"ನಾನು ಹೇಮಾ ಮಾಲಿನಿ ಆಗಲು ಬಯಸುವುದಿಲ್ಲ": ಬಿಜೆಪಿಗೆ ಜಯಂತ್ ಚೌಧರಿ ತಿರುಗೇಟು
ಲಕ್ನೋ, ಫೆಬ್ರವರಿ 2: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಅಖಾಡದಲ್ಲಿ ಆರೋಪ-ಪ್ರತ್ಯಾರೋಪಗಳ ನಡುವೆ ರಾಷ್ಟ್ರೀಯ ಲೋಕ ದಳ ಮುಖ್ಯಸ್ಥ ಜಯಂತ್ ಚೌಧರಿ ನೀಡಿರುವ ಹೇಳಿಕೆ ವಿವಾದವನ್ನು ಸೃಷ್ಟಿಸಿದೆ.
ನೀವು ಬಿಜೆಪಿಗೆ ಸೇರಿದರೆ, ನಾನು ನಿಮ್ಮನ್ನು ಹೇಮಾ ಮಾಲಿನಿ ಆಗಿ ಮಾಡುತ್ತೇನೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಿದ್ದರು ಎಂಬುದಾಗಿ ಆರ್‌ಎಲ್‌ಡಿ ಮುಖ್ಯಸ್ಥ ಜಯಂತ್ ಚೌಧರಿ ವಿವಾದಾತ್ಮಕ ಆರೋಪ ಮಾಡಿದ್ದಾರೆ.
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10ರಂದು ಮೊದಲ ಹಂತದ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆ ಬುಧವಾರ ಮಧುರಾದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಯಂತ್ ಚೌಧರಿ ಬಿಜೆಪಿ ವಿರುದ್ಧ ವಾಕ್ಪ್ರಹಾರ ನಡೆಸಿದರು. ತಮ್ಮೊಂದಿಗೆ ವೇದಿಕೆ ಹಂಚಿಕೊಂಡಿದ್ದ ಯೋಗೇಶ್ ನೌವ್ಹಾರ್ ಎದುರು ಅಮಿತ್ ಶಾ ಹೇಳಿದ್ದಾರೆ ಎನ್ನಲಾದ ಹೇಳಿಕೆಯನ್ನು ಉಲ್ಲೇಖಿಸಿದರು. "ಯೋಗೇಶ್ ನೀವು ನಮ್ಮೊಂದಿಗೆ ಸೇರಿಕೊಳ್ಳಿ, ನಾನು ನಿಮ್ಮನ್ನು ಹೇಮಾ ಮಾಲಿನಿಯಾಗಿ ಮಾಡುತ್ತೇನೆ," ಎಂದು ಅಮಿತ್ ಶಾ ಹೇಳಿದ್ದರು ಎಂದು ಜಯಂತ್ ಚೌಧರಿ ಹೇಳಿಕೆ ನೀಡುತ್ತಿದ್ದಂತೆ ನೆರೆದಿದ್ದ ಜನರು ಚಪ್ಪಾಳೆ ತಟ್ಟಿಕೊಂಡು ನಕ್ಕರು.

ನಾನು ಹೇಮಾ ಮಾಲಿನಿ ಆಗುವುದಕ್ಕೆ ಬಯಸುವುದಿಲ್ಲ
"ಅವರೆಲ್ಲರೂ ನನ್ನ ಬಗ್ಗೆ ಏನು ಹೇಳುತ್ತಾರೋ ಗೊತ್ತಿಲ್ಲ...ಅವರಿಗೆ ನನ್ನ ಬಗ್ಗೆ ಪ್ರೀತಿ ಅಥವಾ ಭಾವನೆ ಇದೆ ಅಂತಲ್ಲ. ನಾನು ಅವರಿಗೆ ಹೇಳುತ್ತೇನೆ -- 'ನನ್ನನ್ನು ಸಮಾಧಾನಪಡಿಸಿ ನಿಮಗೆ ಏನು ಸಿಗುತ್ತದೆ? ನಾನು ಹೇಮಾ ಮಾಲಿನಿಯಾಗಲು ಬಯಸುವುದಿಲ್ಲ. ಜನರಿಗಾಗಿ ಏನು ಮಾಡುತ್ತೀರಿ? ಏಳು ರೈತರ ಕುಟುಂಬಗಳಿಗೆ ಏನು ಕೊಟ್ಟಿದ್ದೀರಿ? ಅಜಯ್ ಮಿಶ್ರಾ ಇನ್ನೂ ಏಕೆ ಸಂಪುಟದಲ್ಲಿ ಸಚಿವರಾಗಿದ್ದಾರೆ?, ಎಂದು ಜಯಂತ್ ಚೌಧರಿ ಪ್ರಶ್ನೆ ಮಾಡಿದರು.
ಕಳೆದ ಅಕ್ಟೋಬರ್‌ನಲ್ಲಿ ಲಖಿಂಪುರ ಖೇರಿಯಲ್ಲಿ ನಡೆದ ಪ್ರತಿಭಟನೆ ವೇಳೆ ರೈತರ ಮೇಲೆ ಕಾರು ಹರಿಸಿದ ಆರೋಪದ ಮೇಲೆ ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾ ಜೈಲಿನಲ್ಲಿ ಇದ್ದಾರೆ. ಅವರನ್ನು ವಜಾಗೊಳಿಸುವಂತೆ ವಿರೋಧ ಪಕ್ಷಗಳು ಒತ್ತಾಯಿಸಿದರೂ, ಮಿಶ್ರಾರನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ಉಳಿಸಿಕೊಳ್ಳಲಾಗಿದೆ.

ಸಮಾಜವಾದಿ ಜೊತೆ ರಾಷ್ಟ್ರೀಯ ಲೋಕ ದಳ ಮೈತ್ರಿ
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಜಯಂತ್ ಚೌಧರಿ ನೇತೃತ್ವದ ರಾಷ್ಟ್ರೀಯ ಲೋಕ ದಳ (ಆರ್‌ಎಲ್‌ಡಿ) ಪಕ್ಷವು ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿದೆ. ಪಶ್ಚಿಮ ಯುಪಿಯಲ್ಲಿ ಜಾಟ್ ನಾಯಕ ಜಯಂತ್ ಚೌಧರಿ ಗಮನಾರ್ಹ ಹಿಡಿತ ಸಾಧಿಸಿದ್ದಾರೆ. ವಿಶೇಷವಾಗಿ ಈ ಪ್ರದೇಶದಲ್ಲಿ ಪ್ರಮುಖ ಮತದಾನದ ಬಣವಾದ ರೈತರ ಪರವಾಗಿ ಜಯಂತ್ ಚೌಧರಿ ಹೋರಾಡುತ್ತಿದ್ದಾರೆ.

ಜಾಟ್ ನಾಯಕನ ಸೆಳೆಯಲು ಆರ್‌ಎಲ್‌ಡಿ ಪರ ಅಮಿತ್ ಶಾ ಹೇಳಿಕೆ
ಕಳೆದ ಜನವರಿ 26ರಂದು ನವದೆಹಲಿಯಲ್ಲಿ ಜಾಟ್ ನಾಯಕರ ಸಭೆ ನಡೆಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಲೋಕ ದಳದ ಪರವಾಗಿ ಮಾತನಾಡಿದ್ದರು. ಆರ್‌ಎಲ್‌ಡಿ ಮುಖ್ಯಸ್ಥ ಜಯಂತ್ ಚೌಧರಿ ಕುರಿತು ಮೃದು ಧೋರಣೆ ಪ್ರದರ್ಶಿಸಿದ ಅಮಿತ್ ಶಾ, ಆರ್‌ಎಲ್‌ಡಿ ಪಾಲಿಗೆ ಬಿಜೆಪಿ ಸದಾ ತೆರೆದ ಮನೆ ಆಗಿರುತ್ತದೆ. ಜಯಂತ್ ಚೌಧರಿ ಯಾವಾಗ ಬೇಕಿದ್ದರೂ ಭಾರತೀಯ ಜನತಾ ಪಕ್ಷವನ್ನು ಸೇರಿಕೊಳ್ಳಬಹುದು ಎಂದಿದ್ದರು.
ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಫಲಿತಾಂಶ ಹೊರ ಬೀಳುವವರೆಗೂ ಮಾತ್ರ ಅಖಿಲೇಶ್ ಯಾದವ್ ಮತ್ತು ಜಯಂತ್ ಚೌಧರಿ ಒಂದಾಗಿರುತ್ತಾರೆ. ಫಲಿತಾಂಶದ ನಂತರದಲ್ಲಿ ಒಂದು ವೇಳೆ ಸಮಾಜವಾದಿ ಪಕ್ಷಕ್ಕೆ ಅಧಿಕಾರ ಸಿಕ್ಕರೆ, ಅಜಂ ಖಾನ್ ಸಂಪುಟವನ್ನು ಸೇರುತ್ತಾರೆ. ಈಗ ಅಖಿಲೇಶ್ ಜೊತೆಗೆ ಗುರುತಿಸಿಕೊಂಡಿರುವ ಜಯಂತ್ ಚೌಧರಿ ಸರ್ಕಾರದಿಂದ ಹೊರಗುಳಿಯುತ್ತಾರೆ ಎಂದು ಅಮಿತ್ ಶಾ ಆರೋಪಿಸಿದ್ದರು.

ಏಳು ಹಂತಗಳಲ್ಲಿ ನಡೆಯಲಿರುವ ಯುಪಿ ಚುನಾವಣೆ
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, ಫೆಬ್ರವರಿ 14, ಫೆಬ್ರವರಿ 20, ಫೆಬ್ರವರಿ 23, ಫೆಬ್ರವರಿ 27, ಮಾರ್ಚ್ 3 ಮತ್ತು ಮಾರ್ಚ್ 7ರಂದು ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಅಂತಿಮವಾಗಿ ಮಾರ್ಚ್ 10ರಂದು ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ, ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ, ಕಾಂಗ್ರೆಸ್ ಮತ್ತು ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷದ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತಿದೆ.
ಈ ಹಿಂದೆ 2017ರಲ್ಲಿ ಉತ್ತರ ಪ್ರದೇಶದಲ್ಲಿ 403 ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅತಿಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆ ಏರಿತ್ತು. ಒಟ್ಟು 403 ಕ್ಷೇತ್ರಗಳ ಪೈಕಿ ಬಿಜೆಪಿ 312 ಸ್ಥಾನಗಳನ್ನು ಗೆದ್ದಿತ್ತು. ಸಮಾಜವಾದಿ ಪಕ್ಷ 47 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಬಹುಜನ ಸಮಾಜವಾದಿ ಪಕ್ಷವು 19 ಕ್ಷೇತ್ರಗಳಲ್ಲಿ ಗೆಲುವಿನ ಬಾವುಟ ಹಾರಿಸಿತ್ತು. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದ್ದು, ಕೇವಲ ಏಳು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು.












Click it and Unblock the Notifications