ಮತದಾರಿರಗೆ ಪರೋಕ್ಷ ಸಂದೇಶ ರವಾನಿಸಿತಾ ಮಯಾಂಕ್-ಅಖಿಲೇಶ್ ಭೇಟಿ?
ಲಕ್ನೋ, ಫೆಬ್ರವರಿ 23: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಸಮಯದಲ್ಲಿ ಬಿಜೆಪಿ ಸಂಸದೆ ರೀಟಾ ಬಹುಗುಣ ಜೋಶಿ ಪುತ್ರ ಮಯಾಂಕ್ ಜೋಶಿ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ನಡುವಿನ ಭೇಟಿ ಸಾಕಷ್ಟು ಊಹಾಪೋಹಗಳನ್ನು ಹುಟ್ಟು ಹಾಕಿದೆ.
ಮಂಗಳವಾರ ಸಮಾಜವಾದಿ ಪಕ್ಷದ ಕಚೇರಿಗೆ ಮಯಾಂಕ್ ಜೋಶಿ ಭೇಟಿ ನೀಡಿರುವುದರ ಬಗ್ಗೆ ಸ್ವತಃ ಅಖಿಲೇಶ್ ಯಾದವ್ ಟ್ವೀಟ್ ಮಾಡಿಕೊಂಡಿದ್ದಾರೆ. ಇದೇ ಮಯಾಂಕ್ ಜೋಶಿ ಲಕ್ನೋ ಕಂಟೋನ್ಮೆಂಟ್ ವಿಧಾನಸಭೆ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿದ್ದರು.
Assembly Elections 2022 Voting Live: ಉತ್ತರಪ್ರದೇಶದಲ್ಲಿ ಮಧ್ಯಾಹ್ನ 1 ಗಂಟೆ ವೇಳೆಗೆ ಶೇ.37.45ರಷ್ಟು ಮತದಾನ
ರಾಜ್ಯದಲ್ಲಿ ನಾಲ್ಕನೇ ಹಂತದ ಮತದಾನ ಪ್ರಕ್ರಿಯೆ ಆರಂಭವಾಗುವುದಕ್ಕೂ ಕೆಲವು ಗಂಟೆಗಳು ಬಾಕಿ ಇರುವಂತೆ ಉಭಯ ನಾಯಕರ ಭೇಟಿ ಸಾಕಷ್ಟು ಅನುಮಾನಗಳನ್ನು ಹುಟ್ಟು ಹಾಕುತ್ತಿದೆ. ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆ ಸಮಾಜವಾದಿ ಪಕ್ಷದ ಪರವಾಗಿ ಮಯಾಂಕ್ ಜೋಶಿ ವಾಲಿದರೇ ಎನ್ನುವ ಬಗ್ಗೆ ಅನುಮಾನಗಳು ಹುಟ್ಟಿಕೊಳ್ಳುತ್ತಿವೆ.

ಬುಧವಾರ ನಾಲ್ಕನೇ ಹಂತದ ಮತದಾನ:
ಉತ್ತರ ಪ್ರದೇಶದಲ್ಲಿ ನಾಲ್ಕನೇ ಹಂತದ ಚುನಾವಣೆಗೆ ಬುಧವಾರ ಮತದಾನ ನಡೆಯುತ್ತಿದೆ. ಈ ಹಂತದಲ್ಲಿ ಪಿಲಿಭಿತ್, ಲಖಿಂಪುರ ಖೇರಿ, ಸೀತಾಪುರ್, ಹರ್ದೋಯ್, ಉನ್ನಾವೋ, ಲಕ್ನೋ, ರಾಯ್ ಬರೇಲಿ, ಬಂದಾ ಮತ್ತು ಫತೇಪುರ್ ಜಿಲ್ಲೆಗಳ 59 ವಿಧಾನಸಭಾ ಕ್ಷೇತ್ರಗಳಲ್ಲಿ 624 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಸವಯಜ್‌ಪುರ ವಿಧಾನಸಭಾ ಸ್ಥಾನಕ್ಕೆ 15 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದರೆ, ಕನಿಷ್ಠ ಆರು ಅಭ್ಯರ್ಥಿಗಳು ಪಾಲಿಯಾ ಕಲಾನ್ ಮತ್ತು ಸೇವಾತಾ ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧಿಸುತ್ತಿದ್ದಾರೆ. ಈ ಹಂತದಲ್ಲಿಯೇ ಲಕ್ನೋ ಕಂಟೋನ್ಮೆಂಟ್ ಕ್ಷೇತ್ರದಲ್ಲೂ ಮತದಾನ ನಡೆಯಲಿದೆ.
ಬ್ರಾಹ್ಮಣರ ಮತ ಸೆಳೆಯಲು ರಣತಂತ್ರ:
ಲಕ್ನೋ ಕಂಟೋನ್ಮೆಂಟ್ ಕ್ಷೇತ್ರದ ಚುನಾವಣೆ ಬುಧವಾರವೇ ನಡೆಯಲಿದ್ದು, ಇದರ ಮಧ್ಯೆದಲ್ಲೇ ಇಬ್ಬರು ನಾಯಕರ ಭೇಟಿಯು ಮತದಾರರಿಗೆ ಪರೋಕ್ಷ ಸಂದೇಶವನ್ನು ರವಾನಿಸಿದಂತೆ ವಿಶ್ಲೇಷಿಸಲಾಗುತ್ತಿದೆ. ರಾಜ್ಯದಲ್ಲಿ ಈಗಾಗಲೇ ಬಿಜೆಪಿ ವಿರುದ್ಧ ಕೆರಳಿರುವ ಬ್ರಾಹ್ಮಣ ಸಮುದಾಯವನ್ನು ಸಮಾಜವಾದಿ ಪಕ್ಷದ ಕಡೆಗೆ ತಿರುಗಿಸಿಕೊಳ್ಳಲು ಸ್ವತಃ ಅಖಿಲೇಶ್ ಯಾದವ್ ಈ ರೀತಿಯ ಫೋಟೋವನ್ನು ಹಂಚಿಕೊಂಡಿದ್ದಾರೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ.
ಮಯಾಂಕ್ ಜೋಶಿಗೆ ಬಿಜೆಪಿ ಟಿಕೆಟ್ ನಿರಾಕರಣೆ:
ಮಯಾಂಕ್ ಜೋಶಿ ಹೇಳಿ-ಕೇಳಿ ಹಾಲಿ ಸಂಸದೆ ರೀಟಾ ಬಹುಗುಣ ಜೋಶಿ ಪುತ್ರ. ಉತ್ತರ ಪ್ರದೇಶ ಅಲಹಾಬಾದ್ ಲೋಕಸಭೆ ಕ್ಷೇತ್ರದ ಸಂಸದೆ ಆಗಿರುವ ರೀಟಾ, 2017ರ ವಿಧಾನಸಭೆ ಚುನಾವಣೆಯಲ್ಲಿ ಲಕ್ನೋ ಕಂಟೋನ್ಮೆಂಟ್ ಕ್ಷೇತ್ರದಿಂದಲೇ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಸಂಸದರಾಗಿ ಆಯ್ಕೆಯಾದ ಬಳಿಕ ಲಕ್ನೋ ಕಂಟೋನ್ಮೆಂಟ್ ಕ್ಷೇತ್ರದ ಶಾಸಕರಾಗಿ ಬಿಜೆಪಿಯ ಸುರೇಶ್ ತಿವಾರಿ ಆಯ್ಕೆಯಾದರು. ಆದರೆ 2022ರ ವಿಧಾನಸಭೆ ಚುನಾವಣೆಯಲ್ಲಿ ಲಕ್ನೋ ಕಂಟೋನ್ಮೆಂಟ್ ಕ್ಷೇತ್ರದಿಂದ ತಮ್ಮ ಪುತ್ರ ಮಯಾಂಕ್ ಬಹುಗುಣ ಜೋಶಿ, ತಮ್ಮ ಪುತ್ರ ಮಯಾಂಕ್ ಜೋಶಿಗೆ ಟಿಕೆಟ್ ನೀಡುವಂತೆ ಪಟ್ಟು ಹಿಡಿದು ಸುದ್ದಿ ಆಗಿದ್ದರು. ತಮ್ಮ ಪುತ್ರನಿಗೆ ಟಿಕೆಟ್ ನೀಡದಿದ್ದರೆ ಸಂಸದರ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸುವುದಾಗಿ ಎಚ್ಚರಿಕೆ ನೀಡಿದ್ದರು. ಅದಾಗ್ಯೂ, ಸಂಸದರ ಎಚ್ಚರಿಕೆಗೆ ಮಣಿಯದ ಬಿಜೆಪಿ ಬ್ರಿಜೇಶ್ ಪಠಾಕ್ ಅವರನ್ನು ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ.












Click it and Unblock the Notifications