ಯುಪಿ ಚುನಾವಣೆ: ಆಗ್ರಾ ಜಿಲ್ಲೆಯ 9 ಕ್ಷೇತ್ರಗಳಲ್ಲಿ ಮೊದಲ ಹಂತದ ಲೆಕ್ಕಾಚಾರ
ಲಕ್ನೋ, ಫೆಬ್ರವರಿ 8: ಉತ್ತರ ಪ್ರದೇಶದಲ್ಲಿ ಮೊದಲ ಹಂತದ ಚುನಾವಣೆಗೆ ಇನ್ನೆರೆಡು ದಿನಗಳಷ್ಟೇ ಬಾಕಿ ಉಳಿದಿದೆ. ಮತದಾರರ ಮನಸ್ಸು ಗೆಲ್ಲಲು ರಾಜಕೀಯ ಪಕ್ಷಗಳು, ಅಭ್ಯರ್ಥಿಗಳ ನಡುವೆ ಪೈಪೋಟಿ ಜೋರಾಗಿ ನಡೆಯುತ್ತಿದೆ.
ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯಲ್ಲಿ ಫೆಬ್ರವರಿ 10ರಂದು ಮೊದಲ ಹಂತದಲ್ಲಿ ಮತದಾನ ನಡೆಯಲಿದೆ. ಜಿಲ್ಲೆಯ ಒಟ್ಟು 9 ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್, ಬಿಜೆಪಿ, ಸಮಾಜವಾದಿ ಪಕ್ಷಗಳೂ ಸೇರಿದಂತೆ ಸ್ಥಳೀಯವಾಗಿ ಬಹುಪಕ್ಷೀಯ ಸ್ಪರ್ಧೆ ಏರ್ಪಟ್ಟಿದೆ.
ಆಗ್ರಾ ಜಿಲ್ಲೆಯಲ್ಲಿ ಅತಿಹೆಚ್ಚು ಪ್ರಬಲ ಎನಿಸಿರುವ ದಲಿತ ಸಮುದಾಯದ ಮತದಾರರನ್ನು ಸೆಳೆದುಕೊಳ್ಳುವುದಕ್ಕಾಗಿ ಸಮಾಜವಾದಿ ಪಕ್ಷ ರಣತಂತ್ರ ರೂಪಿಸಿದೆ. ಅದರ ಪ್ರಾಥಮಿಕ ಭಾಗವಾಗಿ ಈಗಾಗಲೇ ರಾಷ್ಟ್ರೀಯ ಲೋಕ ದಳದ ಜೊತೆ ದೋಸ್ತಿ ಮಾಡಿಕೊಂಡು ಅಖಾಡಕ್ಕೆ ಇಳಿದಿದೆ. ಸಮಾಜವಾದಿ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಆರ್ ಎಲ್ ಡಿ ಮುಖ್ಯಸ್ಥ ಜಯಂತ್ ಚೌಧರಿ ಒಟ್ಟಾಗಿ ಬಿಜೆಪಿ ವಿರುದ್ಧ ಸಮರ ಸಾರಿದ್ದಾರೆ.

ಆಗ್ರಾ ಜಿಲ್ಲೆಯಲ್ಲಿ ಅತಿಹೆಚ್ಚು ದಲಿತ ಮತ:
ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯಲ್ಲಿ ಶೇ.21ರಷ್ಟು ದಲಿತ ಮತಗಳಿವೆ. ಈ ಹಿನ್ನೆಲೆ ದಲಿತ ಸಮುದಾಯವನ್ನು ಸೆಳೆಯುವುದಕ್ಕೆ ಎಲ್ಲ ಪಕ್ಷದ ಅಭ್ಯರ್ಥಿಗಳು ಶತಪ್ರಯತ್ನ ಮಾಡುತ್ತಿವೆ. ಕಳೆದ 2017ರ ವಿಧಾನಸಭೆ ಚುನಾವಣೆ ವೇಳೆ ಜಿಲ್ಲೆಯ ಒಟ್ಟು 9 ಕ್ಷೇತ್ರಗಳ ಪೈಕಿ ಬಹುಜನ ಸಮಾಜವಾದಿ ಪಕ್ಷ 6 ಸ್ಥಾನಗಳನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು.
2017ರಲ್ಲಿ ಉತ್ತರ ಪ್ರದೇಶದಲ್ಲಿ 403 ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅತಿಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆ ಏರಿತ್ತು. ಒಟ್ಟು 403 ಕ್ಷೇತ್ರಗಳ ಪೈಕಿ ಬಿಜೆಪಿ 312 ಸ್ಥಾನಗಳನ್ನು ಗೆದ್ದಿತ್ತು. ಸಮಾಜವಾದಿ ಪಕ್ಷ 47 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಬಹುಜನ ಸಮಾಜವಾದಿ ಪಕ್ಷವು 19 ಕ್ಷೇತ್ರಗಳಲ್ಲಿ ಗೆಲುವಿನ ಬಾವುಟ ಹಾರಿಸಿತ್ತು. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದ್ದು, ಕೇವಲ ಏಳು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು.
ಆಗ್ರಾ ಜಿಲ್ಲೆಯಲ್ಲಿ 34.61 ಲಕ್ಷ ಮತದಾರರು:
ಆಗ್ರಾ ಜಿಲ್ಲೆಯ ಒಟ್ಟು 9 ವಿಧಾನಸಭೆ ಕ್ಷೇತ್ರಗಳಲ್ಲಿ ಒಟ್ಟು 34.61 ಲಕ್ಷ ಮತದಾರರು ಇದ್ದಾರೆ. ಕಳೆದ ಐದು ವರ್ಷಗಳಲ್ಲಿ ಜಿಲ್ಲೆಯ ಮತದಾರರ ಸಂಖ್ಯೆಯು 2.17 ಲಕ್ಷದಷ್ಟು ಹೆಚ್ಚಳವಾಗಿದೆ. ಜಿಲ್ಲೆಯ ತಾಜ್ ನಗರಿಯಲ್ಲಿ ಮೊದಲ ಬಾರಿಗೆ ಅತಿಹೆಚ್ಚು ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಈ ಬಾರಿ ಒಟ್ಟು 38,640 ಮತದಾರರಿದ್ದು, 18,000ಕ್ಕೂ ಹೆಚ್ಚು ಮಹಿಳೆಯರು, 20,000 ಪುರುಷ ಮತದಾರರಿದ್ದು, 17,952 ದಿವ್ಯಾಂಗ ಚೇತನರು ಈ ಬಾರಿ ಮತದಾನ ಮಾಡಲಿದ್ದಾರೆ.
ಮೊದಲ ಹಂತದಲ್ಲಿ 58 ಕ್ಷೇತ್ರಗಳಿಗೆ ಚುನಾವಣೆ:
ಉತ್ತರ ಪ್ರದೇಶದಲ್ಲಿ ಮೊದಲ ಹಂತದಲ್ಲಿ ಒಟ್ಟು 58 ವಿಧಾನಸಭೆ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ರಾಜ್ಯದಲ್ಲಿ ಒಟ್ಟು ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಫೆಬ್ರವರಿ 10, ಫೆಬ್ರವರಿ 14, ಫೆಬ್ರವರಿ 20, ಫೆಬ್ರವರಿ 23, ಫೆಬ್ರವರಿ 27, ಮಾರ್ಚ್ 3 ಮತ್ತು ಮಾರ್ಚ್ 7ರಂದು ಮತದಾನ ಪ್ರಕ್ರಿಯೆ ನಡೆಯಲಿದೆ. ಮಾರ್ಚ್ 10ರಂದು ಅಂತಿಮ ಫಲಿತಾಂಶ ಹೊರ ಬೀಳಲಿದೆ. ರಾಜ್ಯದ 403 ವಿಧಾನಸಭೆ ಕ್ಷೇತ್ರಗಳಲ್ಲಿ ಈ ಬಾರಿ ಒಟ್ಟು 15.06 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ, ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ, ಕಾಂಗ್ರೆಸ್ ಮತ್ತು ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷದ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆದಿದೆ.












Click it and Unblock the Notifications