ಯುಪಿ ಚುನಾವಣೆಯಲ್ಲಿ ಬಿಜೆಪಿಯ ಮಿತ್ರಪಕ್ಷಗಳಿಗೆ 30 ಸ್ಥಾನ
ಲಕ್ನೋ, ಜನವರಿ 13: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ತನ್ನ ಮಿತ್ರಪಕ್ಷಗಳಿಗೆ 30 ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಕ್ಕೆ ಸೀಟು ಹಂಚಿಕೆ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಯುಪಿ ಚುನಾವಣೆಯಲ್ಲಿ ಬಿಜೆಪಿ ಮಿತ್ರಪಕ್ಷವಾಗಿರುವ ಅಪ್ನಾ ದಳಕ್ಕೆ 15 ಕ್ಷೇತ್ರಗಳನ್ನು ಬಿಟ್ಟುಕೊಡುವುದಕ್ಕೆ ಬಿಜೆಪಿ ನಿರ್ಧರಿಸಿದೆ. ತನ್ನ ಮತ್ತೊಂದು ಮಿತ್ರಪಕ್ಷ ನಿಶಾದ್ ಪಾರ್ಟಿಗೂ ಸಹ 15 ಕ್ಷೇತ್ರಗಳನ್ನು ಹಂಚಿಕೆ ಮಾಡುವ ಸಾಧ್ಯತೆಯಿದೆ.
ವರದಿಗಳ ಪ್ರಕಾರ, ಅಪ್ನಾ ದಳ ಪಕ್ಷವು 30 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಬೆಂಬಲ ನೀಡುವಂತೆ ಬಿಜೆಪಿಗೆ ಕೋರಿದ್ದು, 15 ರಿಂದ 15 ಸ್ಥಾನಗಳನ್ನು ಮಿತ್ರಪಕ್ಷಕ್ಕೆ ನೀಡುವುದಾಗಿ ತಿಳಿದು ಬಂದಿದೆ. ನಿಶಾದ್ ಪಕ್ಷವು ಗೋರಖ್‌ಪುರ, ಸಂತ ಕಬೀರ್ ನಗರ, ಮಹಾರಾಜ್‌ಗಂಜ್, ಕುಶಿನಗರ, ಜಾನ್‌ಪುರ್, ಸುಲ್ತಾನ್‌ಪುರ್ ಮತ್ತು ರಾಂಪುರ ಜಿಲ್ಲೆಗಳಿಂದ ಟಿಕೆಟ್ ಪಡೆಯುವ ನಿರೀಕ್ಷೆಯಿದೆ.

14 ಗಂಟೆಗಳ ಸುದೀರ್ಘ ಚರ್ಚೆ:
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಬುಧವಾರ ಮಿತ್ರಪಕ್ಷಗಳ ಜೊತೆ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯು 14 ಗಂಟೆಗಳ ಸುದೀರ್ಘ ಚರ್ಚೆ ಬಳಿಕ ಮಧ್ಯರಾತ್ರಿ 1.35ರ ಸುಮಾರಿಗೆ ಮುಕ್ತಾಯಗೊಂಡಿತ್ತು. ನವದೆಹಲಿಯಲ್ಲಿ ಕೇಂದ್ರ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಮಿತ್ರಪಕ್ಷಗಳ ಜೊತೆ ಸೀಟು ಹಂಚಿಕೆ ಕುರಿತು ಚರ್ಚೆ ನಡೆಸಲಾಯಿತು. ಈ ವೇಳೆ ಬಿಜೆಪಿ ಸಭೆಯಲ್ಲಿ ಮಿತ್ರಪಕ್ಷ ನಿಶಾದ್ ಪಕ್ಷದ ಅಧ್ಯಕ್ಷ ಸಂಜಯ್ ನಿಶಾದ್, ಅಪ್ನಾ ದಳ ಮುಖಂಡ ಅನುಪಮಾ ಪಟೇಲ್ ಭಾಗವಹಿಸಿದ್ದರು.
ಮೊದಲೆರೆಡು ಹಂತದಲ್ಲಿ 113 ಕ್ಷೇತ್ರಗಳಿಗೆ ಚುನಾವಣೆ:
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, ಫೆಬ್ರವರಿ 14, ಫೆಬ್ರವರಿ 20, ಫೆಬ್ರವರಿ 23, ಫೆಬ್ರವರಿ 27, ಮಾರ್ಚ್ 3 ಮತ್ತು ಮಾರ್ಚ್ 7ರಂದು ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಅಂತಿಮವಾಗಿ ಮಾರ್ಚ್ 10ರಂದು ಅಂತಿಮ ಫಲಿತಾಂಶ ಪ್ರಕಟವಾಗಲಿದೆ. ಫೆಬ್ರವರಿ 10 ಮತ್ತು 14ರಂದು ಮೊದಲ ಎರಡು ಹಂತಗಳಲ್ಲಿ ಪಶ್ಚಿಮ ಭಾಗದ 113 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಈ ಸಂಬಂಧ ಟಿಕಿಟ್ ಹಂಚಿಕೆ ಕುರಿತು ಮಂಗಳವಾರ ಮತ್ತು ಬುಧವಾರದ ಸರಣಿ ಸಭೆಗಳನ್ನು ನಡೆಸಲಾಗಿತ್ತು.
2017ರ ಉತ್ತರ ಪ್ರದೇಶ ಫಲಿತಾಂಶ:
ಕಳೆದ 2017ರಲ್ಲಿ ಉತ್ತರ ಪ್ರದೇಶದಲ್ಲಿ 403 ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅತಿಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆ ಏರಿತ್ತು. ಒಟ್ಟು 403 ಕ್ಷೇತ್ರಗಳ ಪೈಕಿ ಬಿಜೆಪಿ 312 ಸ್ಥಾನಗಳನ್ನು ಗೆದ್ದಿತ್ತು. ಸಮಾಜವಾದಿ ಪಕ್ಷ 47 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಬಹುಜನ ಸಮಾಜವಾದಿ ಪಕ್ಷವು 19 ಕ್ಷೇತ್ರಗಳಲ್ಲಿ ಗೆಲುವಿನ ಬಾವುಟ ಹಾರಿಸಿತ್ತು. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದ್ದು, ಕೇವಲ ಏಳು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು.












Click it and Unblock the Notifications