ಇಂಡಿಯಾ ಟಿವಿ-ಸಿಎನ್ಎಕ್ಸ್ ಸಮೀಕ್ಷೆ: ಉತ್ತರ ಪ್ರದೇಶದಲ್ಲಿ ಕುಸಿಯಲಿದೆ ಬಿಜೆಪಿ ಬಲ
ನವದೆಹಲಿ, ನವೆಂಬರ್ 16: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಸರ್ಕಾರ ಅಧಿಕಾರದಲ್ಲಿದ್ದರೂ, ಲೋಕಸಭೆಯಲ್ಲಿ ಬಿಜೆಪಿಯ ಬಲ ಕುಸಿಯುವ ಸಾಧ್ಯತೆ ಹೆಚ್ಚಾಗಿದೆ.
2014ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಅಧಿಕಾರದಲ್ಲಿ ಇದ್ದರೂ ಮೋದಿ ಅಲೆಯು 80 ಸೀಟುಗಳ ಪೈಕಿ 71 ಸೀಟುಗಳನ್ನು ಬಿಜೆಪಿಗೆ ತಂದುಕೊಟ್ಟಿತ್ತು. ಸಮಾಜವಾದಿ ಮತ್ತು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಇದರಿಂದ ಕಂಗೆಟ್ಟಿದ್ದವು.
ಆದರೆ, ಈ ಬಾರಿ ಇದೇ ರೀತಿಯ ಪರಿಸ್ಥಿತಿ ಬಿಜೆಪಿಗೆ ಎದುರಾಗಲಿದೆ ಎಂದು ಇಂಡಿಯಾ ಟಿವಿ-ಸಿಎನ್ಎಕ್ಸ್ ನಡೆಸಿದ ಜಂಟಿ ಸಮೀಕ್ಷೆ ಹೇಳಿದೆ.
ಈ ಬಾರಿ ವಿರೋಧಪಕ್ಷಗಳೆಲ್ಲವೂ ಒಂದಾಗಿ ರೂಪಿಸಲಿರುವ 'ಮಹಾಘಟಬಂಧನ್' ಮೈತ್ರಿಕೂಟ ಆಡಳಿತಾರೂಢ ಬಿಜೆಪಿಗೆ ಭಾರಿ ಹಿನ್ನಡೆ ಉಂಟುಮಾಡಲಿದ್ದು, ಉತ್ತರ ಪ್ರದೇಶದಲ್ಲಿಯೂ ಬಿಜೆಪಿ ತನ್ನ ಪ್ರಾಬಲ್ಯವನ್ನು ಕಳೆದುಕೊಳ್ಳುವಂತೆ ಮಾಡಲಿದೆ.
ಸಮೀಕ್ಷೆಯಲ್ಲಿ ಸಂಗ್ರಹಿಸಿರುವ ಅಭಿಪ್ರಾಯದ ಪ್ರಕಾರ, ಉತ್ತರ ಪ್ರದೇಶದಲ್ಲಿ ಬಿಜೆಪಿ ಮೇಲೆ ಮಹಾಮೈತ್ರಿಕೂಟ ಗದಾಪ್ರಹಾರ ನಡೆಸಲಿದ್ದು, ಬಿಜೆಪಿ ಈಗಿರುವ ತನ್ನ ಸಂಸತ್ ಸದಸ್ಯ ಬಲವನ್ನು ಹೆಚ್ಚೂ ಕಡಿಮೆ ಅರ್ಧದಷ್ಟು ಕಳೆದುಕೊಳ್ಳಲಿದೆ ಎನ್ನಲಾಗಿದೆ.
2014ರ ಸಾರ್ವತ್ರಿಕ ಚುನಾವಣೆಯಂತೆಯೇ ಈ ಚುನಾವಣೆಯಲ್ಲಿಯೂ ಕಾಂಗ್ರೆಸ್ ಕಂಗೆಡಲಿದೆ. ಆದರೆ, ಮಹಾಮೈತ್ರಿಕೂಟ ಅದರ ನೆರವಿಗೆ ಬರಲಿದೆ. ಒಡಿಶಾದಲ್ಲಿ ಕಳೆದ ಬಾರಿ ಮೋದಿ ಅಲೆ ಇದ್ದರೂ ಬಿಜೆಪಿ ಒಂದೇ ಒಂದು ಸ್ಥಾನವನ್ನು ಗೆದ್ದುಕೊಂಡಿತ್ತು. ಬಿಜೆಡಿ 20 ಸ್ಥಾನಗಳನ್ನು ತನ್ನದಾಗಿಸಿಕೊಂಡಿತ್ತು.
ಆರು ರಾಜ್ಯಗಳ 171 ಸಂಸತ್ ಕ್ಷೇತ್ರಗಳಲ್ಲಿ ಅ.25ರಿಂದ ನ.12ರವರೆಗೆ ಇಂಡಿಯಾ ಟಿವಿ-ಸಿಎನ್ಎಕ್ಸ್ ಸಮೀಕ್ಷೆ ನಡೆಸಿದೆ.

ಕುಸಿಯಲಿದೆ ಬಿಜೆಪಿ ಶಕ್ತಿ
ಉತ್ತರ ಪ್ರದೇಶದಲ್ಲಿ ವಿರೋಧ ಪಕ್ಷಗಳ ಮಹಾ ಮೈತ್ರಿಕೂಟ ದೊಡ್ಡ ಮಟ್ಟದಲ್ಲಿ ಕೆಲಸ ಮಾಡಲಿದ್ದು, ಲೋಕಸಭೆ ಚುನಾವಣೆಯಲ್ಲಿ ಮೈತ್ರಿಕೂಟ 49 ಸೀಟುಗಳನ್ನು ಪಡೆದುಕೊಳ್ಳಲಿದೆ. ಎನ್‌ಡಿಎ ಒಕ್ಕೂಟದ ಸಾಮರ್ಥ್ಯ 71ರಿಂದ 31ಕ್ಕೆ ಕುಸಿಯಲಿದೆ.

ಯಾರಿಗೆ ಎಷ್ಟು ಸೀಟುಗಳು?
ಉತ್ತರ ಪ್ರದೇಶದಲ್ಲಿ ಇಂಡಿಯಾ ಟುಡೆ-ಸಿಎನ್‌ಎಕ್ಸ್ ಸಮೀಕ್ಷೆ ಪ್ರಕಾರ ಮಹಾಮೈತ್ರಿಕೂಟ ಪಡೆಯುವ ಸೀಟುಗಳು ಹೀಗಿವೆ.
ಬಿಎಸ್ಪಿ- 18
ಎಸ್ಪಿ- 21
ಕಾಂಗ್ರೆಸ್- 8
ಆರ್‌ಎಲ್‌ಡಿ- 2
ಎನ್‌ಡಿಎ ಒಕ್ಕೂಟದ ಸೀಟುಗಳು
ಬಿಜೆಪಿ- 30
ಅಪ್ನಾದಳ್-1

ಮಹಾಮೈತ್ರಿ ವಿಫಲವಾದರೆ?
ಈ ಸಮೀಕ್ಷೆಯು ಒಂದು ವೇಳೆ ಮಹಾಮೈತ್ರಿಕೂಟ ವಿಫಲವಾದರೆ ಸೀಟುಗಳು ಯಾವ ರೀತಿ ಹಂಚಿಕೆಯಾಗಬಹುದು ಎಂಬ ಅಭಿಪ್ರಾಯವನ್ನೂ ಸಮೀಕ್ಷೆ ಸಂಗ್ರಹಿಸಿದೆ.
ಬಿಎಸ್ಪಿ, ಎಸ್ಪಿ, ಕಾಂಗ್ರೆಸ್ ಒಂದಾಗಿ ಚುನಾವಣೆಯನ್ನು ಎದುರಿಸದೆ ಪ್ರತ್ಯೇಕವಾಗಿ ಕಣಕ್ಕೆ ಇಳಿದರೆ ಬಿಜೆಪಿ 80 ಸೀಟುಗಳ ಪೈಕಿ 55ರಲ್ಲಿ ಗೆಲುವು ಸಾಧಿಸಲಿದೆ. ಬಿಎಸ್ಪಿ 9, ಎಸ್ಪಿ 9, ಕಾಂಗ್ರೆಸ್ 5, ಆರ್ಎಲ್ ಡಿ ಮತ್ತು ಅಪ್ನಾ ದಳ್ 1 ಸ್ಥಾನಗಳನ್ನು ಪಡೆದುಕೊಳ್ಳಲಿದೆ.
ಶೇಕಡಾವಾರು ಮತಹಂಚಿಕೆ
ಬಿಜೆಪಿ - 39.19%
ಬಿಎಸ್ಪಿ - 20%
ಎಸ್ಪಿ- 20.55%
ಕಾಂಗ್ರೆಸ್- 11.91%












Click it and Unblock the Notifications