ಕೊಡಗಿನಲ್ಲೇ ಕೈ ಕೊಟ್ಟ ಮಳೆ, ಕೃಷಿಯ ಖುಷಿ ಕಾಣದ ರೈತರು

By: ಬಿ.ಎಂ.ಲವಕುಮಾರ್
Subscribe to Oneindia Kannada

ಮಡಿಕೇರಿ, ಆಗಸ್ಟ್ 16: ಕೊಡಗಿನಲ್ಲಿ ವರುಣ ಕೈಕೊಟ್ಟಿದ್ದಾನೆ. ಬೇರೆಲ್ಲ ಕಡೆ ಮಳೆ ಸುರಿಯುತ್ತಿದ್ದರೂ ಇಲ್ಲಿ ಮಾತ್ರ ಸಮರ್ಪಕವಾಗಿ ಮಳೆ ಬರುತ್ತಿಲ್ಲ. ಇದರಿಂದ ಭತ್ತದ ಕೃಷಿಗೆ ಹಿನ್ನಡೆಯಾಗಿದೆ.

ನೀರಿನ ಕೊರತೆಯಿಂದಾಗಿ ಭತ್ತದ ಕೃಷಿಯನ್ನು ನಿಲ್ಲಿಸುವಂತಹ ಸ್ಥಿತಿಗೆ ಬಂದು ರೈತರು ತಲುಪಿದ್ದಾರೆ. ಕೆಲವರು ಕೆರೆಯಿಂದ ನೀರನ್ನು ಬಿಟ್ಟುಕೊಂಡು ನಾಟಿ ಮಾಡಿದ್ದಾರೆ. ಮಡಿಕೇರಿ ತಾಲೂಕಿನಲ್ಲಿ ಬಹುತೇಕ ಭತ್ತದ ನಾಟಿಯಾಗಿದೆಯಾದರೂ ವಿರಾಜಪೇಟೆ ತಾಲೂಕಿನಾದ್ಯಂತ ಭತ್ತದ ಕೃಷಿಗೆ ಹಿನ್ನಡೆಯಾಗಿದೆ.

ಮೈಸೂರಿನಲ್ಲಿ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ

ಜತೆಗೆ ಕೆಲವು ರೈತರಿಗೆ ನೀರು ಸಿಗದಂತಾಗಿದೆ. ಮಳೆ ಹೆಚ್ಚಿನ ಪ್ರಮಾಣದಲ್ಲಿ ಸುರಿದರೆ ಗದ್ದೆ ಬದಿಯಲ್ಲಿನ ಝರಿ, ತೋಡುಗಳಿಂದ ಬರುವ ನೀರನ್ನು ಉಪಯೋಗಿಸಿಕೊಂಡು ಭತ್ತವನ್ನು ಬೆಳೆಯಲಾಗುತ್ತದೆ. ಆದರೆ ಈ ಬಾರಿ ಮಳೆ ಹೆಚ್ಚಾಗಿ ಬಾರದ ಕಾರಣದಿಂದ ನಾಟಿ ಕಾರ್ಯಕ್ಕೆ ಅಡ್ಡಿಯಾಗಿದೆ.

ವಿರಾಜಪೇಟೆಯಲ್ಲಿ ಸುಮಾರು 14,000 ಹೆಕ್ಟೇರ್ ಪ್ರದೇಶದಲ್ಲಿ ಈ ಬಾರಿ ಭತ್ತದ ಉತ್ಪಾದನೆಯ ಗುರಿ ಹೊಂದಲಾಗಿತ್ತು. ಆದರೆ ಕೃಷಿ ಇಲಾಖೆ ಮೂಲಗಳ ಪ್ರಕಾರ ಶೇ.60 ರಷ್ಟು ನಾಟಿ ಕಾರ್ಯ ಪೂರ್ಣಗೊಂಡಿದೆ.

In Pics: 'ಸ್ವಾತಂತ್ರ್ಯ'ದ ಸವಿ ಕಸಿದ ಬೆಂಗಳೂರು ಮಳೆ

ಜುಲೈ ತಿಂಗಳಲ್ಲಿ ಒಂದಷ್ಟು ಮಳೆ ಸುರಿದಿತ್ತಾದರೂ ಅದಾದ ನಂತರ ಅಂತಹ ಯಾವುದೇ ಮಳೆ ಸುರಿದಿಲ್ಲ. ಸಾಮಾನ್ಯವಾಗಿ ಕಕ್ಕಡಮಾಸ (ಆಟಿ ತಿಂಗಳ)ದಲ್ಲಿ ಬಿಡುವಿಲ್ಲದ ಮಳೆ ಸುರಿಯಬೇಕಿತ್ತು. ಆದರೆ ಸರಿಯಾಗಿ ಮಳೆ ಬಾರದೆ ಬಿಸಿಲು ಕಾಣಿಸಿಕೊಂಡಿತ್ತು.

ಭತ್ತ ಬೆಳೆಯಲು ಭಯ

ಭತ್ತ ಬೆಳೆಯಲು ಭಯ

ಸೋಮವಾರಪೇಟೆ ತಾಲೂಕಿನಲ್ಲಿಯೂ ಮಳೆ ಕೊರತೆ ಕಾಣಿಸಿಕೊಂಡಿದೆ. ಹಾರಂಗಿಯಿಂದ ನಾಲೆಗೆ ನೀರು ಬಿಡಲಾಗುತ್ತಿದೆ. ಆದರೂ ಭತ್ತ ಬೆಳೆಯಲು ರೈತರು ಭಯ ಪಡುವಂತಾಗಿದೆ. ಕಾರಣ ನಾಟಿ ಬಳಿಕ ನೀರು ಸಿಗದಿದ್ದರೆ ಎಂಬ ಭಯ ಕಾಡತೊಡಗಿದೆ.

ಒಂದು ತಿಂಗಳು ಕಕ್ಕಡ ಮಾಸ

ಒಂದು ತಿಂಗಳು ಕಕ್ಕಡ ಮಾಸ

ಜುಲೈ 17ರಿಂದ ಆರಂಭವಾಗಿ ಆಗಸ್ಟ್ 16ರವರೆಗೆ ಒಂದು ತಿಂಗಳ ಕಾಲವನ್ನು ಕೊಡಗಿನವರು ಕಕ್ಕಡ(ಆಟಿ) ತಿಂಗಳೆಂದು ಕರೆಯುತ್ತಾರೆ. ಈ ಅವಧಿಯಲ್ಲಿ ಮಳೆ ಬಿಡುವಿಲ್ಲದೆ ಸುರಿಯುತ್ತಿದ್ದರಿಂದ ಇಡೀ ವಾತಾವರಣ ಚಳಿಯಿಂದ ಕೂಡಿರುತ್ತಿತ್ತು. ಹೀಗಾಗಿ ಆರೋಗ್ಯ ಕಾಪಾಡಲು ಉಷ್ಣಾಂಶವಿರುವ ಬಿದಿರು ಕಣಿಲೆಯನ್ನು ತರಕಾರಿಯಾಗಿ ಸೇವಿಸಲಾಗುತ್ತಿತ್ತು.

ಅಲ್ಲದೆ ಮಳೆಯಿಂದ ಸಂಪರ್ಕವೇ ಕಡಿದು ಹೋಗುತ್ತಿದ್ದರಿಂದ ಮತ್ತು ತರಕಾರಿಗಳು ಸಿಗದೆ ಇದ್ದಾಗ ಗದ್ದೆ, ಹೊಳೆ ಬದಿಯಲ್ಲಿರುವ ಏಡಿ, ನಾಟಿ ಕೋಳಿ ಅಣಬೆಯನ್ನು ಸಾರು ಮಾಡಲು ಬಳಸಲಾಗುತ್ತಿತ್ತು.

ಮೊದಲಿನ ಮಳೆಯಿಲ್ಲ

ಮೊದಲಿನ ಮಳೆಯಿಲ್ಲ

ಮಳೆ ಬೀಳುವ ವೇಳೆ ಬಟ್ಟೆ ಒಣಗಿಸಲು ಅನುಕೂಲವಾಗುವಂತೆ ಬಳಂಜಿ, ಮಳೆಯಿಂದ ರಕ್ಷಿಸಿಕೊಳ್ಳಲು ಕೊರಂಬು ಬಳಸಲಾಗುತ್ತಿತ್ತು. ಈಗ ಎಲ್ಲವೂ ಮಾಯವಾಗಿದೆ. ಮೊದಲಿನ ಮಳೆಯೂ ಇಲ್ಲವಾಗಿದೆ. ವಾತಾವರಣವೂ ಹದಗೆಡುತ್ತಿದೆ. ಸಮಯಕ್ಕೆ ಸರಿಯಾಗಿ ಮಳೆ ಬಾರದ ಕಾರಣದಿಂದಾಗಿ ಕೊಡಗಿನಲ್ಲಿ ಮಾತ್ರವಲ್ಲ, ಕೊಡಗಿನ ಮಳೆಯನ್ನೇ ನಂಬಿರುವ ಕಾವೇರಿ ಕಣಿವೆಯ ಜನರೂ ಭಯಗೊಂಡಿದ್ದಾರೆ.

ಕೊಡಗಿನ ಮಳೆ ವಿವರ

ಕೊಡಗಿನ ಮಳೆ ವಿವರ

ಜಿಲ್ಲೆಯಲ್ಲಿ ಮಂಗಳವಾರದಿಂದ ಬುಧವಾರದವರೆಗೆ ಸುರಿದ ಮಳೆಯ ಪ್ರಮಾಣವನ್ನು ನೋಡುವುದಾದರೆ ಸರಾಸರಿ 6.56 ಮಿ.ಮೀ. ಆಗಿದೆ. ಜನವರಿಯಿಂದ ಇಲ್ಲಿಯವರೆಗೆ 1377.18 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 30 ಮಿ.ಮೀ ಮಳೆ ಕಡಿಮೆಯಾಗಿರುವುದು ಕಂಡು ಬಂದಿದೆ.

ಮಡಿಕೇರಿ ತಾಲೂಕಿನಲ್ಲಿ 12.3 ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ 5.5 ಮಿ.ಮೀ, ಸೋಮವಾರಪೇಟೆ ತಾಲೂಕಿನಲ್ಲಿ 1.87 ಮಿ.ಮೀ. ಮಳೆ ಸುರಿದಿದೆ. 2,859 ಅಡಿಗಳ ಹಾರಂಗಿ ಜಲಾಶಯದಲ್ಲಿ 2855.25 ಅಡಿಯಷ್ಟು ನೀರಿದ್ದು, ನೀರಿನ ಒಳ ಹರಿವು 850 ಕ್ಯೂಸೆಕ್ ಇದ್ದರೆ, ನದಿಗೆ 300, ನಾಲೆಗೆ 1200 ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ.

ಕೆಆರ್ ಎಸ್ ಜಲಾಶಯ ನೂರು ಅಡಿಯ ಗಡಿ ದಾಟಿಲ್ಲ

ಕೆಆರ್ ಎಸ್ ಜಲಾಶಯ ನೂರು ಅಡಿಯ ಗಡಿ ದಾಟಿಲ್ಲ

ಆಗಸ್ಟ್ ತಿಂಗಳ ನಂತರ ಮಳೆ ಸುರಿದರೂ ಕೆಆರ್ ಎಸ್ ಜಲಾಶಯ ಭರ್ತಿಯಾಗುವಷ್ಟು ನೀರು ಹರಿದು ಬರುತ್ತಾ ಎಂಬುದೇ ಪ್ರಶ್ನೆಯಾಗಿ ಉಳಿದಿದೆ. ಇನ್ನೂ ಕೆಆರ್ ಎಸ್ ನಲ್ಲಿ ನೀರಿನ ಪ್ರಮಾಣ ನೂರು ಅಡಿಯ ಗಡಿ ದಾಟಿಲ್ಲ. ಹೀಗೇ ಮುಂದುವರೆದರೆ ಬೇಸಿಗೆಯ ದಿನಗಳ ಗತಿ ಏನು ಎಂಬ ಭಯವೂ ಎಲ್ಲರನ್ನು ಕಾಡುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
South west monsoon average rain fall is 30 mm less in Kodagu district. Farmers panic about future.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ