ಉ.ಪ್ರದೇಶ ಚುನಾವಣೆ; ಮತ್ತೊಂದು ಸಮೀಕ್ಷೆಯಲ್ಲೂ ಬಿಜೆಪಿಗೆ ಅಧಿಕಾರ!
ಲಕ್ನೋ, ಡಿಸೆಂಬರ್ 19; ದೇಶದ ಗಮನ ಸೆಳೆದಿರುವ ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಗೆ ಕೆಲವು ತಿಂಗಳು ಬಾಕಿ ಇದೆ. ರಾಜ್ಯದ ಜನರ ಅಭಿಪ್ರಾಯವನ್ನು ಎಬಿಪಿ ನ್ಯೂಸ್ ಮತ್ತು ಸಿ-ವೋಟರ್ ಸಮೀಕ್ಷೆ ಮೂಲಕ ಸಂಗ್ರಹಣೆ ಮಾಡಿದೆ.
ಉತ್ತರ ಪ್ರದೇಶ ಚುನಾವಣೆಗೆ ಈಗಾಗಲೇ ಎಲ್ಲಾ ರಾಜಕೀಯ ಪಕ್ಷಗಳು ಪ್ರಚಾರ ಆರಂಭಿಸಿವೆ. ಶನಿವಾರ ಪ್ರಧಾನಿ ನರೇಂದ್ರ ಮೋದಿ "ಯುಪಿ + ಯೋಗಿ (ಉಪಯೋಗಿ)" ಎಂಬ ಹೊಸ ಚುನಾವಣಾ ಘೋಷಣೆ ಮಾಡುವ ಮೂಲಕ ಪ್ರಚಾರದ ಕಾವು ಹೆಚ್ಚಿಸಿದ್ದಾರೆ.
ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಬಿಜೆಪಿಯ ಚುನಾವಣಾ ಘೋಷಣೆಗೆ ಟಾಂಗ್ ನೀಡಿದ್ದಾರೆ. ಯೋಗಿ ಆದಿತ್ಯನಾಥ್ ಆಡಳಿತದ ವೈಫಲ್ಯತೆ ಬಗ್ಗೆ ಹೇಳಿರುವ ಅವರು, "ರಾಜ್ಯದ ಈಗಿನ ಸರ್ಕಾರ ಅನುಪಯೋಗಿ" ಎಂದು ಬಿಜೆಪಿಗೆ ತಿರುಗೇಟು ಕೊಟ್ಟಿದ್ದಾರೆ.
ಡಿಸೆಂಬರ್ 18ರಂದು ಎಬಿಪಿ ನ್ಯೂಸ್ ಮತ್ತು ಸಿ-ವೋಟರ್ ಚುನಾವಣಾ ಪೂರ್ವ ಸಮೀಕ್ಷೆಯ ವರದಿ ಪ್ರಕಟವಾಗಿದೆ. ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆ ಹೇಳಿದೆ. ಇದುವರೆಗೂ ಪ್ರಕಟವಾದ ಸಮೀಕ್ಷೆಗಳು ಸಹ ಇದನ್ನೇ ಹೇಳಿದ್ದವು.
2022ರಲ್ಲಿ ಉತ್ತರ ಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ ಮತ್ತು ಮಣಿಪುರ ರಾಜ್ಯಗಳ ಚುನಾವಣೆ ನಡೆಯುತ್ತಿದೆ. ಬಿಜೆಪಿಗೆ ಉತ್ತರ ಪ್ರದೇಶ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಕಳೆದ 10 ದಿನದಲ್ಲಿ 4 ಬಾರಿ ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ.

ಮತಗಳಿಕೆ ಪ್ರಮಾಣ
ಎಬಿಪಿ ನ್ಯೂಸ್ ಮತ್ತು ಸಿ-ವೋಟರ್ ಚುನಾವಣಾ ಪೂರ್ವ ಸಮೀಕ್ಷೆಯ ವರದಿಯಲ್ಲಿ ಯಾವ ಪಕ್ಷ ಹೆಚ್ಚು ಮತಗಳನ್ನು ಗಳಿಸಬಹುದು ಎಂದು ಅಭಿಪ್ರಾಯ ಸಂಗ್ರಹ ಮಾಡಲಾಗಿದೆ. ಬಿಜೆಪಿಗೆ ಸಮಾಜವಾದಿ ಪಕ್ಷ ಚುನಾವಣೆಯಲ್ಲಿ ಪ್ರತಿಸ್ಪರ್ಧಿಯಾಗಲಿದೆ ಎಂಬುದು ಸಮೀಕ್ಷೆಯ ವರದಿಯಿಂದ ತಿಳಿದುಬಂದಿದೆ. ಬಿಜೆಪಿ ಶೇ 40ರಷ್ಟು ಮತಗಳನ್ನು ಪಡೆದರೆ, ಸಮಾಜವಾದಿ ಪಕ್ಷ ಶೇ 34ರಷ್ಟು ಮತ ಪಡೆಯಲಿದೆ ಎಂದು ಸಮೀಕ್ಷೆ ಹೇಳಿದೆ.

ಬಿಜೆಪಿಗೆ ಮತ್ತೆ ರಾಜ್ಯದ ಅಧಿಕಾರ
ಎಬಿಪಿ ನ್ಯೂಸ್ ಮತ್ತು ಸಿ-ವೋಟರ್ ಚುನಾವಣಾ ಪೂರ್ವ ಸಮೀಕ್ಷೆ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದೆ. ಆದರೆ ಕಳೆದ ಚುನಾವಣೆಗಿಂತ ಕಡಿಮೆ ಸ್ಥಾನಗಳಲ್ಲಿ ಪಕ್ಷ ಜಯಗಳಿಸಲಿದೆ. ರಾಜ್ಯದಲ್ಲಿ ಬಿಎಸ್ಪಿ ಶೇ 13, ಕಾಂಗ್ರೆಸ್ ಶೇ 7, ಇತರರು ಶೇ 7ರಷ್ಟು ಮತಗಳನ್ನು ಪಡೆಯಲಿದ್ದಾರೆ ಎಂದು ಸಮೀಕ್ಷೆ ವರದಿ ಹೇಳಿದೆ.

ಪ್ರಬಲ ಎದುರಾಳಿಯಾಗಲಿದೆ
2022ರ ಉತ್ತರ ಪ್ರದೇಶ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ, ಬಿಎಸ್ಪಿ ಸೇರಿದಂತೆ ಇತರ ಯಾವುದೇ ಪಕ್ಷ ಬಿಜೆಪಿಯ ಯೋಗಿ ಆದಿತ್ಯನಾಥ್‌ಗೆ ಸೆಡ್ಡು ಹೊಡೆದು ಸರ್ಕಾರ ರಚನೆ ಮಾಡುವುದಿಲ್ಲ. ಆದರೆ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ ಮತಗಳಿಕೆ ಪ್ರಮಾಣ ಹೆಚ್ಚಾಗುತ್ತಿದೆ. ಚುನಾವಣೆಯಲ್ಲಿ ಪಕ್ಷ ಬಿಜೆಪಿಗೆ ಪ್ರಬಲ ಪೈಪೋಟಿ ನೀಡುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಹೇಳಿದೆ.
ಸಮಾಜವಾದಿ ಪಕ್ಷ ಚುನಾವಣಾ ಪ್ರಚಾರ ಆರಂಭಿಸಿದೆ. ಸಮಾನ ಮನಸ್ಕ ಚಿಕ್ಕ-ಚಿಕ್ಕ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳುತ್ತಿದೆ.

ಕಾಂಗ್ರೆಸ್ ಸಮಾವೇಶಗಳು
ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಉತ್ತರ ಪ್ರದೇಶದಲ್ಲಿ ಚುನಾವಣಾ ಸಮಾವೇಶಗಳನ್ನು ನಡೆಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಮತಗಳಿಕೆಯ ಪ್ರಮಾಣದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಡಿಸೆಂಬರ್ 4ರ ಸಮೀಕ್ಷೆ ಮತ್ತು ಡಿಸೆಂಬರ್ 18ರಂದು ಬಿಡುಗಡೆಯಾದ ಸಮೀಕ್ಷೆ ವರದಿಗಳಲ್ಲಿ ಬಿಜೆಪಿ ಮತ್ತು ಸಮಾಜವಾದಿ ಪಕ್ಷದ ನಡುವೆಯೇ ಪೈಪೋಟಿ ಇದೆ. ಡಿಸೆಂಬರ್ 4ರ ಸಮೀಕ್ಷೆಯಂತೆ ಶೇ 33ರಷ್ಟಿದ್ದ ಸಮಾಜವಾದಿ ಪಕ್ಷದ ಮತಗಳಿಕೆ ಈಗ ಶೇ 34ಕ್ಕೆ ಏರಿಕೆಯಾಗಿದೆ.












Click it and Unblock the Notifications