ಮಾಯಾವತಿ-ಅಖಿಲೇಶ್ ಸೇರಿಗೆ ಕಾಂಗ್ರೆಸ್ ಸವ್ವಾ ಸೇರು!
ಲಕ್ನೋ, ಜನವರಿ 05: ಲೋಕಸಭಾ ಚುನಾವಣೆಯಲ್ಲಿ 80 ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಅನ್ನು ದೂರವಿಟ್ಟು ಚುನಾವಣೆ ಎದುರಿಸಲು ಸಿದ್ಧವಾಗಿರುವ ಎಸ್ಪಿ ಮತ್ತು ಬಿಎಸ್ಪಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ.
"ಒಂಟಿಯಾಗಿ ಚುನಾವಣೆ ಎದುರಿಸಲು ಸಿದ್ಧ. ನಮಗೆ ಮೈತ್ರಿಕೂಟದ ಅಗತ್ಯವಿಲ್ಲ. ನಾವು ಮೈತ್ರಿ ಬಗ್ಗೆ ಯಾರೊಂದಿಗೂ ಚರ್ಚೆ ನಡೆಸುವುದೂ ಇಲ್ಲ" ಎಂದು ಕಾಂಗ್ರೆಸ್ ಮುಖಂಡ, ರಾಜ್ಯ ಸಭಾ ಸದಸ್ಯ ಪಿಎಲ್ ಪುನಿಯಾ ಹೇಳಿದ್ದಾರೆ.
ಶುಕ್ರವಾರ ದೆಹಲಿಯಲ್ಲಿ ಬಹುಜನ ಸಮಾಜವಾದಿ ಪಕ್ಷದ ನಾಯಕಿ ಮಾಯಾವತಿ ಮತ್ತು ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಭೇಟಿಯಾಗಿ, ಸಭೆ ನಡೆಸಿದ್ದರು. ಲೋಕಸಭಾ ಚುನಾವಣೆಯಲ್ಲಿ ಬಹುಮುಖ್ಯ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಅನ್ನು ದೂರವಿಟ್ಟು ಎಸ್ಪಿ ಮತ್ತು ಬಿಎಸ್ಪಿ ಒಟ್ಟಾಗಿ ಕಣಕ್ಕಿಳಿಯುವುದಾಗಿ ನಿರ್ಧರಿಸಿದ್ದರು.

ಮಧ್ಯಪ್ರದೇಶದಲ್ಲಿ ಸರ್ಕಾರ ರಚಿಸಲು ಕಾಂಗ್ರೆಸ್ಸಿಗೆ ಬೆಂಬಲ ನೀಡಿದರೂ ಎಸ್ಪಿ ಶಾಸಕನಿಗೆ ಮಂತ್ರಿ ಸ್ಥಾನ ನೀಡಿಲ್ಲ ಎಂಬ ಮುನಿಸು ಅಖಿಲೇಶ್ ಅವರಲ್ಲಿದೆ. ಅಲ್ಲದೆ ರಾಜಸ್ಥಾನ, ಮಧ್ಯಪ್ರದೇಶಗಳ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸೀಟು ಹಂಚಿಕೆಯ ಸಮಯದಲ್ಲಾದ ಗೊಂದಲದಿಂದಾಗಿ ಮಾಯಾವತಿ ಕಾಂಗ್ರೆಸ್ ಅನ್ನು ಹೊರಗಿಟ್ಟೇ ಚುನಾವಣೆ ಎದುರಿಸಿದ್ದರು.
ಆದರೆ ಚುನಾವಣೆಯ ನಂತರ ಕಾಂಗ್ರೆಸ್ ಕೇಳದಿದ್ದರೂ ತಾವಾಗಿಯೇ ಬೆಂಬಲ ನೀಡಿ ಅಚ್ಚರಿ ಮೂಡಿಸಿದ್ದರು. ಇದೀಗ ಮತ್ತೆ ಕಾಂಗ್ರೆಸ್ ಅನ್ನು ದೂರವಿಡುತ್ತಿರುವ ಮಾಯಾವತಿ ನಡೆ ನಿಗೂಢವಾಗಿದೆ. ಆದರೆ ನಮಗೆ ಯಾರ ಬೆಂಬಲದ ಅಗತ್ಯವೂ ಇಲ್ಲ ಎದು ಕಾಂಗ್ರೆಸ್ ಸ್ಪಷ್ಟ ತಿರುಗೇಟು ನೀಡಿದೆ.












Click it and Unblock the Notifications