ಯೋಗಿ ಸರ್ಕಾರದ ಬುಲ್ಡೋಜರ್ ಆಕ್ಷನ್ ಕಾನೂನಿನ ಅಪಹಾಸ್ಯ!
ನವದೆಹಲಿ, ಜೂನ್ 14: ಮೊಹಮ್ಮದ್ ಪೈಗಂಬರ್ ಬಗ್ಗೆ ಬಿಜೆಪಿ ನಾಯಕಿ ನೂಪರ್ ಶರ್ಮಾ ನೀಡಿದ ಹೇಳಿಕೆ, ದೇಶದ ಕೆಲವು ಭಾಗದಲ್ಲಿ ಭಾರೀ ಹಿಂಸಾಚಾರಕ್ಕೆ ಕಾರಣವಾಗಿದ್ದದ್ದು ಗೊತ್ತೇ ಇದೆ. ಉತ್ತರ ಪ್ರದೇಶದ ಪ್ರಯಾಗ್ ರಾಜ್, ಕಾನ್ಪುರ ಮತ್ತು ಸಹರಾನ್‌ಪುರದಲ್ಲಿ ನಡೆದ ಹಿಂಸಾಚಾರದ ನಂತರ ಆರೋಪಿಗಳಿಗೆ ಬುದ್ದಿ ಕಲಿಸಲು ಯೋಗಿ ಆದಿತ್ಯನಾಥ್ ಸರಕಾರ ಬುಲ್ಡೋಜರ್ ಮೊರೆ ಹೋಗಿತ್ತು.
ಹಿಂಸಾಚಾರದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಆರೋಪಿ ಸ್ಥಾನದಲ್ಲಿರುವ ಮುಝಮ್ಮಿಲ್ ಮತ್ತು ಅಬ್ದುಲ್ ವಾಕಿರ್ ನಿವಾಸದ ಗೇಟ್ ಮತ್ತು ಹೊರಗಿನ ಗೋಡೆಗಳನ್ನು ಅಕ್ರಮವಾಗಿ ನಿರ್ಮಾಣ ಮಾಡಲಾಗಿದೆ ಎಂದು ಕೆಡವಲಾಗಿತ್ತು. ಯೋಗಿ ಸರಕಾರದ ಈ ಕ್ರಮಕ್ಕೆ ಮೂವರು ನಿವೃತ್ತ ನ್ಯಾಯಾಧೀಶರು ತಗಾದೆ ತೆಗೆದಿದ್ದಾರೆ.
ಮೂವರು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶರು ಸೇರಿದಂತೆ ಹನ್ನೆರಡು ಪ್ರಮುಖರು, ಯೋಗಿ ಸರಕಾರದ ಬುಲ್ಡೋಜರ್ ಕಾರ್ಯಾಚರಣೆಯ ಸಂಬಂಧ ಸರ್ವೋಚ್ಚ ನ್ಯಾಯಾಲಯ ಮಧ್ಯ ಪ್ರವೇಶಿಸುವಂತೆ ಮನವಿ ಮಾಡಿದ್ದಾರೆ.

ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರಕಾರ ಸಂವಿಧಾನ ಮತ್ತು ಕಾನೂನಿನ ಅಪಹಾಸ್ಯ ಮಾಡುತ್ತಿದೆ, ವಿಚಾರಣೆ ನಡೆಸುವಂತೆ ಹನ್ನೆರಡು ಜನರ ಸಹಿಯಿರುವ ಪತ್ರದ ಮೂಲಕ ಸುಪ್ರೀಂಕೋರ್ಟ್ ಅನ್ನು ಒತ್ತಾಯಿಸಿದ್ದಾರೆ. ಮುಸ್ಲಿಂ ನಾಗರೀಕರ ಮೇಲೆ ಯೋಗಿ ಸರಕಾರದ ಕ್ರಮ ಸಾಧುವಲ್ಲ, ಸುಪ್ರೀಂಕೋರ್ಟ್ ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕೆಂದು ಪತ್ರದಲ್ಲಿ ಮನವಿ ಮಾಡಲಾಗಿದೆ.

ಪ್ರತಿಭಟನಾಕಾರರ ಮನೆಗಳನ್ನು ಬುಲ್ಡೋಜರ್ ಬಳಸಿ ಕೆಡವುದು ಕಾನೂನು ಬಾಹಿರ ಮತ್ತು ಸ್ಪಷ್ಟವಾದ ಉಲ್ಲಂಘನೆ. ಸರ್ವೋಚ್ಛ ನ್ಯಾಯಾಲಯವು ಸ್ವಯಂಪ್ರೇರಿತವಾಗಿ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ. ಹನ್ನೆರಡು ಪ್ರಮುಖರ ಪೈಕಿ ಇರುವ ಮೂವರು ಮಾಜಿ ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳೆಂದರೆ, ಬಿ. ಸುದರ್ಶನ್ ರೆಡ್ಡಿ, ವಿ. ಗೋಪಾಲ ಗೌಡ ಮತ್ತು ಎ. ಕೆ. ಗಂಗೂಲಿ. ಇವರ ಜೊತೆಗೆ ಆರು ವಕೀಲರು ಕೂಡಾ ಪತ್ರಕ್ಕೆ ಸಹಿಹಾಕಿದ್ದಾರೆ.
ನ್ಯಾಯಾಂಗದ ಸ್ಥೈರ್ಯವನ್ನು ಪರೀಕ್ಷಿಸಲಾಗುತ್ತಿರುವ ಸಮಯವಿದು ಎಂದು ಈ ಪ್ರಮುಖರು ಅಭಿಪ್ರಾಯ ಪಟ್ಟಿದ್ದಾರೆ. ಪ್ರಯಾಗರಾಜ್ ಅಭಿವೃದ್ದಿ ಪ್ರಾಧಿಕಾರವು, ಕಳೆದ ಭಾನುವಾರ (ಜೂನ್ 12), ಹಿಂಸಾಚಾರದಲ್ಲಿ ಭಾಗವಹಿಸಿದ್ದ ಎನ್ನಲಾಗುತ್ತಿರುವ ಜಾವೇದ್ ಅಹಮದ್ ಮನೆಯ ಮೇಲೆ ಬುಲ್ಡೋಜರ್ ಹರಿಸಿತ್ತು.












Click it and Unblock the Notifications