5 ಎಕರೆ ಭೂಮಿ ನಮಗೆ ಕೊಡಿ, ರಾಮನ ಹೆಸರಲ್ಲಿ ಆಸ್ಪತ್ರೆ ಕಟ್ತೀವಿ: ಶಿಯಾ ಮಂಡಳಿ
ಲಕ್ನೋ, ನವೆಂಬರ್ 25: ಸುಪ್ರೀಂಕೋರ್ಟ್‌ನ ನಿರ್ದೇಶನದಂತೆ ಸರ್ಕಾರ ನೀಡಲಿರುವ ಐದು ಎಕರೆ ಭೂಮಿ ಸುನ್ನಿ ವಕ್ಫ್ ಮಂಡಳಿ ಮತ್ತು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಗೆ (ಎಐಎಂಪಿಎಲ್‌ಬಿ) ಬೇಡವೆನಿಸಿದರೆ ಅದನ್ನು ಶಿಯಾ ವಕ್ಫ್ ಮಂಡಳಿಗೆ ಪಡೆದುಕೊಳ್ಳಲು ಅವಕಾಶ ನೀಡಲಿ. ಆ ಜಾಗದಲ್ಲಿ ಶ್ರೀರಾಮನ ಹೆಸರಿನಲ್ಲಿ ಆಸ್ಪತ್ರೆಯೊಂದನ್ನು ಕಟ್ಟುತ್ತೇವೆ ಎಂದು ಶಿಯಾ ವಕ್ಫ್ ಮಂಡಳಿ ಅಧ್ಯಕ್ಷ ವಾಸಿಮ್ ರಿಜ್ವಿ ಸೋಮವಾರ ಹೇಳಿದರು.
ನಗರದಲ್ಲಿ ಎಎನ್‌ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, 'ಆ ಐದು ಎಕರೆ ಭೂಮಿಯನ್ನು ಪಡೆದುಕೊಳ್ಳಲು ಸುನ್ನಿ ವಕ್ಫ್ ಮಂಡಳಿ ಮತ್ತು ಎಐಎಂಪಿಎಲ್‌ಬಿ ಬಯಸದೆ ಇದ್ದರೆ ಅದನ್ನು ಶಿಯಾ ವಕ್ಫ್ ಮಂಡಳಿಗೆ ಕೊಡಬೇಕು. ನಾವು ಶ್ರೀರಾಮನ ಹೆಸರಿನಲ್ಲಿ ಆಸ್ಪತ್ರೆ ನಿರ್ಮಿಸುತ್ತೇವೆ. ಅದೇ ಜಾಗದಲ್ಲಿ ನಾವು ಮಸೀದಿ, ದೇವಸ್ಥಾನ, ಗುರುದ್ವಾರ ಮತ್ತು ಚರ್ಚ್‌ಅನ್ನು ಕೂಡ ಕಟ್ಟುತ್ತೇವೆ' ಎಂದರು.
'ಶ್ರೀರಾಮನ ಹೆಸರಿನ ಬಗ್ಗೆ ಇಡೀ ಜಗತ್ತಿನಲ್ಲಿ ಎಲ್ಲಿಯೂ ವಿವಾದವಿಲ್ಲ. ಇಸ್ಲಾಮಿಕ್ ನಂಬಿಕೆಯ ಪ್ರಕಾರ, ಪ್ರವಾದಿ ಮಹಮ್ಮದರಿಗಿಂತಲೂ ಜನಿಸಿದ ಯಾವುದೇ ಮಹಾನ್ ವ್ಯಕ್ತಿ ಪ್ರವಾದಿಯ ಪೂರ್ವಜರೆನಿಸುತ್ತಾರೆ. ಪ್ರವಾದಿ ಮಹಮದರು ತಮ್ಮಲ್ಲಿ ಜನಿಸಿದಕ್ಕೆ ಸೌದಿ ಅರೇಬಿಯಾದ ಜನರು ಹೆಮ್ಮೆ ಪಡುತ್ತಾರೆ. ಹಾಗೆಯೇ ಸಾವಿರಾರು ವರ್ಷದ ಹಿಂದೆ ಇಲ್ಲಿ ಶ್ರೀರಾಮ ಜನಿಸಿದ್ದಕ್ಕೆ ಪ್ರತಿಯೊಬ್ಬ ಭಾರತೀಯರೂ ಹೆಮ್ಮೆ ಪಡಬೇಕು' ಎಂದು ಹೇಳಿದರು.

ಸುಪ್ರೀಂಕೋರ್ಟ್ ನೀಡಿದ ಆದೇಶದಂತೆ ಐದು ಎಕರೆ ಜಮೀನನ್ನು ಪಡೆದುಕೊಳ್ಳಲು ನಿರಾಕರಿಸಿರುವ ಎಐಎಂಪಿಎಲ್‌ಬಿ, ಅಯೋಧ್ಯಾ ವಿವಾದದದ ಕುರಿತಾದ ತೀರ್ಪನ್ನು ಮರುಪರಿಶೀಲನೆ ನಡೆಸುವಂತೆ ಕೋರಿ ಅರ್ಜಿ ಸಲ್ಲಿಸಲು ತೀರ್ಮಾನಿಸಿದೆ.












Click it and Unblock the Notifications