ಉತ್ತರ ಪ್ರದೇಶದಲ್ಲಿ ಆಡಳಿತ ಸ್ಥಗಿತ: ಮಾಜಿ ಅಧಿಕಾರಿಗಳ ಬಹಿರಂಗ ಪತ್ರ
ಲಕ್ನೋ, ಜು.12: ಮಾಜಿ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ 74 ಮಂದಿಯ ಗುಂಪು ಉತ್ತರಪ್ರದೇಶದಲ್ಲಿ "ಆಡಳಿತ ಸಂಪೂರ್ಣ ಸ್ಥಗಿತವಾಗಿದೆ" ಮತ್ತು "ಕಾನೂನಿನ ನಿಯಮವನ್ನು ಉಲ್ಲಂಘಿಸಿಲಾಗುತ್ತಿದೆ" ಎಂದು ಆರೋಪಿಸಿ ಬಹಿರಂಗ ಪತ್ರ ಬರೆದಿದೆ. ಈ ಪತ್ರವನ್ನು 200 ಕ್ಕೂ ಹೆಚ್ಚು ಪ್ರಖ್ಯಾತ ನಾಗರಿಕರು ಅನುಮೋದಿಸಿದ್ದಾರೆ.
ನಾಲ್ಕು ಪುಟಗಳ ಪತ್ರದಲ್ಲಿ, ಐಎಎಸ್, ಐಪಿಎಸ್, ಐಎಫ್‌ಎಸ್ ಅಧಿಕಾರಿಗಳು ಅನಿಯಂತ್ರಿತ ಬಂಧನಗಳು ಮಾಡಲಾಗಿದೆ, ಚಿತ್ರಹಿಂಸೆ ನೀಡಲಾಗಿದೆ ಮತ್ತು ಶಾಂತಿಯುತ ಪ್ರತಿಭಟನಾಕಾರರ ಮೇಲೆ ಪೊಲೀಸ್ ದಾಳಿ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಹಾಗೆಯೇ ನ್ಯಾಯಾಂಗದ ಹೊರಗಿನ ಹತ್ಯೆಗಳನ್ನು ಕೊನೆಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.
ಮುಸ್ಲಿಂ ಪುರುಷರನ್ನು "ಲವ್ ಜಿಹಾದ್" ವಿರುದ್ಧ ಕಾನೂನಿನ ಮೂಲಕ ಗುರಿಯಾಗಿಸಿಕೊಂಡಿದ್ದಾರೆ. ಗೋಹತ್ಯೆಯ ಹೆಸರಿನಲ್ಲಿ ಭಿನ್ನಮತೀಯರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯ ದುರುಪಯೋಗ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ರಾಜ್ಯದಲ್ಲಿ ಕೋವಿಡ್ ಬಿಕ್ಕಟ್ಟನ್ನು ಸರಿಯಾಗಿ ನಿಭಾಯಿಸಬೇಕೆಂದು ಪತ್ರದ ಮೂಲಕ ಕೋರಲಾಗಿದೆ. ರಾಜ್ಯದಲ್ಲಿ ಕೋವಿಡ್ ಬಿಕ್ಕಟ್ಟನ್ನು ಸರಿಯಾಗಿ ನಿಭಾಯಿಸದ ಕಾರಣ ಲೆಕ್ಕವಿಲ್ಲದ ಸಾವುಗಳು ಮತ್ತು ಆರೋಗ್ಯ ವ್ಯವಸ್ಥೆಯ ಕುಸಿತಕ್ಕೆ ಕಾರಣವಾಗಿದೆ ಎಂದಿದ್ದಾರೆ.
"ಯುಪಿಯಲ್ಲಿನ ಪ್ರಸ್ತುತ ಆಡಳಿತವು ತನ್ನದೇ ಆದ ಆಡಳಿತದ ಮಾದರಿಯನ್ನು ರೂಪಿಸಿದೆ ಎಂದು ನಾವು ಗಮನಿಸುತ್ತಿದ್ದೇವೆ. ಈ ಸರ್ಕಾರವು ಪ್ರತಿ ದಿನ ಕಳೆದಂತೆ ಸಂವಿಧಾನದ ಮೌಲ್ಯಗಳು ಮತ್ತು ಕಾನೂನಿನ ನಿಯಮಗಳಿಂದ ದೂರ ಸರಿಯುತ್ತಿದೆ," ಎಂದು ಪತ್ರದಲ್ಲಿ ಹೇಳಲಾಗಿದೆ.
"ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್‌ಗಳು ಮತ್ತು ಪೊಲೀಸರು ಸೇರಿದಂತೆ ಆಡಳಿತದ ಎಲ್ಲಾ ಶಾಖೆಗಳು ಕುಸಿದಿವೆ ಎಂಬುದು ಸ್ಪಷ್ಟವಾಗಿದೆ. ಈಗ ಪರಿಶೀಲಿಸದಿದ್ದರೆ, ರಾಜ್ಯದ ರಾಜಕೀಯ ಮತ್ತು ಸಂಸ್ಥೆಗಳಿಗೆ ಆಗುವ ಹಾನಿಯು ಪ್ರಜಾಪ್ರಭುತ್ವದ ನಾಶಕ್ಕೆ ಕಾರಣವಾಗಬಹುದು ಎಂದು ಭಯಪಡುತ್ತೇವೆ," ಎಂದು ಈ ಪತ್ರದಲ್ಲಿ ಸೇರಿಸಲಾಗಿದೆ.
ಇನ್ನು ಈ ಪತ್ರದಲ್ಲಿ ಪ್ರತಿ ತಲೆ ಬರಹದ ಕೆಳಗೆ ಡೇಟಾ ಮತ್ತು ಉದಾಹರಣೆಗಳನ್ನು ಒದಗಿಸಿದೆ. ಶಾಂತಿಯುತ ಪ್ರತಿಭಟನಾಕಾರರ ವಿರುದ್ಧ ದಬ್ಬಾಳಿಕೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಸಂತ್ರಸ್ತೆಯ ಕುಟುಂಬಸ್ಥರನ್ನು ಭೇಟಿಯಾಗಲು ಹೋದ ವೇಳೆ ಬಂಧಿಸಲಾದ ಕೇರಳ ಪತ್ರಕರ್ತ ಸಿದ್ದೀಕ್ ಕಪ್ಪನ್ ಪ್ರಕರಣವನ್ನು ಉಲ್ಲೇಖಿಸಲಾಗಿದೆ. ಹಾಗೆಯೇ "ರಾತ್ರೋರಾತ್ರಿ ಯುವತಿಯ ಮೃತದೇಹದ ಅಂತ್ಯಸಂಸ್ಕಾರ ಮಾಡಿರುವುದು ಆಡಳಿತದ ತೊಡಕು" ಎಂದು ಹೇಳಲಾಗಿದೆ.
"ಕಪ್ಪನ್ ಇದುವರೆಗೆ 200 ದಿನಗಳಿಗಿಂತ ಹೆಚ್ಚು ಕಾಲ ಜೈಲಿನಲ್ಲಿ ಕಳೆದಿದ್ದಾನೆ. ತೀರಾ ಇತ್ತೀಚೆಗೆ, ಈ ಯುಪಿ ಯ ಆರೋಗ್ಯ ವ್ಯವಸ್ಥೆಯಲ್ಲಿ ಮಾರಕ ನ್ಯೂನತೆಗಳನ್ನು ಎತ್ತಿ ತೋರಿಸುವವರ ವಿರುದ್ಧ ದಂಡನಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗಿದೆ," ಎಂದು ಈ ಪತ್ರದಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.
ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯನ್ನು ಸೂಚಿಸಿ, ಪತ್ರವು ಹೀಗೆ ಹೇಳಿದೆ, "ಅಧಿಕಾರಕ್ಕೆ ಬಂದಾಗಿನಿಂದ, ಮುಸ್ಲಿಮರ ವಿರುದ್ಧ ಯುಪಿ ಸರ್ಕಾರದ ಪಕ್ಷಪಾತವು ಮುಕ್ತ ಮತ್ತು ನಿರ್ಬಂಧಿತವಾಗಿದೆ. ಇದಲ್ಲದೆ, ಮುಂಬರುವ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು, ನಾವು ಯುಪಿ ಸರ್ಕಾರದ ಈ ಕ್ರಮವನ್ನು ಖಂಡಿಸುತ್ತೇವೆ. ಯುಪಿ ಸರ್ಕಾರದ ಇಂತಹ ಕ್ರಮಗಳು ನಿಯಂತ್ರಿಸದಿದ್ದರೆ ಕೋಮು ಧ್ರುವೀಕರಣ ಮತ್ತು ಅವಾಂತರಗಳಿಗೆ ಕಾರಣವಾಗಬಹುದು," ಎಂದು ಹೇಳಿದ್ದಾರೆ.
(ಒನ್‌ಇಂಡಿಯಾ ಸುದ್ದಿ)












Click it and Unblock the Notifications