Explained: ಉತ್ತರ ಪ್ರದೇಶದಲ್ಲಿ ಪ್ರಭಾವಿಗಳಿಂದ ಕಾಂಗ್ರೆಸ್‌ಗೆ ಟಾಟಾ.. ಬಾಯ್ ಬಾಯ್..!?

ನವದೆಹಲಿ, ಜನವರಿ 28: ಉತ್ತರ ಪ್ರದೇಶ ಸೇರಿದಂತೆ ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಲೆಕ್ಕಾಚಾರಗಳು ಜೋರಾಗಿವೆ. ಆಡಳಿತಾರೂಢ ಬಿಜೆಪಿ ಮತ್ತು ಅದರ ಪ್ರಮುಖ ಎದುರಾಳಿ ಸಮಾಜವಾದಿ ಪಕ್ಷಗಳ ನಡುವೆ ಕಾಂಗ್ರೆಸ್ ತನ್ನ ಅಸ್ತಿತ್ವ ಪ್ರದರ್ಶನಕ್ಕೆ ಪ್ರಯತ್ನಿಸುತ್ತಿದೆ.‌

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಮರು ಸ್ಥಾಪಿಸಲು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಪ್ರಯತ್ನಿಸುತ್ತಿದ್ದಾರೆ. ಇದದ ಬೆನ್ನಲ್ಲೇ ಕಾಂಗ್ರೆಸ್‌ನ ಏಳು ಶಾಸಕರ ಪೈಕಿ ನಾಲ್ವರು ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ಔಪಚಾರಿಕವಾಗಿ ಪಕ್ಷದಿಂದ ಹೊರ ನಡೆದಿದ್ದಾರೆ.

ಕಳೆದ 2017ರ ಉತ್ತರ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ ಸಮಾಜವಾದಿ ಪಕ್ಷದೊಂದಿಗೆ ಮಾಡಿಕೊಂಡಿದ್ದ ಮೈತ್ರಿ "ತಪ್ಪು ನಿರ್ಧಾರವಾಗಿತ್ತು" ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಯುಪಿ ಉಸ್ತುವಾರಿ ಹೊತ್ತಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಇತ್ತೀಚಿನ ಸಂದರ್ಶನವೊಂದರಲ್ಲಿ ತಿಳಿಸಿದ್ದರು. 2017ರ ಚುನಾವಣೆಯಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಿದ್ದರೆ ಪಕ್ಷವನ್ನು ಇನ್ನಷ್ಟು ಸದೃಢವಾಗಿ ಕಟ್ಟಬಹುದಿತ್ತು ಎಂಬುದು ಅವರು ಅಭಿಪ್ರಾಯವಾಗಿದೆ.

ಉತ್ತರ ಪ್ರದೇಶದಲ್ಲಿ ಸ್ವಪಕ್ಷಕ್ಕೆ ಕಾಂಗ್ರೆಸ್ ಶಾಸಕರು ನೀಡಿದ ಪೆಟ್ಟು ಹೇಗಿದೆ?, ಪ್ರಿಯಾಂಕಾ ಗಾಂಧಿ ಉಸ್ತುವಾರಿ ವಹಿಸಿಕೊಂಡ ನಂತರ ಯುಪಿಯಲ್ಲಿ ಪಕ್ಷ ತೊರೆದ ನಾಯಕರು ಎಷ್ಟು ಮಂದಿ?, ಯುಪಿಯಲ್ಲಿ ಕಾಂಗ್ರೆಸ್ ನಾಯಕರು ಒಬ್ಬೊಬ್ಬರಾಗಿ ನಾಪತ್ತೆಯಾಗುತ್ತಿರುವುದರ ಹಿಂದಿನ ಮರ್ಮವೇನು ಎಂಬುದರ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ಓದಿ.

 ರಾಹುಲ್ ಗಾಂಧಿ ವೈಫಲ್ಯದ ಹಿನ್ನೆಲೆ ಅಖಾಡಕ್ಕೆ ಪ್ರಿಯಾಂಕಾ ಗಾಂಧಿ

ರಾಹುಲ್ ಗಾಂಧಿ ವೈಫಲ್ಯದ ಹಿನ್ನೆಲೆ ಅಖಾಡಕ್ಕೆ ಪ್ರಿಯಾಂಕಾ ಗಾಂಧಿ

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ಈ ಬಾರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ನಡುವಿನ ಮೈತ್ರಿ ಮಾತುಕತೆ ವಿಫಲವಾಯಿತು. ಇದಕ್ಕೂ ಮೊದಲು ಅಖಿಲೇಶ್ ಯಾದವ್ ಪತ್ನಿ ಡಿಂಪಲ್ ಯಾದವ್ ಜೊತೆ ಪ್ರಿಯಾಂಕಾ ಗಾಂಧಿ ದೂರವಾಣಿ ಮೂಲಕ ಚರ್ಚೆ ನಡೆಸಿದ್ದರು. ಇದರ ಜೊತೆ ಅಖಿಲೇಶ್ ಯಾದವ್ ಜೊತೆಗೂ ದೂರವಾಣಿ ಸಂಭಾಷಣೆ ನಡೆಸಿ, ಆಪ್ತ ಸಹಾಯಕನನ್ನು ಸಂಧಾನಕ್ಕೆ ಕಳುಹಿಸಲಾಗಿತ್ತು. ಆದರೆ, ಕಾಂಗ್ರೆಸ್ 144 ಸ್ಥಾನಗಳಲ್ಲಿ ಸ್ಪರ್ಧಿಸುವ ಬೇಡಿಕೆಗೆ ಸಮಾಜವಾದಿ ಪಕ್ಷ ಒಪ್ಪದ ಹಿನ್ನೆಲೆ ಮೈತ್ರಿ ಮಾತುಕತೆ ಮುರಿದುಬಿತ್ತು. ಈ ಬೆಳವಣಿಗೆ ನಂತರ ಯುಪಿ ಚುನಾವಣಾ ಅಖಾಡಕ್ಕೆ ಇಳಿದಿದ್ದೇ ಪ್ರಿಯಾಂಕಾ ಗಾಂಧಿ.

ಯುಪಿಯಲ್ಲಿ ಕಾಂಗ್ರೆಸ್ ಕಟ್ಟಲು ಪ್ರಿಯಾಂಕಾ ಗಾಂಧಿ ಪಣ

ಯುಪಿಯಲ್ಲಿ ಕಾಂಗ್ರೆಸ್ ಕಟ್ಟಲು ಪ್ರಿಯಾಂಕಾ ಗಾಂಧಿ ಪಣ

ಮೈತ್ರಿ ನಿರ್ಧಾರವೇ ತಪ್ಪು ನಡೆ ಆಗಿತ್ತು ಎಂದು ವಿಷಾದ ವ್ಯಕ್ತಪಡಿಸಿರುವ ಪ್ರಿಯಾಂಕಾ ಗಾಂಧಿ, ಉತ್ತರ ಪ್ರದೇಶದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷವನ್ನು ಮರುಸ್ಥಾಪನೆ ಮಾಡುವುದಾಗಿ ಘೋಷಿಸಿದ್ದಾರೆ. ಐದು ವರ್ಷಗಳ ಹಿಂದೆ ಉತ್ತರ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪ್ರಚಾರವನ್ನು ಮುನ್ನಡೆಸಿದ್ದ ಅವರು, 30 ವರ್ಷಗಳಿಂದ ಅಧಿಕಾರದ ಗದ್ದುಗೆ ಏರದ ರಾಜ್ಯದಲ್ಲಿ ಕಾಂಗ್ರೆಸ್ ಬಾವುಟ ಹಾರಿಸುವುದಾಗಿ ಘೋಷಿಸಿದ್ದಾರೆ. ಕಾಂಗ್ರೆಸ್ ಪಕ್ಷದ "ರಕ್ಷಕಿ" ಎಂದೇ ಪ್ರಶಂಸೆಗೆ ಪಾತ್ರರಾದ ಪ್ರಿಯಾಂಕಾ ಗಾಂಧಿ ಚುನಾವಣಾ ಅಖಾಡದಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದಾರೆ.

ಯುಪಿಯಲ್ಲಿ ಕಣ್ಮರೆ ಆಗುತ್ತಿರುವ ಕಾಂಗ್ರೆಸ್ ಶಾಸಕರು!

ಯುಪಿಯಲ್ಲಿ ಕಣ್ಮರೆ ಆಗುತ್ತಿರುವ ಕಾಂಗ್ರೆಸ್ ಶಾಸಕರು!

ಉತ್ತರ ಪ್ರದೇಶದಲ್ಲಿ ಪ್ರಿಯಾಂಕಾ ಗಾಂಧಿ ಮತ್ತೆ ಪಕ್ಷವನ್ನು ಮರು ಸ್ಥಾಪನೆ ಮಾಡುವ ಪ್ರಯತ್ನಗಳನ್ನು ನಡೆಸುತ್ತಿದ್ದರೆ, ಇನ್ನೊಂದು ದಿಕ್ಕಿನಲ್ಲಿ ಕಾಂಗ್ರೆಸ್‌ನ ಏಳು ಶಾಸಕರ ಪೈಕಿ ನಾಲ್ವರು ಔಪಚಾರಿಕವಾಗಿ ಪಕ್ಷವನ್ನು ತೊರೆದಿದ್ದಾರೆ. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಪ್ರಚಾರದ ಅಖಾಡದಲ್ಲಿ ಪ್ರಿಯಾಂಕಾ ಗಾಂಧಿ ಜೊತೆ ಇಬ್ಬರು ಶಾಸಕರು ಮಾತ್ರ ತೊಡೆಗಿಸಿಕೊಂಡಿದ್ದಾರೆ. ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ಕುಮಾರ್ ಲಲ್ಲು ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಆರಾಧನಾ ಮಿಶ್ರಾ ಮಾತ್ರ ರಣಕಣದಲ್ಲಿ ಉಳಿದುಕೊಂಡಿದ್ದಾರೆ. ಪಕ್ಷದ ಏಳನೇ ಶಾಸಕ ಸೊಹೈಲ್ ಅಖ್ತರ್ ಅನ್ಸಾರಿ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸುತ್ತಾರೆಯೇ ಅಥವಾ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ನಿಲ್ಲುತ್ತಾರೆಯೇ ಎಂಬ ಬಗ್ಗೆ ಕುತೂಹಲ ಮೂಡಿಸಿದೆ.

ಕೈ ಪಾರ್ಟಿಗೆ ಔಪಚಾರಿಕವಾಗಿ ಕೈ ಕೊಟ್ಟ ಶಾಸಕರು ಯಾರು?

ಕೈ ಪಾರ್ಟಿಗೆ ಔಪಚಾರಿಕವಾಗಿ ಕೈ ಕೊಟ್ಟ ಶಾಸಕರು ಯಾರು?

1. ಅದಿತಿ ಸಿಂಗ್:

ರಾಯ್ಬರೇಲಿ ಶಾಸಕಿ ಅದಿತಿ ಸಿಂಗ್ ಕಾಂಗ್ರೆಸ್ ತೊರೆದ ಮೊದಲ ರಾಜಕಾರಣಿ. ಕಳೆದ ವರ್ಷ ಬಿಜೆಪಿ ಸೇರಿದ್ದ ಅದಿತಿ ಕೆಲ ದಿನಗಳ ಹಿಂದೆ ಅಧಿಕೃತವಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ರಾಜೀನಾಮೆ ಪತ್ರವನ್ನು ಕಳುಹಿಸಿದ್ದರು. ಕಾಂಗ್ರೆಸ್‌ನ ಐದು ಬಾರಿ ಶಾಸಕರಾಗಿದ್ದ ದಿವಂಗತ ಅಖಿಲೇಶ್ ಸಿಂಗ್ ಅವರ ಪುತ್ರಿಯೇ ಈ ಅದಿತಿ ಸಿಂಗ್ . ಈ ಕುಟುಂಬ ಗಾಂಧಿ ಮನೆವರಿಗೆ ಹತ್ತಿರವೆಂದೇ ಪರಿಗಣಿಸಲಾಗಿತ್ತು. ಗಾಂಧಿ ಮನೆತನದೊಂದಿಗೆ ಅದಿತಿ ಸಿಂಗ್ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸದ್ದು ಮಾಡಿತ್ರು.


2. ರಾಕೇಶ್ ಸಿಂಗ್:

ಕಳೆದ ಡಿಸೆಂಬರ್ 31 ರಂದು ರಾಯ್ಬರೇಲಿಯ ಹರ್ಚಂದಪುರದ ಶಾಸಕ ರಾಕೇಶ್ ಸಿಂಗ್ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಕಳೆದ ವರ್ಷದ ಕೊನೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜೊತೆ ರಾಕೇಶ್ ಸಿಂಗ್ ಕಾಣಿಸಿಕೊಂಡಿದ್ದರು. ರಾಕೇಶ್ ಸಿಂಗ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಲೋಕಸಭಾ ಕ್ಷೇತ್ರದವರೇ ಆಗಿದ್ದು, ಕಾಂಗ್ರೆಸ್‌ಗೆ ದೊಡ್ಡ ಆಘಾತವನ್ನು ನೀಡಿತು. ರಾಯ್ಬರೇಲಿಯಲ್ಲಿ ಸುಮಾರು 35 ಕಾಂಗ್ರೆಸ್ ಕಾರ್ಯಕರ್ತರು ರಾಜೀನಾಮೆ ನೀಡಿದ ಹಿನ್ನೆಲೆ ಪಕ್ಷ ಬಂಡಾಯದ ಬಿಸಿಯನ್ನು ಎದುರಿಸಿತ್ತು.


3. ಮಸೂದ್ ಅಖ್ತರ್:

ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ಘೋಷಣೆ ಬಳಿಕವೂ ಶಾಸಕರ ಪಕ್ಷಾಂತರ ಪರ್ವ ನಿಂತಿಲ್ಲ. 2017ರ ವಿಧಾನಸಭಾ ಚುನಾವಣೆಯಲ್ಲಿ ಸಹರಾನ್‌ಪುರದಿಂದ ಗೆದ್ದ ಕಾಂಗ್ರೆಸ್ ಪಕ್ಷದ ಮಸೂದ್ ಅಖ್ತರ್, ಪಕ್ಷದ ಪ್ರಮುಖ ಸಹೋದ್ಯೋಗಿ ಇಮ್ರಾನ್ ಮಸೂದ್ ಜೊತೆ ಸಮಾಜವಾದಿ ಪಕ್ಷಕ್ಕೆ ಸೇರಿದ್ದಾರೆ.

2014ರ ಲೋಕಸಭಾ ಚುನಾವಣೆ ವೇಳೆ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯನ್ನು "ಕತ್ತರಿಸು" ಎಂಬ ಹೇಳಿಕೆ ನೀಡಿದ ಇಮ್ರಾನ್ ಮಸೂದ್ ಸದ್ದು ಮಾಡಿದ್ದರು. ನಂತರ ಪಕ್ಷ ಮತ್ತು ಪಶ್ಚಿಮ ಯುಪಿ ರಾಜಕೀಯದಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿದ್ದರು. ದ್ವೇಷದ ಹೇಳಿಕೆ ನೀಡಿದ ಮಸೂದ್ ಅನ್ನು ಪೊಲೀಸರು ಬಂಧಿಸಿದರೂ, ಕಾಂಗ್ರೆಸ್‌ ಪಕ್ಷದಲ್ಲಿ ಬಡ್ತಿ ಗಿಟ್ಟಿಸಿಕೊಂಡರು. ಇಮ್ರಾನ್ ಅವರನ್ನು ಉತ್ತರ ಪ್ರದೇಶ ಕಾಂಗ್ರೆಸ್‌ನ ಉಪಾಧ್ಯಕ್ಷರಾಗಿ ಮತ್ತು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಆಗಿ ನೇಮಿಸಲಾಯಿತು. ಅದಾಗ್ಯೂ, ಯುಪಿ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ಪಕ್ಷ ಅಧಿಕಾರಕ್ಕೆ ಬರುವ ನಿರೀಕ್ಷೆಯೊಂದಿಗೆ ಇಮ್ರಾನ್ ಸಮೂದ್, ಸಮಾಜವಾದಿ ಪಕ್ಷಕ್ಕೆ ಸೇರಿದ್ದಾರೆ. ಮಸೂದ್ ಅಖ್ತರ್‌ಗಿಂತ ಇಮ್ರಾನ್ ಮಸೂದ್ ರಾಜೀನಾಮೆಯು ಪಶ್ಚಿಮ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ನ ಪ್ರಚಾರಕ್ಕೆ ದೊಡ್ಡ ಹೊಡೆತ ಕೊಟ್ಟಿದೆ.


4. ನರೇಶ್ ಸೈನಿ

ಇಮ್ರಾನ್ ಮಸೂದ್ ಮತ್ತು ಮಸೂದ್ ಅಖ್ತರ್ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ಕೆಲವೇ ಗಂಟೆಗಳಲ್ಲಿ ನರೇಶ್ ಸೈನಿ ಕೂಡ ಕಾಂಗ್ರೆಸ್ ಪಕ್ಷಕ್ಕೆ ಕೈ ಕೊಟ್ಟಿದ್ದಾರೆ. 2017 ರಲ್ಲಿ ಸಹರಾನ್‌ಪುರದ ಬೆಹತ್ ಕ್ಷೇತ್ರದಿಂದ ಗೆದ್ದಿದ್ದ ನರೇಶ್ ಸೈನಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ.


5. ಸೋಹೈಲ್ ಅಖ್ತರ್ ಅನ್ಸಾರಿ ನಡೆ ನಿಗೂಢ:

ಉತ್ತರ ಪ್ರದೇಶ ಚುನಾವಣೆಯಲ್ಲಿ ಕಾನ್ಪುರ ಕಂಟೋನ್ಮೆಂಟ್ ಕ್ಷೇತ್ರದಿಂದ ಸೊಹೈಲ್ ಅಖ್ತರ್ ಅನ್ಸಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಕಳೆದ 2017ರಲ್ಲಿ ಕಾಂಗ್ರೆಸ್‌ನಿಂದ ಅನ್ಸಾರಿ ಗೆಲುವು ಸಾಧಿಸಿದ್ದು, ಕಾನ್ಪುರ ಕಂಟೋನ್ಮೆಂಟ್ ಕ್ಷೇತ್ರಕ್ಕೆ ಸಮಾಜವಾದಿ ಪಕ್ಷದ ಅಭ್ಯರ್ಥಿ ಯಾರು ಎನ್ನುವುದು ಇನ್ನೂ ಪಕ್ಕಾ ಆಗಿಲ್ಲ. ಸೋಹೈಲ್ ಅಖ್ತರ್ ಅನ್ಸಾರಿಯೇ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿಯಲಿದ್ದಾರೆ ಎಂಬ ಬಗ್ಗೆ ಸುದ್ದಿ ಹರಿದಾಡುತ್ತಿದೆ.

ಅನ್ಸಾರಿ ಫೋನ್ ಸ್ವಿಚ್ ಆಫ್‌ನಲ್ಲಿ ಇಟ್ಟಿದ್ದಾರೆ ಎಂದು ಅವರ ನಿಕಟವರ್ತಿಗಳು ಹೇಳಿದ್ದಾರೆ. ಅನ್ಸಾರಿ ತಮ್ಮ ಕ್ಷೇತ್ರದಲ್ಲಿ ಜನರನ್ನು ಭೇಟಿಯಾಗುತ್ತಿದ್ದು, ಅವರು ಕಾಂಗ್ರೆಸ್ ಅಥವಾ ಸಮಾಜವಾದಿ ಪಕ್ಷದ ಪೈಕಿ ಯಾವ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅನ್ಸಾರಿಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಿರುವುದು ಅವರು, ಪ್ರಿಯಾಂಕಾ ಗಾಂಧಿಯವರ ವಿಶ್ವಾಸದಲ್ಲಿದ್ದಾರೆ ಎಂಬುದನ್ನು ತೋರಿಸುತ್ತದೆ. ಆದರೆ, ಯುಪಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ ಅನ್ಸಾರಿ ಗೆಲುವು ಕ್ಷೀಣ ಎಂದು ಶಾಸಕರ ಆಪ್ತ ಮೂಲಗಳು ತಿಳಿಸಿವೆ.

ಕಾಂಗ್ರೆಸ್ ತೊರೆದವರ ಪಟ್ಟಿ ಏರಿಕೆ

ಕಾಂಗ್ರೆಸ್ ತೊರೆದವರ ಪಟ್ಟಿ ಏರಿಕೆ

1. ಲಲಿತೇಶ್ ಪಾಟಿ ತ್ರಿಪಾಠಿ:

ಕಳೆದ ವರ್ಷವಷ್ಟೇ ಕಾಂಗ್ರೆಸ್‌ನ ಯುವ ಮುಖ 37 ವರ್ಷದ ಲಲಿತೇಶ್ ಪಾಟಿ ತ್ರಿಪಾಠಿ ತೃಣಮೂಲ ಕಾಂಗ್ರೆಸ್‌ ಪಕ್ಷಕ್ಕೆ ಸೇರಿದರು. ಮಾಜಿ ಶಾಸಕ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲಾಪತಿ ತ್ರಿಪಾಠಿ ಅವರ ಮರಿಮೊಮ್ಮಗನಾಗಿದ್ದಾರೆ.

2. ಸುಪ್ರಿಯಾ ಆರಾನ್:

ಕಾಂಗ್ರೆಸ್ ಪಕ್ಷವನ್ನು ತೊರೆದ ಮತ್ತೊಂದು ಪ್ರಮುಖ ಮುಖವೆಂದರೆ ಸುಪ್ರಿಯಾ ಆರಾನ್. ಇವರು ಬರೇಲಿಯ ಮಾಜಿ ಮೇಯರ್ ಮತ್ತು ಮಾಜಿ ಕಾಂಗ್ರೆಸ್ ಸಂಸದ ಪ್ರವೀಣ್ ಸಿಂಗ್ ಅರೋನ್ ಅವರ ಪತ್ನಿ ಆಗಿದ್ದಾರೆ. ಅರೋನ್ ದಂಪತಿ ಕಾಂಗ್ರೆಸ್ ತೊರೆದು ಸಮಾಜವಾದಿ ಪಕ್ಷಕ್ಕೆ ಸೇರಿದ್ದರು. ಸುಪ್ರಿಯಾ ಅರಾನ್‌ಗೆ ಬರೇಲಿ ಕಂಟೋನ್ಮೆಂಟ್‌ನಿಂದ ಪಕ್ಷದ ಟಿಕೆಟ್ ನೀಡಿರುವುದು ಕಾಂಗ್ರೆಸ್‌ಗೆ ದೊಡ್ಡ ಮುಖಭಂಗವಾಗಿದೆ. ಉತ್ತರ ಪ್ರದೇಶದಲ್ಲಿ ಮಹಿಳಾ ಸಬಲೀಕರಣವನ್ನು ತಮ್ಮ ಪಕ್ಷದ ಪ್ರಮುಖ ಚುನಾವಣಾ ಅಜೆಂಡಾ ಎಂದು ಪ್ರಿಯಾಂಕಾ ಗಾಂಧಿ ಪ್ರತಿಪಾದಿಸಿದ ಹೊರತಾಗಿ ಸುಪ್ರಿಯಾ ರಾಜೀನಾಮೆ ನೀಡಿದ್ದಾರೆ. ಉತ್ತರ ಪ್ರದೇಶದಲ್ಲಿ ಕ್ಷೀಣಿಸುತ್ತಿರುವ ಕಾಂಗ್ರೆಸ್‌ನಲ್ಲಿ ತಮ್ಮ ರಾಜಕೀಯ ಭವಿಷ್ಯ ಇಲ್ಲವೆಂದು ಅರೋನ್ ಈ‌ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

3. ಹೈದರ್ ಅಲಿ ಖಾನ್:

ಉತ್ತರ ಪ್ರದೇಶ ಚುನಾವಣೆಯಲ್ಲಿ ಸ್ಪರ್ಧಿಸಿದ ನಂತರ ಕಾಂಗ್ರೆಸ್ ತೊರೆದ ಇನ್ನೊಬ್ಬ ನಾಯಕ ಹೈದರ್ ಅಲಿ ಖಾನ್. ಫೋರ್ಜರಿ ಪ್ರಕರಣದಲ್ಲಿ ಜೈಲು ಸೇರಿರುವ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಭದ್ರಕೋಟೆಯಾದ ರಾಮ್‌ಪುರದ ಯುವ‌ ನಾಯಕ ಹೈದರ್ ಅಲಿ ಖಾನ್ ಎಂದು ಕಾಂಗ್ರೆಸ್ ಬಿಂಬಿಸುತ್ತಿತ್ತು. ಹೈದರ್ ಅಲಿ ಖಾನ್ ತಂದೆ ಕಾಜಿಮ್ ಅಲಿ ಖಾನ್, ರಾಮ್‌ಪುರ ಕ್ಷೇತ್ರದಿಂದ ಅಜಂ ಖಾನ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಇತ್ತ ರಾಮ್‌ಪುರ ಜಿಲ್ಲೆಯ ಸುವಾರ್ ಕ್ಷೇತ್ರದಿಂದ ಹೈದರ್ ಅಲಿ ಖಾನ್ ಅವರನ್ನು ಕಣಕ್ಕಿಳಿಸಲಾಗಿತ್ತು. ಆದರೆ ಅವರು ಕಾಂಗ್ರೆಸ್ ತೊರೆದು ಅಪ್ನಾ ದಳ (ಸೋನೆಲಾಲ್) ಸೇರಿದ್ದಾರೆ. 2014 ರಿಂದ ಈಚೆಗೆ ಉತ್ತರ ಪ್ರದೇಶದಲ್ಲಿ ಬಿಜೆಪಿ ಅಥವಾ ಮಿತ್ರಪಕ್ಷದಿಂದ ಟಿಕೆಟ್ ನೀಡಿದ ಮೊದಲ ಮುಸ್ಲಿಂ ಮುಖ ಎಂಬ ಹೆಗ್ಗಳಿಕೆಗೆ ಹೈದರ್ ಅಲಿ ಖಾನ್ ಪಾತ್ರರಾಗಿದ್ದಾರೆ. ಅವರು ಅಪ್ನಾ ದಳ (ಸೋನೆಲಾಲ್) ಪಕ್ಷದಿಂದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.

ಕಾಂಗ್ರೆಸ್ಸಿನಲ್ಲಿ ಉಳಿಯುವವರ ಬಗ್ಗೆ ಅಜಯ್ ಕುಮಾರ್ ಲಲ್ಲು ಹೇಳಿಕೆ

ಕಾಂಗ್ರೆಸ್ಸಿನಲ್ಲಿ ಉಳಿಯುವವರ ಬಗ್ಗೆ ಅಜಯ್ ಕುಮಾರ್ ಲಲ್ಲು ಹೇಳಿಕೆ

ಮಾಜಿ ಕೇಂದ್ರ ಸಚಿವ ಆರ್ ಪಿ ಎನ್ ಸಿಂಗ್ ಕಾಂಗ್ರೆಸ್ ತೊರೆದಿರುವ ಬಗ್ಗೆ ಉತ್ತರ ಪ್ರದೇಶದ ಕಾಂಗ್ರೆಸ್ ಅಧ್ಯಕ್ಷ ಅಜಯ್ ಕುಮಾರ್ ಲಲ್ಲು ಪ್ರತಿಕ್ರಿಯೆ ನೀಡಿದ್ದಾರೆ. ಅವರು ರಾಜ-ಮಹಾರಾಜ', ನನ್ನಂತಹ ಬಡವರು ಕಾಂಗ್ರೆಸ್‌ನ ರಾಜ್ಯಾಧ್ಯಕ್ಷರಾಗಿರುವುದು ಅವರಿಗೆ ಇಷ್ಟವಾಗಲಿಲ್ಲ ಮತ್ತು ಬಹುಶಃ ಅವರು ಪಕ್ಷವನ್ನು ತ್ಯಜಿಸಲು ಇದೇ ಕಾರಣವಾಗಿದೆ. ಇದು ಹೊಸ ಕಾಂಗ್ರೆಸ್ ಪಕ್ಷವಾಗಿದ್ದು, ಜನರ ಪರ ಕೆಲಸ ಮಾಡುವವರು ಮಾತ್ರ ಪಕ್ಷದಲ್ಲಿ ಉಳಿಯುತ್ತಾರೆ ಹಾಗೂ ಬೆಳೆಯುತ್ತಾರೆ. ಉತ್ತರ ಪ್ರದೇಶದ ಸಾಮಾನ್ಯ ಜನರಿಗೆ ಸಂಬಂಧಿಸಿದ ಸಮಸ್ಯೆಗಳ ನಿವಾರಣೆಗಾಗಿ ನಡೆಸಿದ ಹೋರಾಟದಲ್ಲಿ ಸಾವಿರಾರು ಕಾರ್ಯಕರ್ತರು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಜೊತೆಗೆ ನಿಂತುಕೊಂಡರು. ಪೊಲೀಸರ ಲಾಠಿ ಏಟು ತಿಂದರು, ಜೈಲಿಗೆ ಹೋದರು. ನಾನು ಕೂಡ ಹಲವು ಬಾರಿ ಜೈಲು ಪಾಲಾಗಿದ್ದೇನೆ, ಆದರೆ, ಆರ್‌ಪಿಎನ್ ಸಿಂಗ್‌ ಯಾವ ಪ್ರತಿಭಟನೆಯಲ್ಲೂ ಕಾಣಿಸಿಕೊಂಡಿರಲಿಲ್ಲ ಎಂದು ಅಜಯ್ ಕುಮಾರ್ ಲಲ್ಲು ಕುಟುಕಿದ್ದಾರೆ.

ಉತ್ತರ ಪ್ರದೇಶದಲ್ಲಿ ಏಳು ಹಂತಗಳಲ್ಲಿ ಮತದಾನ

ಉತ್ತರ ಪ್ರದೇಶದಲ್ಲಿ ಏಳು ಹಂತಗಳಲ್ಲಿ ಮತದಾನ

ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, ಫೆಬ್ರವರಿ 14, ಫೆಬ್ರವರಿ 20, ಫೆಬ್ರವರಿ 23, ಫೆಬ್ರವರಿ 27, ಮಾರ್ಚ್ 3 ಮತ್ತು ಮಾರ್ಚ್ 7ರಂದು ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಅಂತಿಮವಾಗಿ ಮಾರ್ಚ್ 10ರಂದು ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ, ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ, ಕಾಂಗ್ರೆಸ್ ಮತ್ತು ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷದ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತಿದೆ.

ಈ ಹಿಂದೆ 2017ರಲ್ಲಿ ಉತ್ತರ ಪ್ರದೇಶದಲ್ಲಿ 403 ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅತಿಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆ ಏರಿತ್ತು. ಒಟ್ಟು 403 ಕ್ಷೇತ್ರಗಳ ಪೈಕಿ ಬಿಜೆಪಿ 312 ಸ್ಥಾನಗಳನ್ನು ಗೆದ್ದಿತ್ತು. ಸಮಾಜವಾದಿ ಪಕ್ಷ 47 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಬಹುಜನ ಸಮಾಜವಾದಿ ಪಕ್ಷವು 19 ಕ್ಷೇತ್ರಗಳಲ್ಲಿ ಗೆಲುವಿನ ಬಾವುಟ ಹಾರಿಸಿತ್ತು. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದ್ದು, ಕೇವಲ ಏಳು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+