ಕೊಡಗಿನಲ್ಲಿ ಕಾಫಿ ಹೂವು ಅರಳಿದೆ, ಸೆಲ್ಫಿ ತಗೊಳ್ಳೋಣ ಬನ್ನಿ

By: ಮಡಿಕೇರಿ ಪ್ರತಿನಿಧಿ
Subscribe to Oneindia Kannada

ಮಡಿಕೇರಿ, ಫೆಬ್ರವರಿ 6: ಕಣ್ಣು ಹಾಯಿಸಿದಲ್ಲೆಲ್ಲ ಹೂವರಳಿ, ಘಮ್ಮೆನ್ನುತ್ತಾ, ಜೇನಿನ ಝೇಂಕಾರದೊಂದಿಗೆ ಎಲ್ಲರನ್ನೂ ಸೆಳೆಯುತ್ತಿರುವ ಕಾಫಿ ಹೂವಿನ ಚೆಲುವನ್ನು ನೋಡಬೇಕೆಂದರೆ ಕೊಡಗಿನತ್ತ ಬರಬೇಕು.

ಹಲವು ದಶಕಗಳ ಬಳಿಕ ಇಡೀ ಜಿಲ್ಲೆಯಲ್ಲಿ ಒಮ್ಮೆಲೆ ಕಾಫಿ ಹೂ ಅರಳಿರುವುದು ಇದೇ ಮೊದಲು. ಕೆಲವು ವರ್ಷಗಳಿಂದ ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ಜಿಲ್ಲೆಯಾದ್ಯಂತ ಒಮ್ಮೆಲೆ ಮಳೆ ಸುರಿದ ನಿದರ್ಶನಗಳಿಲ್ಲ. ಒಂದೊಂದು ಊರಿನಲ್ಲಿ ಒಂದೊಂದು ರೀತಿಯಲ್ಲಿ ಸ್ವಲ್ಪ ಮಟ್ಟಿಗೆ ಮಳೆ ಸುರಿಯುತ್ತಿತ್ತು.[ಕೊಡಗಿನ ಅಂಗನವಾಡಿಗಳಿಗೆ ಹೊಸ ಮೆರಗು!]

Coffee flowers welcoming tourists to Kodagu

ಹೆಚ್ಚಿನ ಜನರು ಮಳೆಯನ್ನು ಕಾಯದೆ ತಮ್ಮ ಕಾಫಿ ಹಣ್ಣಿನ ಕೊಯ್ಲು ಆಗುತ್ತಿದ್ದಂತೆಯೇ ಸ್ಪ್ರಿಂಕ್ಲರ್ ಮೂಲಕ ನೀರು ಹಾಯಿಸಿ ಹೂವರಳಿಸುತ್ತಿದ್ದರು. ಆದರೆ ಈ ಬಾರಿ ಜನವರಿ 27 ಮತ್ತು 28ರಂದು ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿದಿದೆ. ಕೆಲವರು ಇದನ್ನು ಅಕಾಲಿಕ ಮಳೆ, ಇದರಿಂದ ಕಾಫಿಗೆ ತೊಂದರೆ ಎಂದರು.

ಆದರೆ, ಮಳೆ ಜೋರಾಗಿಯೇ ಸುರಿದಿದ್ದರಿಂದ ಕಾಫಿ ಗಿಡದಲ್ಲಿ ಮೊಗ್ಗು ಬಂದು ವಾರದಲ್ಲಿಯೇ ಹೂವರಳಿದೆ. ಹೂವು ಒಮ್ಮೆಗೆ ಅರಳಿದ್ದರಿಂದ ಜಿಲ್ಲೆಯಾದ್ಯಂತ ಇರುವ ಕಾಫಿ ತೋಟಗಳು ಸುಂದರವಾಗಿ ಕಂಗೊಳಿಸುತ್ತಿದ್ದು, ಎಲ್ಲರ ಮನ ಸೆಳೆಯುತ್ತಿದೆ. ಈ ಸುಂದರ ದೃಶ್ಯವನ್ನು ದೂರದಿಂದ ಬಂದ ಪ್ರವಾಸಿಗರು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದು, ಸಂಭ್ರಮಿಸುತ್ತಿದ್ದಾರೆ.[ಕೊಂಬೊ ಮೀಸೆರ ಬಂಬೋ ಆದ ಲೋಕೇಶ್ ಅಚ್ಚಪ್ಪ]

ಈ ಹೂಗಳು ಕೇವಲ ಕಣ್ಣಿಗೆ ಮಾತ್ರವಲ್ಲ, ಮೂಗಿಗೆ ಸುವಾಸನೆಯನ್ನೂ, ಕಿವಿಗೆ ಜೇನು ಹುಳುಗಳ ಝೇಂಕಾರವನ್ನು ನೀಡುತ್ತಿದೆ. ಬಹಳ ವರ್ಷಗಳ ನಂತರ ಕೊಡಗಿನ ಬಹುತೇಕ ಕಡೆ ಒಮ್ಮೆಲೆ ಹೂವರಳಿರುವುದು ಎಲ್ಲರಿಗೂ ಖುಷಿ ತಂದಿದೆ. ಅಷ್ಟೇ ಅಲ್ಲ. ಮಳೆ ಸುರಿಯುವ ಮೂಲಕ ಬರದ ಸಮಯದಲ್ಲಿ ಬೆಳೆಗಾರರ ಕೈ ಹಿಡಿದಿರುವುದು ಕೂಡ ಅಷ್ಟೇ ಸಂತೋಷ ತಂದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
After a decade of time Coffee flowers blossom at a time in Kodagu district during January and February. Tourists are coming to Kodagu to take pictures and enjoy the beautiful coffee flowers.
Please Wait while comments are loading...