ಬ್ರಹ್ಮಗಿರಿ ರಕ್ಷಿತಾರಣ್ಯದಲ್ಲಿ rallyಗೆ ಅವಕಾಶ; ಅರಣ್ಯಾಧಿಕಾರಿ ವಿರುದ್ಧ ಕ್ರಮಕ್ಕೆ ಒತ್ತಾಯ
ಮಡಿಕೇರಿ, ಸೆಪ್ಟೆಂಬರ್ 18: ಸರ್ಕಾರವು ವಾರ್ಷಿಕವಾಗಿ ವನ್ಯ ಪ್ರಾಣಿಗಳ ಮತ್ತು ಅರಣ್ಯದ ರಕ್ಷಣೆಗೆಂದೇ ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸುತ್ತಿದೆ. ಅನೇಕ ಅರಣ್ಯಗಳನ್ನು ರಕ್ಷಿತಾರಣ್ಯ, ಅಭಯಾರಣ್ಯ ಎಂದೇ ಘೋಷಿಸಿದ್ದು, ಇಲ್ಲಿಗೆ ಮನುಷ್ಯರ ಪ್ರವೇಶವೇ ನಿಷಿದ್ಧವಾಗಿದೆ. ಅಲ್ಲದೆ ಅರಣ್ಯ ಇಲಾಖೆಯ ಸಿಬ್ಬಂದಿ ಸಂಖ್ಯೆಯನ್ನೂ ಹೆಚ್ಚಿಸಿ 24x7 ಕಾವಲು ಕಾಯಲಾಗುತ್ತಿದೆ.
ಆದರೆ ಅರಣ್ಯ ರಕ್ಷಣೆ ಮಾಡಬೇಕಾದ ಅರಣ್ಯಾಧಿಕಾರಿಯೇ ಕಾನೂನು ಉಲ್ಲಂಘಿಸಿ ಅರಣ್ಯದೊಳಗೆ ವಾಹನಗಳಿಗೆ ಪ್ರವೇಶ ನೀಡಿರುವ ಘಟನೆ ದಕ್ಷಿಣ ಕೊಡಗಿನ ಶ್ರೀಮಂಗಲದಿಂದ ವರದಿಯಾಗಿದೆ.
ನಾಗರಹೊಳೆ ಅಭಯಾರಣ್ಯಕ್ಕೆ ತಾಗಿಕೊಂಡಿರುವ ಬ್ರಹ್ಮಗಿರಿ ರಕ್ಷಿತಾರಣ್ಯದಲ್ಲಿ ಕಳೆದ ಆಗಸ್ಟ್ ಕೊನೆಯ ವಾರ ಮತ್ತು ಸೆಪ್ಟೆಂಬರ್ ಮೊದಲ ವಾರದಲ್ಲಿ ಮೋಟಾರು rally ಆಯೋಜಿಸಲು ಶ್ರೀಮಂಗಲ ವನ್ಯಜೀವಿ ವಲಯ ಅರಣ್ಯಾಧಿಕಾರಿ ವೀರೇಂದ್ರ ಮರಿ ಬಸವಣ್ಣನವರ್ ಅವರು ಮೌಖಿಕ ಅನುಮತಿ ನೀಡಿದ್ದಾರೆ ಎಂದು ಕೊಡಗು ಏಕೀಕರಣ ರಂಗ ಆರೋಪಿಸಿದೆ.

ಅರಣ್ಯಾಧಿಕಾರಿ ತಮಗೆ ಯಾವುದೇ ಅಧಿಕಾರವಿಲ್ಲದಿದ್ದರೂ ಆಮಿಷಕ್ಕೆ ಒಳಗಾಗಿ ಎಂಟು ಯುವಕರ ತಂಡಕ್ಕೆ ಮೋಟಾರು rally ನಡೆಸಲು ಅನುಮತಿ ನೀಡಿದ್ದರು ಎಂದು ಆರೋಪಿಸಲಾಗಿದೆ. ಕೊಡಗಿನ ರಕ್ಷಿತಾರಣ್ಯಗಳಲ್ಲಿ ಅಪರೂಪದ ಪಕ್ಷಿ ಮತ್ತು ಪ್ರಾಣಿಗಳ ಸಂಕುಲವೇ ಇದ್ದು, ಅವುಗಳ ವಂಶಾಭಿವೃದ್ಧಿಗೆ ಅನುವಾಗಲಿ ಎಂಬ ಕಾರಣದಿಂದ ಸರ್ಕಾರ ಮನುಷ್ಯರ ಪ್ರವೇಶ ನಿಷೇಧಿಸಿದೆ. ಹೀಗಿರುವಾಗ ವಾಹನಗಳ ಸೈಲೆನ್ಸರ್ ತೆಗೆದ ಕರ್ಕಶ ಸದ್ದಿಗೆ ಪ್ರಾಣಿಗಳು ಅಪಾಯಕ್ಕೀಡಾಗುತ್ತವೆ.
ಮಡಿಕೇರಿಯಲ್ಲಿ ಇಂದು ಏಕೀಕರಣ ರಂಗವು ಕೊಡಗು ವನ್ಯ ಜೀವಿ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ವಿರಾಜಪೇಟೆ ಪ್ರಾದೇಶಿಕ ವನ್ಯಜೀವಿ ವೃತ್ತದ ಅರಣ್ಯ ಇಲಾಖಾಧಿಕಾರಿಗಳಿಗೆ ದೂರು ನೀಡಿದೆ. ಒಂದು ವೇಳೆ ಕ್ರಮ ಕೈಗೊಳ್ಳದಿದ್ದರೆ ಉಗ್ರ ಪ್ರತಿಭಟನೆ ನೀಡುವ ಎಚ್ಚರಿಕೆಯನ್ನೂ ನೀಡಿದೆ.












Click it and Unblock the Notifications