16 ಲಕ್ಷ ಮಹಿಳೆಯರಿಗೆ ಉಪಯುಕ್ತ ಯೋಜನೆಗೆ ಮೋದಿಯಿಂದ ಚಾಲನೆ
ಪ್ರಯಾಗ್ ರಾಜ್, ಡಿಸೆಂಬರ್ 21: ಪ್ರಧಾನಮಂತ್ರಿ ಪ್ರಯಾಗ್ ರಾಜ್‌ಗೆ ಭೇಟಿ ನೀಡಲಿದ್ದು, ಸುಮಾರು 2 ಲಕ್ಷ ಮಹಿಳೆಯರು ಭಾಗವಹಿಸಿಲಿರುವ ಒಂದು ವಿನೂತನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಚುನಾವಣಾ ಹೊಸ್ತಿಲಲ್ಲಿ ಉತ್ತರ ಪ್ರದೇಶದಲ್ಲಿ ಮತ್ತೊಂದು ಬೃಹತ್ ಕಾರ್ಯಕ್ರಮ ಹಾಗೂ ಹಲವು ಯೋಜನೆಗಳಿಗೆ ಚಾಲನೆ ನೀಡುವ ಕಾರ್ಯ ಮುಂದುವರೆಸಿದ್ದಾರೆ.
ಪ್ರಧಾನಮಂತ್ರಿಯವರ ದೂರದೃಷ್ಟಿಯಂತೆ ಮಹಿಳೆಯರನ್ನು ಸಬಲೀಕರಣಗೊಳಿಸಲು ವಿಶೇಷವಾಗಿ ತಳಮಟ್ಟದಲ್ಲಿ ಅವರಿಗೆ ತಕ್ಕ ಅಗತ್ಯ ಕೌಶಲ್ಯ, ಪ್ರೊತ್ಸಾಹ ಮತ್ತು ಸಂಪನ್ಮೂಲಗಳನ್ನು ಒದಗಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮಹಿಳೆಯರನ್ನು ಬೆಂಬಲಿಸುವ ಈ ಪ್ರಯತ್ನದಲ್ಲಿ ಪ್ರಧಾನಮಂತ್ರಿ ಅವರು ಸ್ವಸಹಾಯ ಗುಂಪುಗಳು (ಎಸ್ ಎಚ್ ಜಿ)ಗಳ ಸುಮಾರು 16 ಲಕ್ಷ ಮಹಿಳೆಯರಿಗೆ ಅನುಕೂಲವಾಗುವಂತೆ ಸ್ವ ಸಹಾಯ ಗುಂಪು (ಎಸ್ ಎಚ್ ಜಿ )ಗಳ ಬ್ಯಾಂಕ್ ಖಾತೆಗಳಿಗೆ 1000 ಕೋಟಿ ರೂ.ಗಳನ್ನು ವರ್ಗಾವಣೆ ಮಾಡಲಿದ್ದಾರೆ.
ಈ ವರ್ಗಾವಣೆಯನ್ನು ದೀನ್ ದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (ಡಿಎವೈ-ಎನ್ ಆರ್ ಎಲ್ ಎಂ) ಅಡಿಯಲ್ಲಿ ಮಾಡಲಾಗುವುದು, ಸುಮಾರು 80 ಸಾವಿರ ಎಸ್ ಎಚ್ ಜಿಗಳಿಗೆ ಪ್ರತಿ ಎಸ್ ಎಚ್ ಜಿಗಳಿಗೆ ತಲಾ 1.10 ಲಕ್ಷ ರೂ. ಸಮುದಾಯ ಹೂಡಿಕೆ ನಿಧಿ (ಸಿಐಎಫ್ ) ಮತ್ತು 60,000 ಎಸ್ ಎಚ್ ಜಿಗಳಿಗೆ ತಲಾ 15,000 ರೂ. ಆವರ್ತ ನಿಧಿಯನ್ನು ಸ್ವೀಕರಿಸಲಿವೆ.

ಅಲ್ಲದೆ, ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ, ವ್ಯವಹಾರಿಕ ಪ್ರತಿನಿಧಿ- ಸಖಿ (ಬಿ.ಸಿ- ಸಖಿ)ಗಳನ್ನು ಉತ್ತೇಜಿಸಲು ಸುಮಾರು 20,000 ಬಿ.ಸಿ-ಸಖಿಗಳಿಗೆ ಮೊದಲ ತಿಂಗಳ ಸ್ಟೈಫಂಡ್ ತಲಾ 4,000 ರೂ.ಗಳನ್ನು ವರ್ಗಾವಣೆ ಮಾಡಲಿದ್ದಾರೆ. ಬಿ.ಸಿ ಸಖಿಯರು ತಳಮಟ್ಟದಲ್ಲಿ ಮನೆ ಬಾಗಿಲಿಗೆ ಹಣಕಾಸು ಸೇವೆಗಳನ್ನು ಪೂರೈಕೆದಾರರಾಗಿ ತಮ್ಮ ಕೆಲಸವನ್ನು ಪ್ರಾರಂಭಿಸಿದಾಗ, ಅವರಿಗೆ 4,000 ರೂ. ನೀಡಲಿದೆ. ಇದರಿಂದ ಅವರು ತಮ್ಮ ಕೆಲಸದಲ್ಲಿನ ಸ್ಥಿರತೆಯನ್ನು ಪಡೆಯುತ್ತಾರೆ ಮತ್ತು ನಂತರ ವಹಿವಾಟುಗಳ ಮೇಲೆ ಕಮೀಷನ್ ಗಳಿಸುತ್ತಾರೆ.
ಕಾರ್ಯಕ್ರಮದ ವೇಳೆ ಪ್ರಧಾನಮಂತ್ರಿ, ಮುಖ್ಯಮಂತ್ರಿ ಕನ್ಯಾ ಸುಮಂಗಲಾ ಯೋಜನೆಯಡಿ 1ಲಕ್ಷ ರೂ. ಅಧಿಕ ಫಲಾನುಭವಿಗಳಿಗೆ ಸುಮಾರು 20 ಕೋಟಿ ರೂ.ಗಳನ್ನು ವರ್ಗಾವಣೆ ಮಾಡಲಿದ್ದಾರೆ. ಈ ಯೋಜನೆಯಡಿ ಹೆಣ್ಣು ಮಕ್ಕಳಿಗೆ ಜೀವನದ ನಾನಾ ಹಂತಗಳಲ್ಲಿ ಷರತ್ತಿನ ನಗದು ವರ್ಗಾವಣೆ ಮಾಡಲಾಗುವುದು. ಪ್ರತಿ ಫಲಾನುಭವಿಗೆ ಒಟ್ಟು 15,000 ರೂ. ವರ್ಗಾವಣೆಯಾಗಲಿದೆ. ಆ ಹಂತಗಳೆಂದರೆ ಜನಿಸಿದಾಗ (2,000 ರೂ.), ಒಂದು ವರ್ಷದ ಲಸಿಕೀಕರಣ ಕಾರ್ಯ ಪೂರ್ಣಗೊಳಿಸಿದಾಗ (1,000 ರೂ.), I ನೇ ತರಗತಿಗೆ ಪ್ರವೇಶವಾದಾಗ (2,000 ರೂ.), VI ನೇ ತರಗತಿ ಪ್ರವೇಶದ ವೇಳೆ (2,000 ರೂ.) ಮತ್ತು IX ನೇ ತರಗತಿ ಪ್ರವೇಶದ ವೇಳೆ (3,000 ರೂ.) ಮತ್ತು X ಅಥವಾ XII ಪಾಸಾದ ಬಳಿಕ ಯಾವುದೇ ಪದವಿ/ ಡಿಪ್ಲೊಮಾ ಕೋರ್ಸ್ ಗಳಿಗೆ ಪ್ರವೇಶದ ವೇಳೆ (5,000 ರೂ.) ವರ್ಗಾವಣೆ ಮಾಡಲಾಗುವುದು.

ಅಲ್ಲದೆ, ಪ್ರಧಾನಮಂತ್ರಿ ಅವರು 202 ಪೂರಕ ಪೌಷ್ಟಿಕಾಂಶ ಉತ್ಪಾದನಾ ಘಟಕಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಘಟಕಗಳಿಗೆ ಸ್ವಸಹಾಯ ಗುಂಪುಗಳು ಆರ್ಥಿಕ ನೆರವು ನೀಡಲಿವೆ ಮತ್ತು ಅವುಗಳನ್ನು ಪ್ರತಿ ಘಟಕಕ್ಕೆ ಸುಮಾರು 1 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವುದು. ಈ ಘಟಕಗಳು ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆ (ಐಸಿಡಿಎಸ್) ಅಡಿಯಲ್ಲಿ ರಾಜ್ಯದ ಸುಮಾರು 600 ಬ್ಲಾಕ್‌ಗಳಲ್ಲಿ ಪೂರಕ ಪೌಷ್ಟಿಕಾಂಶ ಪೂರೈಕೆ ಮಾಡಲಿವೆ.
ಪ್ರಧಾನಿ ಮೋದಿ ಅವರು ಡಿಸೆಂಬರ್ 18 ರಿಂದ 28 ರವರೆಗೆ ಮುಂದಿನ 10 ದಿನಗಳಲ್ಲಿ 4 ಬಾರಿ ಉತ್ತರಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಡಿಸೆಂಬರ್ 23 ರಂದು ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಕಾಶಿಗೆ ಭೇಟಿ ನೀಡಲಿದ್ದಾರೆ. ಇದೇ ದಿನ ಲಹರ್ತಾರಾದಿಂದ ಮೋಹನ್‌ಸರೈವರೆಗಿನ ಚತುಷ್ಪಥ ರಸ್ತೆ ಹಾಗೂ ಆರು ವಾರ್ಡ್‌ಗಳಲ್ಲಿ ಆಗಬೇಕಿರುವ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅದೇ ದಿನ ಕಾಶಿ ಜನತೆಗೆ ಪ್ರಧಾನಿ 1500 ಕೋಟಿ ಉಡುಗೊರೆ ನೀಡಲಿದ್ದಾರೆ. ಇದಲ್ಲದೆ, ಪ್ರಧಾನಿ ಮೋದಿ ಅವರು ಡಿಸೆಂಬರ್ 28 ರಂದು ಕಾನ್ಪುರದಲ್ಲಿರಲಿದ್ದು, ಅಲ್ಲಿ ಅವರು ಕಾನ್ಪುರ ಮೆಟ್ರೋವನ್ನು ಉದ್ಘಾಟಿಸಲಿದ್ದಾರೆ.
(ಮಾಹಿತಿ ಕೃಪೆ: ಪ್ರಧಾನಿ ಸಚಿವಾಲಯ)












Click it and Unblock the Notifications