ರೈಲು ಶೌಚಾಲಯದಲ್ಲಿ ವಲಸೆ ಕಾರ್ಮಿಕನ ಮೃತದೇಹ ಪತ್ತೆ.!
ಝಾನ್ಸಿ, ಮೇ 29: ಲಾಕ್ ಡೌನ್ ಘೋಷಣೆಯಾದಾಗಿನಿಂದ ಶ್ರಮಕರ ಗೋಳು ಹೇಳತೀರದು. ಅತ್ತ ಕೆಲಸ ಇಲ್ಲ, ಇತ್ತ ಕೈಯಲ್ಲಿ ಕಾಸಿಲ್ಲ. ಹಸಿವಿನಿಂದ ಒದ್ದಾಡುತ್ತಿರುವ ಎಷ್ಟೋ ಕಾರ್ಮಿಕರು ತಮ್ಮ ಸ್ವಂತ ಊರು ಸೇರಲು ರೈಲು ಹತ್ತುತ್ತಿದ್ದಾರೆ.
Recommended Video
ಹಾಗೆ ರೈಲು ಹತ್ತಿದವರು ಊರು ಸೇರುವ ಮುನ್ನವೇ ರೈಲ್ವೇ ನಿಲ್ದಾಣದಲ್ಲಿ ಪ್ರಾಣ ಬಿಟ್ಟ ದುರಂತ ಘಟನೆಗಳು ವರದಿಯಾಗಿವೆ. ಇದೀಗ ಅಂಥದ್ದೇ ಮತ್ತೊಂದು ಘಟನೆ ಝಾನ್ಸಿ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಝಾನ್ಸಿ ರೈಲ್ವೇ ನಿಲ್ದಾಣದಲ್ಲಿನ ರೈಲು ಶೌಚಾಲಯದಲ್ಲಿ ಗುರುವಾರ ಸಂಜೆ ವಲಸೆ ಕಾರ್ಮಿಕನ ಶವ ಪತ್ತೆಯಾಗಿದೆ. ರೈಲು ಬೋಗಿಗಳನ್ನು ಸ್ಯಾನಿಟೈಸ್ ಮಾಡುವಾಗ ಕಾರ್ಮಿಕನ ಮೃತದೇಹ ಸಿಕ್ಕಿದೆ.

ಮೃತನನ್ನು 38 ವರ್ಷ ವಯಸ್ಸಿನ ಮೋಹನ್ ಲಾಲ್ ಶರ್ಮಾ ಎಂದು ಗುರುತಿಸಲಾಗಿದೆ. ಉತ್ತರ ಪ್ರದೇಶದ ಬಸ್ಟಿ ಮೂಲದ ಮೋಹನ್ ಲಾಲ್ ಶರ್ಮಾ ಮುಂಬೈನಲ್ಲಿ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು. ಲಾಕ್ ಡೌನ್ ಘೋಷಣೆಯಾದ್ಮೇಲೆ ಕೆಲಸ ಕಳೆದುಕೊಂಡ ಮೋಹನ್ ಲಾಲ್ ಶರ್ಮಾ ಸ್ವಗ್ರಾಮಕ್ಕೆ ತೆರಳಲು ರೈಲು ಹತ್ತಿದ್ದರು.
ಇದೀಗ ಮೋಹನ್ ಲಾಲ್ ಶರ್ಮಾ ಮೃತದೇಹ ಪತ್ತೆಯಾಗಿದ್ದು, ಸಾವಿಗೆ ಕಾರಣವೇನು ಎಂಬುದು ತಿಳಿದುಬಂದಿಲ್ಲ.
ಮೃತದೇಹವನ್ನು ಪೋಸ್ಟ್ ಮಾರ್ಟಂಗೆ ಕಳುಹಿಸಲಾಗಿದೆ. ಕೋವಿಡ್-19 ಪರೀಕ್ಷೆಯ ಫಲಿತಾಂಶ ಬಂದ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications