ಜಲಿಯನ್ ವಾಲಾಬಾಗ್ ಜೊತೆ ಲಖಿಂಪುರ್ ಖೇರಿ ಘಟನೆ ಹೋಲಿಸಿದ ಅಖಿಲೇಶ್ ಯಾದವ್
ಲಕ್ನೋ, ಫೆಬ್ರವರಿ 19: ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದ ಆರೋಪಿ ಆಶಿಶ್ ಮಿಶ್ರಾಗೆ ಜನತಾ ನ್ಯಾಯಾಲಯದಿಂದ ಜಾಮೀನು ಸಿಗುವುದಿಲ್ಲ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ.
ಶನಿವಾರ ಮಾತನಾಡಿದ ಅಖಿಲೇಶ್ ಯಾದವ್, ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣವು ಸ್ವತಂತ್ರ ಭಾರತದ ಜಲಿಯನ್ ವಾಲಾಬಾಗ್ ಘಟನೆಯನ್ನು ನಮಗೆ ನೆನಪಿಸುತ್ತಿದೆ ಎಂದು ಆರೋಪಿಸಿದರು.
ಉತ್ತರ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷದ ನೀತಿಗಳಿಂದಾಗಿ ರೈತರು ಮತ್ತು ಅವರ ಕುಟುಂಬಗಳು ಸಾಕಷ್ಟು ನಷ್ಟವನ್ನು ಅನುಭವಿಸಿವೆ. ಇದು ರಾಜ್ಯದಲ್ಲಿ ಬಿಜೆಪಿಯ ಸೋಲಿಗೆ ಪ್ರಮುಖ ಕಾರಣವಾಗುತ್ತದೆ ಎಂದು ಅಖಿಲೇಶ್ ಯಾದವ್ ಭವಿಷ್ಯ ನುಡಿದಿದ್ದಾರೆ.

ಜಲಿಯನ್ ವಾಲಾಬಾಗ್ ಜೊತೆ ಲಖಿಂಪುರ ಘಟನೆ ಹೋಲಿಕೆ:
ಲಖಿಂಪುರ್ ಖೇರಿ ಹಿಂಸಾಚಾರ ಪ್ರಕರಣವನ್ನು ಜಲಿಯನ್ ವಾಲಾಬಾಗ್ ಘಟನೆ ಜೊತೆ ಹೋಲಿಕೆ ಮಾಡಲಾಗಿದೆ. "ಉತ್ತರ ಪ್ರದೇಶದಲ್ಲಿ ರೈತರ ಮೇಲೆ ಜೀಪ್ ಹರಿಸಿದ ಘಟನೆ ನಡೆದಿದೆ. ಇದೇ ರೀತಿ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ, ಬ್ರಿಟಿಷರು ಎದುರಿನಿಂದ ಜನರ ಮೇಲೆ ಗುಂಡು ಹಾರಿಸಿದ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನೆನಪಾಗುತ್ತದೆ," ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.
ಫೆಬ್ರವರಿ 10ರಂದು ಆಶಿಶ್ ಮಿಶ್ರಾಗೆ ಜಾಮೀನು:
ಉತ್ತರ ಪ್ರದೇಶ ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಹಾಗೂ ಪ್ರಮುಖ ಆರೋಪಿ ಅಶಿಶ್ ಮಿಶ್ರಾಗೆ ಫೆಬ್ರವರಿ 10ರಂದು ಅಲಹಾಬಾದ್ ಹೈಕೋರ್ಟ್ ಲಕ್ನೋ ಪೀಠವು ಜಾಮೀನು ನೀಡಿತು. ಕೋರ್ಟ್ ಕ್ರಮಕ್ಕೆ ರಾಜಕೀಯ ವಲಯಗಳಷ್ಟೇ ಅಲ್ಲದೇ ರೈತ ಸಂಘಟನೆಗಳು ಮತ್ತು ರೈತ ಮುಖಂಡರಿಂದಲೂ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ಅಪರಾಧಿಗಳಿಗೆ ಜೈಲು:
ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರನಿಗೆ ಜಾಮೀನು ನೀಡಿರುವುದನ್ನು ಖಂಡಿಸಿದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖೀಲೇಶ್ ಯಾದವ್, ತಾವು ಅಧಿಕಾರಕ್ಕೆ ಬಂದರೆ ಅಪರಾಧಿಗಳನ್ನು ಹಾಗೂ ಅಪರಾಧಿಗಳನ್ನು ರಕ್ಷಿಸುತ್ತಿರುವವರನ್ನು ಜೈಲಿಗೆ ಕಳಿಸುವುದಾಗಿ ಭರವಸೆ ನೀಡಿದರು. ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾ ಸೇರಿದಂತೆ ನಾಲ್ವರು ಲಖಿಂಪುರದ ಖೇರಿಯ ಎಂಟು ಜನರ ಸಾವಿನ ಪ್ರಕರಣದ ಆರೋಪಿ ಆಗಿದ್ದಾರೆ. ಇತ್ತೀಚೆಗೆ ಜಾಮೀನು ಪಡೆದುಕೊಂಡ ಆಶಿಶ್ ಮಿಶ್ರಾರನ್ನು ಕಳೆದ ವರ್ಷ ಅಕ್ಟೋಬರ್ ತಿಂಗಳಿಲ್ಲಿ ಬಂಧಿಸಲಾಗಿತ್ತು.












Click it and Unblock the Notifications