ಲೋಕಸಭಾ ಚುನಾವಣೆಗೆ ಸ್ಪರ್ಧೆ: ಪ್ರಿಯಾಂಕ ಗಾಂಧಿ ಸ್ಪಷ್ಟನೆ
ಲಕ್ನೋ, ಫೆ 14: ನೂತನವಾಗಿ ಆಯ್ಕೆಯಾಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿದ್ದಾರಾ ಎನ್ನುವ ವಿಚಾರಕ್ಕೆ ಸಂಬಂಧ ಪಟ್ಟಂತೆ, ಖುದ್ದು ಅವರೇ ಸ್ಪಷ್ಟನೆ ನೀಡಿದ್ದಾರೆ.
ಪೂರ್ವ ಉತ್ತರಪ್ರದೇಶದ ಜವಾಬ್ದಾರಿಯನ್ನು ನನಗೆ ಹೊರಿಸಲಾಗಿದೆ. ಎರಡು ಸೀಟಿನಿಂದ ಪಕ್ಷವನ್ನು ಮೇಲೆಕ್ಕೆತ್ತುವ ಗುರುತರ ಜವಾಬ್ದಾರಿ ನನ್ನ ಮೇಲಿದೆ. ಹೀಗಿರುವಾಗ, ನಾನು ಚುನಾವಣೆಗೆ ಸ್ಪರ್ಧಿಸಿದರೆ, ಅತ್ತ ಗಮನ ನೀಡಲು ಆಗುವುದಿಲ್ಲ ಎಂದು ಪ್ರಿಯಾಂಕ ಗಾಂಧಿ ಹೇಳಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಪಕ್ಷದ ಕಾರ್ಯಕರ್ತರ ಸಮ್ಮುಖದಲ್ಲೇ ಪ್ರಿಯಾಂಕ ಹೇಳಿದ್ದಾರೆ. ಲಕ್ನೋ ಕ್ಷೇತ್ರದಿಂದ ಸ್ಪರ್ಧಿಸಬೇಕೆಂದು ಕಾರ್ಯಕರ್ತರು ಒತ್ತಡ ಹೇರಿದಾಗ, ಪ್ರಿಯಾಂಕ ಈ ಸ್ಪಷ್ಟನೆ ನೀಡಿದ್ದಾರೆ.

ನನ್ನ ಮೊದಲ ಗುರಿ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹೆಚ್ಚಿನ ಸ್ಥಾನ ತಂದುಕೊಡುವುದು, ಅದಾದ ನಂತರ 2022ರಲ್ಲಿ ನಡೆಯಲಿರುವ ಉತ್ತರಪ್ರದೇಶ ಅಸೆಂಬ್ಲಿ ಚುನಾವಣೆ. ಹಾಗಾಗಿ, ಚುನಾವಣೆಗೆ ಸ್ಪರ್ಧಿಸುವ ಯಾವ ಯೋಚನೆಯೂ ನನಗಿಲ್ಲ ಎಂದು ಪ್ರಿಯಾಂಕ ಹೇಳಿದ್ದಾರೆ.
ತನ್ನ ಪತಿಯ ಇಡಿ ಕೇಸ್ ಬಗ್ಗೆ ಮಾತನಾಡಿದ ಪ್ರಿಯಾಂಕ, ಈ ರೀತಿಯ ವಿಚಾರಣೆ ಮುಂದೆಯೂ ನಡೆಯುತ್ತಿರುತ್ತದೆ, ನಾನು ನನ್ನ ಕೆಲಸವನ್ನು ಮುಂದುವರಿಸಿಕೊಂಡು ಹೋಗುತ್ತೇನೆ ಎಂದು ಪ್ರಿಯಾಂಕ ಹೇಳಿದ್ದಾರೆ.
ನಾವೆಲ್ಲ ಒಟ್ಟಿಗೆ ಸೇರಿ ನಾಳೆಯಿಂದಲೇ ಹೊಸ ರಾಜಕೀಯ ಆರಂಭಿಸೋಣ. ಯುವ ಸ್ನೇಹಿತರ, ನನ್ನ ಸಹೋದರಿಯರ, ಬಡವರಿಗಿಂತ ಬಡವರ ದನಿ ಕೇಳುವಂತಾಗಬೇಕು" ಎಂದು ಪ್ರಿಯಾಂಕಾ ವಾದ್ರಾ , ಮೊದಲ ಬೃಹತ್ ರೋಡ್ ಶೋನಲ್ಲಿ ಹೇಳಿದ್ದರು.












Click it and Unblock the Notifications