಷ್ಟು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.

ದುಬಾರೆ ಶಿಬಿರದಲ್ಲಿ 31 ಸಾಕಾನೆಗಳಿವೆ. ಅವುಗಳನ್ನು ಜತನದಿಂದ ನೋಡಿಕೊಳ್ಳುವ ಕೆಲಸವನ್ನು ಮಾವುತರು ಮತ್ತು ಕಾವಾಡಿಗಳು ಮಾಡುತ್ತಿದ್ದಾರೆ. ಅಲ್ಲದೆ ಸಾಕಾನೆಗಳನ್ನು ಒಂದರಿಂದ ಮತ್ತೊಂದಕ್ಕೆ ಅಂತರ ಕಾಪಾಡುವ ಸಲುವಾಗಿ ದೂರ ದೂರವಾಗಿ ಕಟ್ಟಲಾಗುತ್ತಿದೆ. ಶಿಬಿರಕ್ಕೆ ಹೊರಗಿನಿಂದ ಯಾರೂ ಬರದಂತೆ ನೋಡಿಕೊಳ್ಳಲಾಗುತ್ತಿದೆ. ಸುಮಾರು 12,757 ಎಕರೆ ವಿಸ್ತೀರ್ಣ ಹೊಂದಿರುವ ದುಬಾರೆ ಅರಣ್ಯ ಪ್ರದೇಶದಲ್ಲಿ ತಲತಲಾಂತರದಿಂದ ಗಿರಿಜನರು ವಾಸಿಸುತ್ತಾ ಬಂದಿದ್ದಾರೆ. ಸದ್ಯ ಇಲ್ಲಿ 60 ಕುಟುಂಬಗಳು ವಾಸಿಸುತ್ತಿವೆ. ಈ ಪೈಕಿ ಕೆಲವು ಕುಟುಂಬಗಳು ಮಾವುತ, ಕಾವಾಡಿಗಳಾಗಿವೆ. ಉಳಿದಂತೆ ಕೂಲಿ ಕೆಲಸ ಮಾಡಿ ಬದುಕುತ್ತಿದ್ದಾರೆ.

ಈ ಗಿರಿಜನ ಕುಟುಂಬಗಳ ಬಗ್ಗೆ ಎಲ್ಲಾ ರೀತಿಯ ಅಗತ್ಯ ವಸ್ತುಗಳನ್ನು ವಿತರಿಸಲು ಕೂಡ ಕ್ರಮ ಕೈಗೊಳ್ಳಲಾಗಿದೆ. ಸಾಕಾನೆ ಶಿಬಿರದ ಬಗ್ಗೆ ಉಸ್ತುವಾರಿ ಅಧಿಕಾರಿ ಕೆ. ರಂಜನ್ ಸಂಪೂರ್ಣ ನಿಗಾ ವಹಿಸಿದ್ದರೆ, ವನ್ಯಜೀವಿ ತಜ್ಞರು ಶಿಬಿರಕ್ಕೆ ಆಗಾಗ್ಗೆ ಭೇಟಿ ನೀಡಿ ಆನೆಗಳ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ.












Click it and Unblock the Notifications