ಗಂಡು ಮಗುವಿನ ಜನ್ಮ ನೀಡಿಲ್ಲ ಎಂದು ಮಹಿಳೆ ಮೇಲೆ ಹಲ್ಲೆ
ಲಕ್ನೋ, ಜೂನ್ 4: ಹೆಣ್ಣು ಇರುವುದೇ ಗಂಡಿನ ಸೇವೆ ಮಾಡಲು ಎನ್ನುವ ಕಾಲದಿಂದ ಹೆಣ್ಣು ಗಂಡಿಗಿಂತ ಯಾವುದರಲ್ಲೂ ಕಡಿಮೆ ಇಲ್ಲ ಎನ್ನುವಷ್ಟು ಮಟ್ಟಿಗೆ ಸಮಯ ಬದಲಾಗಿದೆ. ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಸಾಧನೆ ಮಾಡಿ ನಾವು ಗಂಡಿಗಿಂತ ಕಡಿಮೆ ಇಲ್ಲ ಎಂದು ಸಾಬೀತು ಮಾಡಿದ್ದಾರೆ.
ಹೆಣ್ಣು ಗಂಡು ಸಮಾನರು ಬಗ್ಗೆ ಎಷ್ಟೇ ಪ್ರಚಾರ ಮಾಡಿದರೂ ಇನ್ನೂ ಹಲವಡೆ ಹೆಣ್ಣು ಮಕ್ಕಳನ್ನು ಶಾಪ ಎನ್ನುವಂತೆ ನೋಡುವ ಮನಸ್ಥಿತಿ ಇರುವವರು ಇದ್ದಾರೆ. ಅದರಲ್ಲೂ ಭಾರತದಲ್ಲಿ ಹೆಣ್ಣು ಮಕ್ಕಳಾದರೆ ಮನೆಗೆ ಭಾರ ಎನ್ನುವಂತೆ ನೋಡುವ ಎಷ್ಟೋ ಮಂದಿ ಇದ್ದಾರೆ. 'ಬೇಟಿ ಬಚಾವ್ ಬೇಟಿ ಪಡಾವ್' ಎಂದು ಪ್ರಧಾನಿ ಮೋದಿಯೇ ಕರೆ ನೀಡಿದ್ದಾರೆ. ಹೆಣ್ಣು ಮಗು ಹುಟ್ಟಿದರೆ ಭಾಗ್ಯಲಕ್ಷ್ಮಿ ಬಾಂಡ್ ನೀಡುವ ಯೋಜನೆ ಕರ್ನಾಟಕದಲ್ಲಿದೆ. ಆದರೂ ಕೆಲವರಿಗೆ ಗಂಡು ಮಕ್ಕಳೇ ಬೇಕು ಎನ್ನುವ ಧೋರಣೆ ಮಾತ್ರ ಕಡಿಮೆಯಾಗಿಲ್ಲ.

ಹೆಣ್ಣಿಗೆ ಹೆಣ್ಣೇ ಶತ್ರು ಎನ್ನುವ ಗಾದೆಯೊಂದಿದೆ ಈ ಸುದ್ದಿ ನೋಡಿದರೆ ಇಂತವರನ್ನು ನೋಡಿಯೇ ಗಾದೆ ಮಾಡಲಾಗಿದೆ ಎನ್ನಿಸದೇ ಇರದು. ಗಂಡು ಮಗುವಾಗಿಲ್ಲ ಎಂದು ಮಹಿಳೆಯನ್ನು ಅತ್ತೆಯಂದಿರು ಬೀದಿಯಲ್ಲೇ ಥಳಿಸಿದ ಘಟನೆ ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯಲ್ಲಿ ನಡೆದಿದೆ. ಮಹಿಳೆಗೆ ಥಳಿಸುತ್ತಿರುವ ವೀಡಿಯೋ ಇದೀಗ ವೈರಲ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
A woman was mercilessly beaten for not giving birth to a son by her family members in Ramnagar Jukha area of UP's Mahoba district. All the residents of the area stood as spectators saying that it's a family matter.
— Kanwardeep singh (@KanwardeepsTOI) June 4, 2022
Warning: sensitive content@NCWIndia @Uppolice pic.twitter.com/TKeNd0nP1A
ಗಂಡು ಮಗುವಾಗಿಲ್ಲ ಎಂದು ಹಲ್ಲೆ
ಇಬ್ಬರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ಕಾರಣಕ್ಕೆ ಮಹಿಳೆಗೆ ಆಕೆಯ ಪತಿ ಮತ್ತು ಕುಟುಂಬಸ್ಥರು ಅಮಾನುಷವಾಗಿ ಥಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತನಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಗಂಡು ಮಗು ಬೇಕೆಂದು ಪತಿ ಮತ್ತು ಅತ್ತೆಯಂದಿರು ಪದೇ ಪದೇ ಕಿರುಕುಳ ನೀಡಿ ದೈಹಿಕ ಹಲ್ಲೆ ನಡೆಸುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
"ನನ್ನ ಗಂಡ ಮತ್ತು ಅತ್ತೆಯಂದಿರು ನನಗೆ ಗಂಡು ಮಗುವಾಗಲಿಲ್ಲ ಎಂದು ಚಿತ್ರಹಿಂಸೆ ನೀಡುತ್ತಿದ್ದರು, ಎರಡನೇ ಮಗಳು ಹುಟ್ಟಿದ ನಂತರ ಅದು ಇನ್ನೂ ಹೆಚ್ಚಾಗಿದೆ" ಎಂದು ಮಹಿಳೆ ಹೇಳಿದ್ದಾರೆ. ಮಾತ್ರವಲ್ಲದೆ ಮಹಿಳೆಗೆ ಊಟವನ್ನು ಕೊಡದೆ ಅತ್ತೆಯಂದಿರು ಹಿಂಸೆ ನೀಡಿದ್ದಾರೆ. ಕೊನೆಗೆ ಮಹಿಳೆ ಕೂಲಿ ಕೆಲಸಕ್ಕೆ ಹೋಗಲು ಶುರು ಮಾಡಿದ್ದಾರೆ.
ವೈರಲ್ ಆಗಿರುವ ವೀಡಿಯೋದಲ್ಲಿ ಇಬ್ಬರು ಮಹಿಳೆಯರು ಸೇರಿಕೊಂಡು ಮತ್ತೊಬ್ಬ ಮಹಿಳೆಗೆ ಅಮಾನುಷವಾಗಿ ಹೊಡೆಯುವುದನ್ನು ನೋಡಬಹುದು. ಮಹಿಳೆ ಅಳುತ್ತಾ, ಹೊಡೆಯದಂತೆ ಬೇಡಿಕೊಂಡರೂ ಥಳಿಸಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ ಎಂದು ಪೊಲಿಸರು ತಿಳಿಸಿದ್ದಾರೆ. ಹಲ್ಲೆಗೊಳಗಾದ ಮಹಿಳೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಥಮಿಕ ವರದಿ (ಎಫ್‌ಐಆರ್) ದಾಖಲಿಸಿದ್ದೇವೆ ಮತ್ತು ಹಲ್ಲೆ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮಹೋಬಾದ ಪೊಲೀಸ್ ವರಿಷ್ಠಾಧಿಕಾರಿ ಸುಧಾ ಸಿಂಗ್ ತಿಳಿಸಿದ್ದಾರೆ.












Click it and Unblock the Notifications