Apple ಸೇಲ್ಸ್ ಮ್ಯಾನೇಜರ್ ನನ್ನು ಕೊಂದ ಪೊಲೀಸ್ ಪೇದೆ
ಲಕ್ನೋ, ಸೆಪ್ಟೆಂಬರ್ 29: ಪೊಲೀಸ್ ಕಾನ್ ಸ್ಟೇಬಲ್ ವೊಬ್ಬ Apple ಸೇಲ್ಸ್ ಮ್ಯಾನೇಜರ್ ನನ್ನು ಗುಂಡಿಕ್ಕಿ ಕೊಂದ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ಇಂದು(ಸೆ.29) ನಡೆದಿದೆ.
Apple ಸೇಲ್ಸ್ ಎಕ್ಸಿಕ್ಯೂಟಿವ್ ವಿವೇಕ್ ತಿವಾರಿ ಎಂಬುವವರನ್ನು ಪೊಲೀಸ್ ಕಾನ್ ಸ್ಟೇಬಲ್ ವೊಬ್ಬರು ರಸ್ತೆಯಲ್ಲಿ ತಡೆಯಲು ಪ್ರಯತ್ನಿಸಿದ್ದರು. ಆದರೆ ವಿವೇಕ್ ತಾವು ಚಲಾಯಿಸುತ್ತಿದ್ದ ವಾಹನವನ್ನು ನಿಲ್ಲಿಸದ ಕಾರಣ ಕೋಪಗೊಂಡ ಪೇದೆ ಗುಂಡು ಹಾರಿಸಿದ್ದು, ಅದು ವಿವೇಕ್ ಅವರ ಕತ್ತಿಗೆ ತಾಕಿ ಅವರು ಸಾವನ್ನಪ್ಪಿದ್ದರು. ಜೊತೆಗೆ ವಿವೇಕ್ ಅವರೊಂದಿಗಿದ್ದ ಅವರ ಸ್ನೇಹಿತೆಗೂ ಸಣ್ಣ ಪುಟ್ಟ ಗಾಯಗಳಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಗೆ ಸಂಬಂಧಿಸಿದಂತೆ ತಿವಾರಿ ಅವರನ್ನು ಕೊಂದ ಆರೋಪದ ಮೇಲೆ ಪೊಲೀಸ್ ಪೇದೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Apple iPhone X plus ಅನ್ನು ಆಗಷ್ಟೇ ಲಾಂಚ್ ಮಾಡಿ ಬೆಳಗ್ಗಿನ ಜಾವ 1:30 ರ ಸುಮಾರಿಗೆ ತಮ್ಮ ಸ್ನೇಹಿತೆ ಸನಾ ಖಾನ್ ಅವರೊಂದಿಗೆ ವಿವೇಕ್ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಘಟನೆ ನಡೆದಿದೆ.
ವಿವೇಕ್ ರನ್ನು ಗುಂಡಿಕ್ಕಿ ಸಾಯಿಸಿದ ಪೊಲೀಸ್ ಪೇದೆಯೊಂದಿಗೆ ಇನ್ನೊಬ್ಬ ಪೇದೆಯೂ ಇದ್ದರು ಎನ್ನಲಾಗಿದೆ. ವೈದ್ಯಕೀಯ ಪರೀಕ್ಷೆಯ ನಂತರ ಇಬ್ಬರೂ ಪೊಲಿಸ್ ಪೇದೆಗಳೂ ಮದ್ಯ ಸೇವನೆ ಮಾಡಿದ್ದರು ಎಂಬುದು ದೃಢವಾಗಿದೆ.
'ಇದು ಎನ್ ಕೌಂಟರ್ ಅಲ್ಲ. ಈ ಕುರಿತು ತನಿಖೆ ನಡೆಯುತ್ತಿದೆ. ಅಗತ್ಯವಿದ್ದರೆ ಸಿಬಿಐ ತನಿಖೆಗೂ ಸೂಚಿಸಲಾಗುವುದು' ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.












Click it and Unblock the Notifications