ಮಥುರಾ ಮುಜಾಫರ್‌ನಗರ ಆಗಲು ಬಿಡದಿರಿ; ರಾಕೇಶ್ ಟಿಕಾಯತ್ ಎಚ್ಚರಿಕೆ
ಲಕ್ನೋ, ಡಿಸೆಂಬರ್ 28: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ನಡುವೆ ಮಧುರಾದಲ್ಲಿ ಮಾತನಾಡಿರುವ ಭಾರತೀಯ ಕಿಸಾನ್ ಒಕ್ಕೂಟದ ಮುಖ್ಯಸ್ಥ ರಾಕೇಶ್ ಟಿಕಾಯತ್, "ಈ ಯಾತ್ರಾ ನಗರದಲ್ಲಿ ಶಾಂತಿ ಕದಡಲು ಬಯಸುವ ಕೆಲವು ಶಕ್ತಿಗಳನ್ನು ಯಶಸ್ವಿಯಾಗಲು ಬಿಡಬೇಡಿ," ಎಂದು ಜನರಿಗೆ ಎಚ್ಚರಿಕೆ ನೀಡಿದ್ದಾರೆ.
ಯಾವುದೇ ಪಕ್ಷವನ್ನು ಹೆಸರಿಸದೆ, "ಅವರಿಗೆ ಮತಗಳು ಸಿಗುತ್ತಿಲ್ಲ, ಆದ್ದರಿಂದ, ಜನರು ಶಾಂತಿಯುತವಾಗಿ ಪ್ರಾರ್ಥನೆ ಸಲ್ಲಿಸುತ್ತಾ ಸಾಮಾನ್ಯ ಜೀವನ ನಡೆಯುತ್ತಿರುವ ಈ ತೀರ್ಥಯಾತ್ರೆಯ ನಗರದಲ್ಲಿ ಶಾಂತಿ ಕದಡಲು ಅವರು ಪ್ರಯತ್ನಿಸುತ್ತಿದ್ದಾರೆ," ಎಂದಿದ್ದಾರೆ.
"ಮಥುರಾ ನಗರದಲ್ಲಿ ವಾತಾವರಣವನ್ನು ಮುಜಾಫರ್‌ನಗರದಂತೆ ಮಾಡಲು ಹೊರಟಿರುವವರ ಪ್ರಯತ್ನವನ್ನು ಜನರು ವಿಫಲಗೊಳಿಸಬೇಕು," ಎಂದು ಭಾರತೀಯ ಕಿಸಾನ್ ಒಕ್ಕೂಟದ ಮುಖ್ಯಸ್ಥ ರಾಕೇಶ್ ಟಿಕಾಯತ್ ಕರೆ ನೀಡಿದ್ದಾರೆ.

ಗಲಭೆಯಲ್ಲಿ ಮುಳಗುತ್ತೆ: ರಾಕೇಶ್ ಟಿಕಾಯತ್
"ನೀವು ಅವರ ಬಲೆಗೆ ಬೀಳಬೇಡಿ. ಇಲ್ಲದಿದ್ದರೆ ಹೆಚ್ಚಿನ ಜನರು ನಿರುದ್ಯೋಗಿಗಳಾಗುತ್ತಾರೆ. ಏಕೆಂದರೆ ಉದ್ಯೋಗ ಅವಕಾಶಗಳು ಕುಂಠಿತಗೊಳ್ಳುತ್ತವೆ. ಮಥುರಾ ಎಂಬ ನಗರವೇ ಗಲಭೆಯಲ್ಲಿ ಮುಳುಗಿ ಹೋಗುತ್ತದೆ," ಎಂದು ರಾಕೇಶ್ ಟಿಕಾಯತ್ ಹೇಳಿದ್ದಾರೆ.
ಪಂಜಾಬ್ ವಿಧಾನಸಭೆ ಚುನಾವಣೆಗಾಗಿ ಹೊಸ ಪಕ್ಷದ ಗೊಂದಲ:
2022ರ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ"ಸಂಯುಕ್ತ ಸಮಾಜ ಮೋರ್ಚಾ" ಎಂಬ ಪಕ್ಷದ ಹೆಸರಿನ ಅಡಿಯಲ್ಲಿ ರೈತ ಪಕ್ಷದ ನಾಯಕರು ಅಖಾಡಕ್ಕೆ ಇಳಿಯುವ ಸಾಧ್ಯತೆಗಳಿವೆ ಎಂಬ ಊಹಾಪೋಹ ಹರಿದಾಡುತ್ತಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಂಯುಕ್ತ ಕಿಸಾನ್ ಮೋರ್ಚಾ, 2022ರ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯು ಈ ಸಂಘಟನೆಯ ಹೆಸರನ್ನು ಬಳಸಿಕೊಳ್ಳುವಂತಿಲ್ಲ. ಒಕ್ಕೂಟದಲ್ಲಿ ಗುರುತಿಸಿಕೊಂಡ ರೈತ ಸಂಘಟನೆಯ ಸದಸ್ಯರು ಕೂಡಾ ಚುನಾವಣೆಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಹೆಸರನ್ನು ಬಳಸಿಕೊಳ್ಳುವಂತಿಲ್ಲ ಎಂದಿತ್ತು.
ಸಂಯುಕ್ತ ಕಿಸಾನ್ ಮೋರ್ಚಾ ರಚನೆ ಆಗಿರುವುದು ರೈತರ ಸಮಸ್ಯೆಗೆ ಮಾತ್ರ:
"ದೇಶದಾದ್ಯಂತ 400ಕ್ಕೂ ಹೆಚ್ಚು ವಿವಿಧ ಸೈದ್ಧಾಂತಿಕ ಸಂಘಟನೆಗಳ ವೇದಿಕೆ ಆಗಿರುವ ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆಯು ರೈತರ ಸಮಸ್ಯೆಗಾಗಿ ಮಾತ್ರ ರಚನೆಯಾಗಿದೆ. ಚುನಾವಣೆ ಬಹಿಷ್ಕಾರಕ್ಕೆ ಕರೆಯೂ ಇಲ್ಲ, ಚುನಾವಣೆಗೆ ಸ್ಪರ್ಧಿಸುವ ತಿಳುವಳಿಕೆಯೂ ಇಲ್ಲ," ಎಂದು ಒಂಬತ್ತು ಸದಸ್ಯರ ಸಮನ್ವಯ ಸಮಿತಿಯು ಸ್ಪಷ್ಟವಾಗಿ ಉಲ್ಲೇಖಿಸಿದೆ. "ಸರ್ಕಾರದಿಂದ ತಮ್ಮ ಹಕ್ಕುಗಳನ್ನು ಪಡೆಯಲು ಜನರಿಂದ" ರಚಿಸಲಾಗಿದೆ, ಕೃಷಿ ಕಾನೂನುಗಳನ್ನು ರದ್ದುಗೊಳಿಸಿದ ನಂತರ ಹೋರಾಟವನ್ನು ಸ್ಥಗಿತಗೊಳಿಸಲಾಗಿದೆ. ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಭರವಸೆಗಳನ್ನು ಒಳಗೊಂಡಿಂತೆ ಉಳಿದ ಬೇಡಿಕೆಗಳನ್ನು ಜನವರಿ 15, 2022ರಂದು ನಡೆಯುವ ಸಭೆಯಲ್ಲಿ ನಿರ್ಧರಿಸಲಾಗುವುದು," ಎಂದು ಸಂಯುಕ್ತ ಕಿಸಾನ್ ಮೋರ್ಚಾ ಸ್ಪಷ್ಟನೆ ನೀಡಿದೆ.
ಯಾವುದೇ ಚುನಾವಣೆಗೆ ಸ್ಪರ್ಧಿಸಲ್ಲ ಎಂದ ರಾಕೇಶ್ ಟಿಕಾಯತ್:
ವಿವಿಧ ರೈತ ಸಂಘಗಳ ಸಂಘಟನೆಯಾದ "ಸಂಯುಕ್ತ ಕಿಸಾನ್ ಮೋರ್ಚಾ ಯಾವುದೇ ಚುನಾವಣೆಗೆ ಸ್ಪರ್ಧಿಸುವುದಿಲ್ಲ," ಎಂದು ಸ್ಪಷ್ಟನೆ ನೀಡಿರುವ ರೈತ ಮುಖಂಡ ರಾಕೇಶ್ ಟಿಕಾಯತ್, "ನಾನು ಯಾವುದೇ ರಾಜಕೀಯಕ್ಕೆ ಸೇರುವುದಿಲ್ಲ," ಎಂದು ಸ್ಪಷ್ಟಪಡಿಸಿದ್ದರು.
ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿದ್ದ ಮೂರು ವಿವಾದಿತ ಕೃಷಿ ಕಾಯ್ದೆಯನ್ನು ರದ್ದುಗೊಳಿಸುವುದಕ್ಕೂ ಮೊದಲು ಸಂಯುಕ್ತ ಕಿಸಾನ್ ಮೋರ್ಚಾ ಮುಂದಿನ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಬಿಜೆಪಿಯ ಜನ ವಿರೋಧಿ ನೀತಿ ಬಗ್ಗೆ ಪ್ರಚಾರ ನಡೆಸುವ ಸಿದ್ದತೆ ಮಾಡಿಕೊಂಡಿತ್ತು. ಆದರೆ ಕೇಂದ್ರ ಸರ್ಕಾರವು ಮೂರು ಕೃಷಿ ಕಾಯ್ದೆ ರದ್ದುಗೊಳಿಸಿದ ಬಳಿಕ, "ಉತ್ತರ ಪ್ರದೇಶದಲ್ಲಿ ಬಿಜೆಪಿ ವಿರುದ್ಧ ಪ್ರಚಾರದ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ," ಎಂದು ಭಾರತೀಯ ಕಿಸಾನ್ ಒಕ್ಕೂಟದ ಮುಖ್ಯಸ್ಥ ರಾಕೇಶ್ ಟಿಕಾಯತ್ ಹೇಳಿದ್ದಾರೆ.












Click it and Unblock the Notifications