ಉತ್ತರ ಪ್ರದೇಶದಲ್ಲಿ ಹಿಂಸಾಚಾರ, ಇಬ್ಬರು ಸಾವನ್ನಪ್ಪಿದ್ದಾರೆ ಎಂದ ರೈತರು
ಲಕ್ನೋ, ಅಕ್ಟೋಬರ್ 03: ಉತ್ತರ ಪ್ರದೇಶದ ಲಖಿಂಪುರ್ ಖೇರಿ ಜಿಲ್ಲೆಯಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಇಬ್ಬರು ಸಚಿವರುಗಳ ವಿರುದ್ದ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಸಚಿವರ ಬೆಂಗಾವಲಿನಿಂದ ಹಲ್ಲೆಗೆ ಒಳಗಾಗಿ ಇಬ್ಬರು ರೈತರು ಸಾವನ್ನಪ್ಪಿದ್ದಾರೆ ಎಂದು ರೈತರು ಹೇಳಿಕೊಂಡಿದ್ದಾರೆ.
ಲಖಿಂಪುರ್ ಖೇರಿ ಜಿಲ್ಲೆಯಲ್ಲಿ ಹಿಂಸಾಚಾರ ಮತ್ತಷ್ಟು ಅಧಿಕವಾಗಿದೆ. ಆ ಪ್ರದೇಶದಲ್ಲಿ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಇನ್ನು ಹಲವಾರು ಮಂದಿ ಗಾಯಗೊಂಡು ನೆಲದ ಮೇಲೆ ಬಿದ್ದಿರುವ ದೃಶ್ಯಗಳು ಕೂಡಾ ಕಂಡು ಬಂದಿದೆ ಎಂದು ವರದಿಯಾಗಿದೆ. ಈ ಎಲ್ಲಾ ಘಟನೆಗಳ ಹಿನ್ನೆಲೆ ಈ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಈ ನಡುವೆ ಉಪ ಮುಖ್ಯಮಂತ್ರಿ ಕೇಶವ ಮೌರ್ಯ ಮತ್ತು ಕೇಂದ್ರ ಸಚಿವ ಅಜಯ್ ಮಿಶ್ರಾ ವಿರುದ್ದ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಇಬ್ಬರೂ ಸಚಿವರುಗಳು ಬೆಂಗಾವಲು ವಾಹಗಳ ವೇಗಕ್ಕೆ ಇಬ್ಬರು ರೈತರು ಸಾವನ್ನಪ್ಪಿದ್ದಾರೆ. ಎಂಟು ಮಂದಿ ಗಾಯುಗೊಂಡಿದ್ದಾರೆ ಎಂದು ರೈತರು ತಿಳಿಸಿದ್ದಾರೆ.

ಈ ಬಗ್ಗೆ ಸಂಯುಕ್ತ ಕಿಸಾನ್ ಮೋರ್ಚಾವು ಟ್ವೀಟ್ ಮಾಡಿದೆ. "ಉತ್ತರ ಪ್ರದೇಶದ ಲಖಿಂಪುರ್ ಖೇರಿ ಜಿಲ್ಲೆಯಲ್ಲಿ ಇಬ್ಬರು ರೈತರು ಸಾವನ್ನಪ್ಪಿದ್ದಾರೆ ಹಾಗೂ ಎಂಟು ಮಂದಿ ರೈತರು ಗಂಭೀರವಾಗಿ ಗಾಯಗೊಂಡಿದ್ದಾರೆ," ಎಂದು ಹೇಳಿದ್ದಾರೆ.
"ಕೇಂದ್ರ ಗೃಹ ಸಚಿವರ ಕಾರ್ಯಕ್ರಮದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಇಬ್ಬರು ಸಚಿವರುಗಳ ಬೆಂಗಾವಲು ಕಾರುಗಳು ವೇಗವಾಗಿ ಹೋಗಿದ್ದು, ಈ ಸಂದರ್ಭದಲ್ಲಿ ಬೀದಿ ಬದಿಯಲ್ಲಿ ನಿಂತಿದ್ದ ಇಬ್ಬರು ರೈತರು ಸಾವನ್ನಪ್ಪಿದ್ದಾರೆ, ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ," ಎಂದು ಸಂಯುಕ್ತ ಕಿಸಾನ್ ಮೋರ್ಚಾವು ಟ್ವೀಟ್ ಮಾಡಿದೆ.
ಆದರೆ ಈ ಬಗ್ಗೆ ಆಡಳಿತವು ಯಾವುದೇ ಅಧಿಕೃತ ಹೇಳಿಕೆಯನ್ನು ಆಗಲಿ ಅಥವಾ ಸ್ಪಷ್ಟನೆಯನ್ನು ಆಗಲಿ ಈವರೆಗೂ ನೀಡಿಲ್ಲ.
ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಳೆದ ಸರಿಸುಮಾರು ಒಂದು ವರ್ಷದಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ದೆಹಲಿಯ ಗಡಿಯಲ್ಲಿ ನಡೆಯುತ್ತಿರುವ ಈ ಪ್ರತಿಭಟನೆಯ ಬಗ್ಗೆ ಇತ್ತೀಚೆಗೆ ಸುಪ್ರೀಂ ಕೋರ್ಟ್ ಆಕ್ಷೇಪವನ್ನು ವ್ಯಕ್ತಪಡಿಸಿದೆ. ಆದರೆ ರೈತರು ಮಾತ್ರ ತಮ್ಮ ಬೇಡಿಕೆಯನ್ನು ಈಡೇರಿಸುವವರೆಗೂ ತಮ್ಮ ಈ ಹೋರಾಟವನ್ನು ಬಿಡಲಾರೆವು ಎಂದು ಹೇಳಿದ್ದಾರೆ.
ಇನ್ನು ರೈತರು ಹೆದ್ದಾರಿಯನ್ನು ಅಥವಾ ರಸ್ತೆಯನ್ನು ಬಂದ್ ಮಾಡುತ್ತಿದ್ದಾರೆ ಎಂಬ ಆರೋಪದ ಬಗ್ಗೆ ಮಾತನಾಡಿದ ರೈತರು, "ಪೊಲೀಸರೇ ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಿದ್ದಾರೆ. ನಾವು ಜನರಿಗೆ ಸಂಚರಿಸಲು ದಾರಿ ಮಾಡಿಕೊಡುತ್ತಿದ್ದೇವೆ," ಎಂದಿದ್ದಾರೆ. "ನಗರಕ್ಕೆ ನಮಗೆ ಪ್ರವೇಶ ಮಾಡಲು ದೆಹಲಿ ಪೊಲೀಸರು ಅವಕಾಶ ನೀಡುತ್ತಿಲ್ಲ, ಆದ್ದರಿಂದ ನಾವು ಗಡಿಯಲ್ಲೇ ಉಳಿಯಬೇಕಾದ ಪರಿಸ್ಥಿತಿ ಬಂದಿದೆ" ಎಂದು ರೈತರು ಆರೋಪ ಮಾಡಿದ್ದಾರೆ.
75 ವರ್ಷದ ಸುಬೇಗ್ ಸಿಂಗ್, "ನಾವು ನಾಗರಿಕರಿಗೆ ಯಾವುದೇ ತೊಂದರೆಯನ್ನು ಉಂಟು ಮಾಡಿಲ್ಲ," ಎಂದು ಹೇಳಿದ್ದಾರೆ. "ನಾವು ನಿರಂತರವಾಗಿ ಬಡವರಿಗೆ ಹಾಗೂ ಕಾರ್ಮಿಕರಿಗೆ ಸಹಾಯ ಮಾಡುತ್ತಿದ್ದೇವೆ ಹಾಗೂ ಕಾರ್ಮಿಕರ, ಬಡವರ ಮಕ್ಕಳಿಗೂ ಸಹಾಯ ಮಾಡುತ್ತಿದ್ದೇವೆ. ಬಡ ಕಾರ್ಮಿಕರು ಆಹಾರವನ್ನು ಪಡೆದುಕೊಳ್ಳಲು ಪ್ರತಿಭಟನಾ ಸ್ಥಳಕ್ಕೆ ಬರುತ್ತಾರೆ," ಎಂದು ಹೇಳಿದ್ದಾರೆ. ಕಳೆದ ನವೆಂಬರ್‌ನಿಂದ ಪ್ರತಿಭಟನೆ ಸ್ಥಳದಲ್ಲಿ ಇರುವ 80 ವರ್ಷದ ಗುರ್ಮಿತ್ ಸಿಂಗ್ ಈ ಸಂದರ್ಭದಲ್ಲಿ ಮಾತನಾಡಿ, "ನಮ್ಮ ಬೇಡಿಕೆಯನ್ನು ಪೂರೈಸುವವರೆಗೂ ನಾವು ಈ ಸ್ಥಳದಿಂದ ಎಲ್ಲಿಗೂ ಹೋಗುವುದಿಲ್ಲ," ಎಂದಿದ್ದಾರೆ.
ಈ ನಡುವೆ ರೈತ ಸಂಘಟನೆ ಸಂಯುಕ್ತ ಕಿಸಾನ್ ಮೋರ್ಚಾವು "ಹೆದ್ದಾರಿಯನ್ನು ಬಿಜೆಪಿ ಸರ್ಕಾರದ ಪೊಲೀಸರು ಬಂದ್ ಮಾಡಿದ್ದಾರೆ," ಎಂದು ಆರೋಪ ಮಾಡಿದೆ. "ರೈತರ ಬೇಡಿಕೆಯನ್ನು ಪೂರೈಸಿದರೆ ಪ್ರತಿಭಟನೆಯು ನಿಲ್ಲಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರಕ್ಕೆ ತಿಳಿದಿದೆ. ಆದರೆ ಹಾಗೆ ಮಾಡದಿರಲು ಕೇಂದ್ರ ಸಕಾರ ನಿರ್ಧಾರ ಮಾಡಿದೆ. ನೂರು ರೈತರು ಹುತಾತ್ಮರಾದರೂ ಕೂಡಾ ಪ್ರತಿಭಟನೆಯನ್ನು ತಡೆಯುವ ಸಲುವಾಗಿ ರೈತರ ಬೇಡಿಕೆ ಪರಿಹರಿಸಲು ಸರ್ಕಾರ ಒಪ್ಪಲ್ಲ," ಎಂದು ಸಂಯುಕ್ತ ಕಿಸಾನ್ ಮೋರ್ಚಾದ ಸದಸ್ಯರು ಹೇಳಿದ್ದಾರೆ.
(ಒನ್‌ಇಂಡಿಯಾ ಸುದ್ದಿ)












Click it and Unblock the Notifications