ಇವತ್ತಿನ ಬರ ಪರಿಸ್ಥಿತಿಗೆ ಕಾರಣ ಏನು ಗೊತ್ತಾ?

By: ಮಡಿಕೇರಿ ಪ್ರತಿನಿಧಿ
Subscribe to Oneindia Kannada

ಮಡಿಕೇರಿ, ಸೆಪ್ಟೆಂಬರ್ 19: ಈ ಬಾರಿ ವಾಡಿಕೆಯ ಮಳೆಯಾಗಿ, ಕಾವೇರಿ ತುಂಬಿ ಹರಿದಿದ್ದರೆ ಜಲವಿವಾದ ಭುಗಿಲೇಳುತ್ತಿರಲಿಲ್ಲ. ಯಾವಾಗ ಕೊಡಗಿನಲ್ಲಿ ಮಳೆ ಸುರಿಯುವುದು ಕಡಿಮೆಯಾಯಿತೋ ಆಗಲೇ ಈ ಬಾರಿ ಮತ್ತೆ ನೀರಿಗಾಗಿ ವಿವಾದ ಶುರುವಾಗುತ್ತದೆ ಎಂಬುದು ಗೊತ್ತಾಗಿ ಹೋಗಿತ್ತು.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕಡಿಮೆ ಪ್ರಮಾಣದ ಮಳೆಯಾಗಿದೆ. ಕಳೆದ ವರ್ಷ ಕೆಆರ್‍ಎಸ್ ಭರ್ತಿಯಾಗಿರಲಿಲ್ಲ. ಈ ವರ್ಷ ಭರ್ತಿಯಾಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ ಇಲ್ಲಿ ತನಕ ಕೊಡಗಿನಲ್ಲಿ ಒಮ್ಮೆ ಮಾತ್ರ ಪ್ರವಾಹದ ಪರಿಸ್ಥಿತಿ ತಲೆದೋರಿದ್ದು. ಬಳಿಕ ಕಾವೇರಿ ನದಿ ತುಂಬಿ ಹರಿಯುವಂತಹ ಮಳೆ ಸುರಿಯಲೇ ಇಲ್ಲ.[ಅಕ್ಟೋಬರ್ 17ರಂದು ತಲ ಕಾವೇರಿಯಲ್ಲಿ ತೀರ್ಥೋದ್ಭವ]

Hitention

ಇಷ್ಟಕ್ಕೂ ಕೊಡಗಿನಲ್ಲಿ ಮಳೆ ಕಡಿಮೆಯಾಗಲು ಕಾರಣ ಏನು ಎಂಬುದನ್ನು ನೋಡಿದರೆ ಇಲ್ಲಿನ ಪ್ರಕೃತಿ ಮೇಲೆ ನಡೆದ ಅತ್ಯಾಚಾರಗಳು, ಅದಕ್ಕೆ ಸರಕಾರಗಳು ನೀಡಿದ ಕುಮ್ಮಕ್ಕು ಎಲ್ಲವೂ ಬಯಲಾಗುತ್ತಾ ಹೋಗುತ್ತದೆ. ಕೊಡಗಿನ ಅರಣ್ಯದಲ್ಲಿ ನಡೆದ ಮರಹನನಗಳು ಕಾರಣವಾಗಿವೆ.

ಇನ್ನು ಹಸಿರು ಕ್ರಾಂತಿ ಮಾಡುವ ಭರದಲ್ಲಿ ತೇಗ, ನೀಲಗಿರಿ ಅಂತಹ ಪರಿಸರಕ್ಕೆ ಒಗ್ಗದ ಮರಗಳನ್ನು ಬೆಳೆಸಿದ್ದು, ಹೈಟೆನ್ಷನ್ ಮಾರ್ಗವನ್ನು ಕೇರಳಕ್ಕೆ ಜಿಲ್ಲೆಯ ಮೂಲಕ ಕೊಂಡೊಯ್ದು ಅರಣ್ಯವನ್ನು ನಾಶ ಮಾಡಿದ್ದು ಎಲ್ಲವೂ ಕೊಡಗಿನ ಪ್ರಕೃತಿ ಮೇಲೆ ಮಾಡಿದ ಅತ್ಯಾಚಾರವಾಗಿದೆ.

ಕೆಲ ದಶಕಗಳ ಹಿಂದೆ ಹಾರಂಗಿಯಲ್ಲಿ ಅಣೆಕಟ್ಟೆ ಕಟ್ಟಿದ ಸರಕಾರ ದಕ್ಷಿಣ ಕೊಡಗಿನಲ್ಲಿ ಬರಪೊಳೆ ನದಿಗೆ ಅಣೆಕಟ್ಟೆ ಕಟ್ಟುವ ಪ್ರಸ್ತಾಪ ಇಟ್ಟಿತು. ಜನ ಒಂದಾಗಿ ಹೋರಾಟ ನಡೆಸಿದರ ಪರಿಣಾಮ ಕೈಬಿಡಲಾಯಿತು. ಪಶ್ಚಿಮಘಟ್ಟದ ಅರಣ್ಯದ ಮೇಲೆ ನಿರಂತರವಾಗಿ ಅತ್ಯಾಚಾರ ನಡೆದಿದೆ. ಅದರ ಪರಿಣಾಮ ಈಗಿನಿಂದಲೇ ಗೊತ್ತಾಗತೊಡಗಿದೆ.[ಭಾಗಮಂಡಲದಲ್ಲಿ ಮಳೆಗಾಗಿ ಯಜ್ಞ: ಸ್ಥಳೀಯರ ಅಸಮಾಧಾನ]

ಕೊಡಗಿನ ಮೂಲಕ ಹೈಟೆನ್ಷನ್ ವಿದ್ಯುತ್ ಮಾರ್ಗವನ್ನು ಕೊಂಡೊಯ್ಯಲಾಯಿತು. ದಟ್ಟ ಅರಣ್ಯ ಮತ್ತು ಕಾಫಿ ತೋಟ, ಗದ್ದೆಗಳಿಗಾಗಿ ಕೊಂಡೊಯ್ಯಲಾಯಿತು. ಇದನ್ನು ವಿರೋಧಿಸಿ ಕೊಡಗಿನಲ್ಲಿ ಭಾರೀ ಹೋರಾಟ ನಡೆಯಿತು. ಮಂಡ್ಯದ ರೈತರು ಬಂದು ಧರಣಿ ಕುಳಿತು ಬೆಂಬಲ ನೀಡಿದರು. ಆದರೆ ಸರಕಾರ ಇದರ ಬಗ್ಗೆ ತಲೆ ಕೆಡಿಸಿಕೊಳ್ಳಲೇ ಇಲ್ಲ.

ಹೋರಾಟಗಾರರ ಹತ್ತಿಕ್ಕುವ ಪ್ರಯತ್ನ ನಡೆಯಿತೇ ವಿನಾ ಪರಸರ ಸಂರಕ್ಷಣೆಯತ್ತ ಗಮನಹರಿಸಲೇ ಇಲ್ಲ. ಅಷ್ಟೇ ಅಲ್ಲ, ಹೈಟೆನ್ಷನ್ ಮಾರ್ಗದಿಂದ ಮುಂದೆ ಆಗಬಹುದಾದ ಅನಾಹುತದ ಬಗ್ಗೆಯೂ ಯಾರೂ ತಲೆ ಕೆಡಿಸಿಕೊಳ್ಳಲಿಲ್ಲ. ಎಲ್ಲವನ್ನು ಮೀರಿ ದಟ್ಟ ಅರಣ್ಯದ ಮೂಲಕವೇ ತಂತಿ ಕಂಬಗಳನ್ನೆಳೆಯಲು ಸರಕಾರ ಮುಂದಾಯಿತು.[ಕಾವೇರಿ ತವರುಮನೆಯ ಸೋಮವಾರಪೇಟೆ ಆನೆಕೆರೆಯಲ್ಲೇ ನೀರಿಲ್ಲ!]

ಅದರೊಂದಿಗೆ ಮರಗಳು ನೆಲಕ್ಕುರುಳಿ ಅದು ಎಲ್ಲಿಗೆ ಸೇರಬೇಕೋ ಅಲ್ಲಿಗೆ ಸೇರಿದವು. ಹಸಿರು ನ್ಯಾಯಾಲಯಕ್ಕೆ ಪ್ರಕರಣ ಹೋದರೂ ಪ್ರಯೋಜನ ಕಾಣದಾಯಿತು. ಕೊಡಗನ್ನು ಪ್ರಯೋಗಶಾಲೆ ಮಾಡಬೇಡಿ ಎಂದು ಮಾಜಿ ಸಚಿವ ಎಂ.ಸಿ.ನಾಣಯ್ಯ ಅಬ್ಬರಿಸಿದರು. ಸರಕಾರ ಮೂರು ಜನರ ಸಮಿತಿ ರಚಿಸಿ, ಅದರ ವರದಿಯಂತೆ ಕ್ರಮ ಕೈಗೊಳ್ಳುವ ಭರವಸೆ ನೀಡಿತು. ಜನ ತಣ್ಣಗಾದರು.

ಸಮಿತಿಯು ಕೊನೆ ಗಳಿಗೆಯಲ್ಲಿ ಸರಕಾರದ ಪರವಾಗಿಯೇ ವರದಿ ನೀಡಿತು. ಕೊಡಗಿನ ಜನ ಅಸಹಾಯಕರಾದರು. ಅವರ ಕಣ್ಣ ಮುಂದೆಯೇ ಹೈಟೆನ್ಷನ್ ವಿದ್ಯುತ್ ತಂತಿ ಎಳೆಯುವ ಮೂಲಕ ಮರಗಳ ಹನನ ನಡೆದು ಹೋಯಿತು.[ಮಳೆ ಕಡಿಮೆ ಆಗಿದ್ದಕ್ಕೆ ತಲಕಾವೇರಿಗಾದ ಅಪಚಾರ ಕಾರಣವೇ?]

ಈಗ ಕೊಡಗಿನಲ್ಲಿ ಮಳೆ ಸುರಿಯುತ್ತಿಲ್ಲ. ಬರದ ಛಾಯೆ ತಲೆದೋರಿದೆ. ಕಾವೇರಿ ಕಣಿವೆಯಲ್ಲಿ ಆತಂಕ, ಹೋರಾಟ ಎಲ್ಲವೂ ಆರಂಭವಾಗಿದೆ. ಪರಿಸರದ ಬಗ್ಗೆ ದೊಡ್ಡ ದೊಡ್ಡ ಭಾಷಣ ಮಾಡುವವರು, ಅವತ್ತು ಅಭಿವೃದ್ಧಿ ನೆಪದಲ್ಲಿ ಕೊಡಗಿನ ಪರಿಸರದ ಮೇಲಾಗುತ್ತಿರುವ ಅತ್ಯಾಚಾರದ ವಿರುದ್ಧ ಸೊಲ್ಲೆತ್ತಲೇ ಇಲ್ಲ. ಇವತ್ತು ಅದರ ಪರಿಣಾಮವನ್ನು ಎಲ್ಲರೂ ಅನುಭವಿಸುವಂತಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Rain is according to previous average in Kodagu, there is no such situation in Cauvery issue. Due to human intereference in environment situation gone worse.
Please Wait while comments are loading...