ಯುಪಿ ಚುನಾವಣೆ: ಬಿಎಸ್‌ಪಿಯ ಎರಡನೇ ಹಂತದ 51 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಲಕ್ನೋ ಜನವರಿ 22: ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಇಂದು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಎರಡನೇ ಹಂತದ 51 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.
"ಇಂದು ನಾನು ಉತ್ತರ ಪ್ರದೇಶದ ಎರಡನೇ ಹಂತದ ಚುನಾವಣೆಗೆ 55 ಸ್ಥಾನಗಳಲ್ಲಿ 51 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸುತ್ತಿದ್ದೇನೆ. ಈ ಬಾರಿ ನಾವು 'ಪ್ರತಿ ಮತಗಟ್ಟೆಯಲ್ಲಿ ಗೆಲ್ಲಬೇಕು, ಬಿಎಸ್‌ಪಿಯನ್ನು ಅಧಿಕಾರಕ್ಕೆ ತರಬೇಕು' ಎಂಬ ಘೋಷಣೆಯನ್ನು ನೀಡಿದ್ದೇವೆ. ಪಕ್ಷದ ಕಾರ್ಯಕರ್ತರು ಕಷ್ಟಪಟ್ಟು ಕೆಲಸ ಮಾಡುತ್ತಾರೆಂದು ನಾನು ಭಾವಿಸುತ್ತೇನೆ ಮತ್ತು 2007 ರಂತೆಯೇ ಬಿಎಸ್ಪಿ ಸರ್ಕಾರವನ್ನು ರಚಿಸುತ್ತಾರೆ. ಉಳಿದ 4 ಅಭ್ಯರ್ಥಿಗಳ ಹೆಸರನ್ನು ಕೂಡ ಶೀಘ್ರದಲ್ಲೇ ಪ್ರಕಟಿಸಲಾಗುವುದು. COVID-19 ಪ್ರೋಟೋಕಾಲ್‌ಗಳನ್ನು ಅನುಸರಿಸಿ ನಾವು ಕಾರ್ಯಕರ್ತರನ್ನು ಪ್ರಚಾರ ಮಾಡಲು ಹೇಳಿದ್ದೇವೆ. ಕೊರೊನಾ ಸಮಯದಲ್ಲೂ ಕಾರ್ಯಕರ್ತರು ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲು ಕೆಲಸ ಮಾಡುತ್ತಾರೆ ಎಂದು ನಾನು ಪ್ರಾಮಾಣಿಕವಾಗಿ ಭಾವಿಸುತ್ತೇನೆ" ಎಂದು ಮಾಯಾವತಿ ಹೇಳಿದರು.
ಯಾವ ಕ್ಷೇತ್ರ? ಯಾರಿಗೆ ಟಿಕೆಟ್?
ಮಾಯಾವತಿ ಅವರು ಸಹರ್‌ಪುರ ಜಿಲ್ಲೆಯ ಬೆಹತ್ ಕ್ಷೇತ್ರದಿಂದ ರಯೀಸ್ ಮಲಿಕ್ ಹಾಗೂ ನಕುದ್ ಕ್ಷೇತ್ರದಿಂದ ಸಾಹಿಲ್ ಖಾನ್ ಅವರಿಗೆ ಟಿಕೆಟ್ ನೀಡಿದ್ದಾರೆ. ಸಹರಾನ್‌ಪುರದಿಂದ ಅಜಬ್ ಸಿಂಗ್ ಮತ್ತು ಸಹರಾನ್‌ಪುರ ನಗರದಿಂದ ಮನೀಶ್ ಅರೋರಾ ಅಭ್ಯರ್ಥಿಯಾಗಲಿದ್ದಾರೆ. ದೇವಬಂದ್‌ನಿಂದ ಚೌಧರಿ ರಾಜೇಂದ್ರ ಸಿಂಗ್ ಅಭ್ಯರ್ಥಿಯಾಗಲಿದ್ದಾರೆ. ರಾಂಪುರ ಮಣಿಹರನ್‌ನಿಂದ ರವೀಂದ್ರ ಕುಮಾರ್ ಗೋಲ್ಡು ನಾಮನಿರ್ದೇಶನಗೊಂಡಿದ್ದಾರೆ. ಶಾನವಾಜ್ ಆಲಂ ಅವರು ನಜೀಬಾಬಾದ್‌ನಿಂದ ಟಿಕೆಟ್ ಪಡೆದಿದ್ದಾರೆ.

ಬಿಜ್ನೋರ್ ಜಿಲ್ಲೆಯ ನಜಿಬಾಬಾದ್ ಕ್ಷೇತ್ರದಿಂದ ಶಾನವಾಜ್ ಆಲಂ, ನಗೀನಾದಿಂದ ಬ್ರಜ್ಪಾಲ್ ಸಿಂಗ್, ಬಾದಾಪುರದಿಂದ ಮೊಹಮ್ಮದ್ ಘಾಜಿ, ಧಾಂಪುರ್‌ನಿಂದ ಕಮಲ್ ಅಹ್ಮದ್, ನಹ್ತೌರ್ ಕ್ಷೇತ್ರದಿಂದ ಶ್ರೀಮತಿ ಪ್ರಿಯಾ ಸಿಂಗ್, ಬಿಜ್ನೋರ್‌ನಿಂದ ಶ್ರೀಮತಿ ರುಚಿವೀರಾ, ಚಂದ್‌ಪುರದಿಂದ ಡಾ. ಶಕೀಲ್ ಹಶ್ಮಿ ಮತ್ತು ನೂರ್‌ಪುರ್‌ನಿಂದ ಹಾಜಿ ಜಿಯಾವುದ್ದೀನ್ ಅನ್ಸಾರಿ ಘೋಷಿಸಲಾಗಿದೆ.
53 ಅಭ್ಯರ್ಥಿಗಳ ಮೊದಲ ಪಟ್ಟಿ
ಇದಕ್ಕೂ ಮುನ್ನ ಜನವರಿ 15 ರಂದು ಮಾಯಾವತಿ ಮೊದಲ ಹಂತದ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದ್ದರು. 53 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು (ಜನವರಿ 15) ಶನಿವಾರ ಬಿಡುಗಡೆ ಮಾಡಿದೆ. ಫೆಬ್ರವರಿ 10ರಂದು ಮೊದಲ ಹಂತದಲ್ಲಿ ಮತದಾನ ನಡೆಯಲಿರುವ ಪಶ್ಚಿಮ ಉತ್ತರ ಪ್ರದೇಶದ 58 ವಿಧಾನಸಭಾ ಕ್ಷೇತ್ರಗಳ ಪೈಕಿ 53 ಸ್ಥಾನಗಳಿಗೆ ಪಕ್ಷವು ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ. ಮೊದಲ ಹಂತದ ಯುಪಿ ಚುನಾವಣೆಗೆ ಬುಧವಾರದಂದು ಮಾಯಾವತಿ ಉಳಿದ ಐದು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದರು ಮತ್ತು ಏಳು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಬದಲಾಯಿಸಿದರು.

ಉತ್ತರ ಪ್ರದೇಶದಲ್ಲಿ ಜನರು ಬಿಎಸ್‌ಪಿಯ ಹಿಂದಿನ ಸಾಧನೆಯ ಆಧಾರದ ಮೇಲೆ ಮತ ಚಲಾಯಿಸಿ ಅಧಿಕಾರಕ್ಕೆ ತರುತ್ತಾರೆ. ಈ ಬಾರಿ ರಾಜ್ಯದಲ್ಲಿ ತಮ್ಮ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಮಾಯಾವತಿ ವಿಶ್ವಾಸ ವ್ಯಕ್ತಪಡಿಸಿದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜನರು ನಮ್ಮ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುತ್ತಾರೆ, ಈ ಬಾರಿ ಅಧಿಕಾರಕ್ಕೆ ಬಂದ ನಂತರ ತನ್ನ ಹಿಂದಿನ ಆಡಳಿತದಂತೆಯೇ ಎಲ್ಲಾ ವಿಷಯಗಳಲ್ಲಿ ಸರ್ಕಾರವನ್ನು ಮುನ್ನೆಡೆಸುವ ಬಗ್ಗೆ ಭರವಸೆ ನೀಡಲು ಬಯಸುತ್ತೇನೆ ಎಂದು ಮಾಯಾವತಿ ಹೇಳಿದ್ದಾರೆ.
ಉತ್ತರ ಪ್ರದೇಶದ 403 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 10 ರಿಂದ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 11 ಜಿಲ್ಲೆಗಳಲ್ಲಿ ಒಟ್ಟು 58 ವಿಧಾನಸಭಾ ಸ್ಥಾನಗಳಿಗೆ ಫೆಬ್ರವರಿ 10 ರಂದು ಮೊದಲ ಹಂತದಲ್ಲಿ ಮತದಾನ ನಡೆಯಲಿದೆ. ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23, 27 ಮತ್ತು ಮಾರ್ಚ್ 3 ಮತ್ತು 7 ರಂದು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.












Click it and Unblock the Notifications