ಬಸ್-ಗ್ಯಾಸ್ ಟ್ಯಾಂಕರ್ ಡಿಕ್ಕಿ; ಏಳು ಮಂದಿ ದುರ್ಮರಣ
ಲಕ್ನೊ, ಡಿಸೆಂಬರ್ 16: ಗ್ಯಾಸ್ ಟ್ಯಾಂಕರ್ ಗೆ ಬಸ್ ಡಿಕ್ಕಿ ಹೊಡೆದು ಏಳು ಮಂದಿ ಮೃತಪಟ್ಟು 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಬುಧವಾರ ಬೆಳಿಗ್ಗೆ ಉತ್ತರ ಪ್ರದೇಶದ ಸಾಂಬಾಲ್ ಎಂಬಲ್ಲಿ ನಡೆದಿದೆ.
ಉತ್ತರ ಪ್ರದೇಶದಲ್ಲಿ ಬೆಳ್ಳಂಬೆಳಿಗ್ಗೆ ಅಧಿಕ ಮಂಜು ಆವರಿಸಿದ್ದು, ರಸ್ತೆಯಲ್ಲಿ ವಾಹನಗಳು ಗೋಚರಿಸದೇ ಗ್ಯಾಸ್ ಟ್ಯಾಂಕರ್ ಗೆ ಎದುರಿನಿಂದ ಬರುತ್ತಿದ್ದ ಆಲಿಘಾರ್ ಮೂಲದ ಬಸ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿರುವುದಾಗಿ ತಿಳಿದುಬಂದಿದೆ. ಧನಾರಿ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಆಗ್ರಾ -ಮೊರಾದಾಬಾದ್ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಏಳು ಮಂದಿ ಸಾವನ್ನಪ್ಪಿದ್ದು, 25ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಏರುವ ಸಾಧ್ಯತೆಯಿದೆ ಎಂದು ಎಸ್ಪಿ ಚಕ್ರೇಶ್ ಮಿಶ್ರಾ ಮಾಹಿತಿ ನೀಡಿದ್ದಾರೆ.

ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವನ್ನಪ್ಪಿದವರ ಗುರುತು ಇನ್ನೂ ಪತ್ತೆಯಾಗಿಲ್ಲ. ಪೊಲೀಸ್ ಹಾಗೂ ಜಿಲ್ಲಾಡಳಿತ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದೆ.












Click it and Unblock the Notifications