ಮೀರತ್ ಸ್ಥಳೀಯ ಕ್ರೀಡಾ ಪ್ರತಿಭೆಗಳನ್ನು ಜಾಗತಿಕವಾಗಿಸುತ್ತದೆ: ಪ್ರಧಾನಿ ಮೋದಿ
ಮೀರತ್ ಜನವರಿ 02: ಈ ಹಿಂದೆ ಮೀರತ್‌ನಲ್ಲಿ ಕ್ರೈಂ ಪಂದ್ಯಾವಳಿಗಳು ನಡೆಯುತ್ತಿದ್ದವು. ಇಂದು ಕ್ರೀಡೆಗಳಿಗೆ ಪ್ರೋತ್ಸಾಹಿಸಲಾಗುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮೀರತ್‌ನ ಧ್ಯಾನ್‌ಚಂದ್ ಕ್ರೀಡಾ ವಿಶ್ವವಿದ್ಯಾಲಯಕ್ಕೆ ಶಂಕುಸ್ಥಾಪನೆ ನೆರವೇರಿಸಿ ಹೇಳಿದರು. ಮುಂಬರುವ ವಿಧಾನಸಭಾ ಚುನಾವಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದಲ್ಲಿ ಬಿರುಸಿನ ಪ್ರವಾಸ ಮಾಡುತ್ತಿದ್ದಾರೆ. ಇಂದು ಪ್ರಧಾನಿ ಮೋದಿ ಮೀರತ್‌ನಲ್ಲಿ 700 ಕೋಟಿ ವೆಚ್ಚದಲ್ಲಿ ನಿರ್ಮಿಸಲಿರುವ ಮೇಜರ್ ಧ್ಯಾನ್ ಚಂದ್ ಕ್ರೀಡಾ ವಿಶ್ವವಿದ್ಯಾಲಯಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಭಾರತದ ಇತಿಹಾಸದಲ್ಲಿ ಮೀರತ್ ಒಂದು ನಗರವಲ್ಲ, ಇದು ನಮ್ಮ ಸಂಸ್ಕೃತಿ ಮತ್ತು ನಮ್ಮ ಸಾಮರ್ಥ್ಯದ ಪ್ರಮುಖ ಕೇಂದ್ರವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಸಿಂಧೂ ಕಣಿವೆ ನಾಗರಿಕತೆಯಿಂದ ದೇಶದ ಮೊದಲ ಸ್ವಾತಂತ್ರ್ಯ ಹೋರಾಟದವರೆಗೆ, ಈ ಪ್ರದೇಶವು ಭಾರತದ ಸಾಮರ್ಥ್ಯ ಏನೆಂದು ಜಗತ್ತಿಗೆ ತೋರಿಸಿದೆ. ಇದೀಗ ಕ್ರಾಂತಿಕಾರಿಗಳ ನಗರಿ ಕ್ರೀಡಾ ವೀರರ ನಗರಿ ಎಂಬ ಹೊಸ ಗುರುತನ್ನು ಸ್ಥಾಪಿಸಲಿದೆ ಎಂದರು.

ಪ್ರಧಾನಿ ಮೋದಿಯವರ ತಾಲೀಮು
ಸರ್ಧಾನದಲ್ಲಿರುವ ಮೇಜರ್ ಧ್ಯಾನ್ ಚಂದ್ ಖೇಲ್ ವಿಶ್ವವಿದ್ಯಾನಿಲಯದ ಆವರಣದಲ್ಲಿ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಬರಮಾಡಿಕೊಂಡರು. ಸ್ಥಳದಲ್ಲಿ ಆಟಗಾರರೊಂದಿಗೆ ಸಂವಾದ ನಡೆಸಿದ ನಂತರ, ಮೀರತ್‌ನಲ್ಲಿ ತಯಾರಾಗುತ್ತಿರುವ ವಿವಿಧ ಕ್ರೀಡಾ ಉತ್ಪನ್ನಗಳ ಪ್ರದರ್ಶನಕ್ಕೆ ಪ್ರಧಾನಿ ಭೇಟಿ ನೀಡಿದರು. ಈ ಸಮಯದಲ್ಲಿ, ಪ್ರಧಾನಮಂತ್ರಿಯವರು ಕ್ರೀಡಾ ಕಂಪನಿಗಳ ಪ್ರತಿಯೊಂದು ಸ್ಟಾಲ್‌ಗೆ ಭೇಟಿ ನೀಡಿದರು ಮತ್ತು ಕ್ರೀಡಾ ಉತ್ಪನ್ನಗಳನ್ನು ಹತ್ತಿರದಿಂದ ವೀಕ್ಷಿಸಿದರು. ಜೊತೆಗೆ ಮೋದಿ ಕೂಡ ಸ್ಟಾಲ್‌ನಲ್ಲಿ ವ್ಯಾಯಾಮ ಮಾಡಿದರು.

ಮೀರತ್‌ನಲ್ಲಿ ಹಿಂದೆ ಅಪರಾಧದ ಪಂದ್ಯಾವಳಿಗಳಿದ್ದವು
ಸಮಾಜವಾದಿ ಪಕ್ಷ ಮತ್ತು ಬಿಎಸ್‌ಪಿಯನ್ನು ಗುರಿಯಾಗಿಸಿ ಮಾತನಾಡಿದ ಪ್ರಧಾನಿ, ಹಿಂದಿನ ಅಪರಾಧಿಗಳು ಇಲ್ಲಿ ತಮ್ಮ ಆಟವನ್ನು ಆಡುತ್ತಿದ್ದರು. ಮೊದಲು ಇಲ್ಲಿ ಅಪರಾಧ ಪಂದ್ಯಾವಳಿಗಳು ನಡೆಯುತ್ತಿದ್ದವು. ಮೀರತ್ ಮತ್ತು ಸುತ್ತಮುತ್ತಲಿನ ಜನರು ತಮ್ಮ ಮನೆಗಳನ್ನು ಸುಟ್ಟುಹಾಕಿರುವುದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಹಿಂದಿನ ಸರ್ಕಾರಗಳು ತಮ್ಮದೇ ಆಟದಲ್ಲಿ ತೊಡಗಿದ್ದವು. ಈ ಹಿಂದೆ ಯಾವ ಆಟಗಳನ್ನು ಆಡಿದ್ದೀರೋ, ಈಗ ಯೋಗಿ ಸರ್ಕಾರ ಅಂತಹ ಅಪರಾಧಿಗಳಿಗೆ ಜೈಲಿಗೆ ಕಳಿಸುವ ಆಟ ಆಡುತ್ತಿದೆ ಎಂದರು.

700 ಕೋಟಿ ವೆಚ್ಚದ ಕ್ರೀಡಾಂಗಣ
ಸರ್ಧಾನ ತಹಸಿಲ್‌ನ ಸಾಲ್ವಾದಲ್ಲಿ ಗಂಗಾನದಿ ಕಾಲುವೆಯ ದಡದಲ್ಲಿ 91.38 ಎಕರೆಯಲ್ಲಿ 700 ಕೋಟಿ ವೆಚ್ಚದಲ್ಲಿ ಕ್ರೀಡಾ ವಿಶ್ವವಿದ್ಯಾಲಯವನ್ನು ನಿರ್ಮಿಸಲಾಗುವುದು. ಕ್ರೀಡಾ ವಿಶ್ವವಿದ್ಯಾಲಯದ ಶಂಕುಸ್ಥಾಪನೆ ಸಮಾರಂಭಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಈ ಕಾರ್ಯಕ್ರಮದಲ್ಲಿ ರಾಜ್ಯದ 75 ಜಿಲ್ಲೆಗಳಿಂದ 16 ಸಾವಿರದ 850 ಆಟಗಾರರನ್ನು ಕರೆಸಲಾಗಿದೆ. ಅವರ ಕುಳಿತುಕೊಳ್ಳುವ ಜಾಗಕ್ಕೆ ಕ್ರೀಡಾಂಗಣದ ರೂಪ ನೀಡಲಾಗಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಜ್ಯಪಾಲ ಆನಂದಿ ಬೆನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಸೇರಿದಂತೆ ಮುಜಾಫರ್‌ನಗರ ಮತ್ತು ಮೀರತ್ ಸಂಸದರು, ಶಾಸಕರು ಮತ್ತು ಫಲಾನುಭವಿಗಳು ಮತ್ತು ಸಮೀಪದ ಜಿಲ್ಲೆಗಳ ಸಾಮಾನ್ಯ ಜನರು ಭಾಗವಹಿಸಿದ್ದಾರೆ.

ವಿಧಾನಸಭಾ ಚುನಾವಣೆ
ಮುಂದಿನ ವರ್ಷದ ದೇಶದ ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ ಮತ್ತು ಮಣಿಪುರದಲ್ಲಿ ಚುನಾವಣೆ ನಡೆಯಲಿದೆ. 2022ರ ನಂತರದಲ್ಲಿ ಹಿಮಾಚಲ ಪ್ರದೇಶ ಮತ್ತು ಗುಜರಾತಿನಲ್ಲಿ ಚುನಾವಣೆಗಳು ನಡೆಯಲಿವೆ. ಕಳೆದ 2017ರಲ್ಲಿ ಉತ್ತರ ಪ್ರದೇಶದಲ್ಲಿ 403 ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅತಿಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆ ಏರಿತ್ತು. ಒಟ್ಟು 403 ಕ್ಷೇತ್ರಗಳ ಪೈಕಿ ಬಿಜೆಪಿ 312 ಸ್ಥಾನಗಳನ್ನು ಗೆದ್ದಿತ್ತು. ಸಮಾಜವಾದಿ ಪಕ್ಷ 47 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಬಹುಜನ ಸಮಾಜವಾದಿ ಪಕ್ಷವು 19 ಕ್ಷೇತ್ರಗಳಲ್ಲಿ ಗೆಲುವಿನ ಬಾವುಟ ಹಾರಿಸಿತ್ತು.












Click it and Unblock the Notifications