ಯೋಗಿಗೆ ಭರ್ಜರಿ ಬೂಸ್ಟ್ ನೀಡಿದ ಗೋರಖ್‌ಪುರ ಮತದಾರ: ಕ್ಲೀನ್ ಸ್ವೀಪ್
ಪಂಚ ರಾಜ್ಯಗಳ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಬಿಜೆಪಿ ನಾಲ್ಕು ರಾಜ್ಯಗಳಲ್ಲಿ ಮತ್ತು ಆಮ್ ಆದ್ಮಿ ಪಕ್ಷ ಒಂದು ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಹಲವು ದಶಕಗಳ ನಂತರ ಬಿಜೆಪಿ ಸತತವಾಗಿ ಎರಡನೇ ಬಾರಿಗೆ ಉತ್ತರ ಪ್ರದೇಶದಲ್ಲಿ ಗದ್ದುಗೆಗೇರಿದೆ.
ಬಿಜೆಪಿ ಪಾಲಿಗೆ ಅತಿಮುಖ್ಯವಾದ ಉತ್ತರ ಪ್ರದೇಶದ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ನಿರಾಯಾಸವಾಗಿ ದಡ ಸೇರಿದೆ. ಕಳೆದ ಅಸೆಂಬ್ಲಿ ಚುನಾವಣೆಗಿಂತ ಕಡಿಮೆ ಸ್ಥಾನ ಬಂದಿದ್ದರೂ, ಸರಕಾರ ರಚಿಸಲು ಮತ್ತು ಅದಕ್ಕಿಂತಲೂ ಹೆಚ್ಚು 273ಸ್ಥಾನದಲ್ಲಿ ಜಯಭೇರಿ ಬಾರಿಸಿದೆ. ಇಲ್ಲಿ, ಸರಳ ಬಹುಮತಕ್ಕೆ ಬೇಕಾಗಿರುವುದು 202.
ಉತ್ತರ ಪ್ರದೇಶದ ಚುನಾವಣಾ ಫಲಿತಾಂಶ ಮತ್ತು ಅದರಲ್ಲೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕರ್ಮಭೂಮಿ ಗೋರಖ್‌ಪುರದ ಎಲ್ಲಾ 9 ವಿಧಾನಸಭಾ ಸ್ಥಾನಗಳ ಮೇಲೆ ಇಡೀ ದೇಶದ ಕಣ್ಣು ನೆಟ್ಟಿತ್ತು. ಇಲ್ಲಿ ಬಿಜೆಪಿ ಒಂದೇ ಒಂದು ಸ್ಥಾನ ಕಳೆದುಕೊಂಡಿದ್ದರೂ ನೇರವಾಗಿ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಜವಾಬ್ದಾರಿಯನ್ನಾಗಿಸುತ್ತಿತ್ತು.
ಯೋಗಿ ಆದಿತ್ಯನಾಥ್ ವಿರೋಧಿ (ಪಕ್ಷದೊಳಗಿನ) ಬಣದವರಿಗೂ ಗೋರಖ್‌ಪುರದ ಫಲಿತಾಂಶ ಅತಿಮುಖ್ಯವಾಗಿತ್ತು. ಒಂದು ವೇಳೆ, ಇಲ್ಲಿ ಬಿಜೆಪಿಗೆ ಹಿನ್ನಡೆಯಾದರೆ ರಾಜ್ಯ ರಾಜಕಾರಣದಲ್ಲಿ ಇನ್ನೊಂದು ಸಮೀಕರಣ ಮುನ್ನಲೆಗೆ ಬರುತ್ತಿತ್ತು ಎನ್ನುವ ಮಾತೂ ಕೇಳಿಬರುತ್ತಿತ್ತು.

ಯೋಗಿ ಆದಿತ್ಯನಾಥ್ ಪ್ರಮುಖ ಕಾರಣಕರ್ತರು ಎನ್ನುವುದು ಜನರ ಅಭಿಪ್ರಾಯ
ಆದರೆ, ಗೋರಖ್‌ಪುರ ಮತದಾರರು ಜಾತಿ, ಧರ್ಮದ ಭೇದವಿಲ್ಲದೆ ಯೋಗಿ ಹೆಸರಲ್ಲಿ ಬಿಜೆಪಿಗೆ ಮತ ಹಾಕಿದ್ದಾರೆ. ಇದರಿಂದಾಗಿ ಇಲ್ಲಿನ 9ಕ್ಕೆ ಒಂಬತ್ತೂ ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿದೆ. ಗೋರಖ್‌ಪುರದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳು, ಯೋಜನೆಗಳ ಫಲಾನುಭವಿಗಳ ವಿಚಾರದಲ್ಲಿ ಯಾವುದೇ ತಾರತಮ್ಯ ಮಾಡದೇ ಎಲ್ಲರನ್ನೂ ಜೊತೆಗೆ ಕರೆದುಕೊಂಡು, ಸರಕಾರದ ಯೋಜನೆಯ ಲಾಭವನ್ನು ಪಡೆಯಲು ಯೋಗಿ ಆದಿತ್ಯನಾಥ್ ಪ್ರಮುಖ ಕಾರಣಕರ್ತರು ಎನ್ನುವುದು ಇಲ್ಲಿನ ಜನರ ಅಭಿಪ್ರಾಯ. (ಚಿತ್ರ: ಪಿಟಿಐ)

ಗೋರಖ್‌ಪುರ ಸದರ್ ಸೀಟ್ (ನಗರ) ನಲ್ಲಿ ಯೋಗಿ ಆದಿತ್ಯನಾಥ್ ಗೆಲುವು
ಕ್ಷೇತ್ರದ ವ್ಯಾಪ್ತಿಯ ಚಿಲ್ಲುಪರ್‌ನಲ್ಲಿ ಮೊದಲ ಬಾರಿಗೆ ಕಮಲ ಅರಳಿದ್ದು, ಬಿಜೆಪಿಯ ರಾಜೇಶ್ ತ್ರಿಪಾಠಿ ಅವರು ಎಸ್‌ಪಿ ಅಭ್ಯರ್ಥಿ ಬಾಹುಬಲಿ ಹರಿಶಂಕರ್ ತಿವಾರಿ ಅವರ ಪುತ್ರ ವಿನಯ್ ಶಂಕರ್ ತಿವಾರಿ ಅವರನ್ನು ಸೋಲಿಸಿದ್ದಾರೆ. ಇದಕ್ಕೂ ಮುನ್ನ ವಿನಯ್ ಶಂಕರ್ ತಿವಾರಿ ಅವರು 2017 ಮತ್ತು 2012ರಲ್ಲಿ ಬಿಎಸ್‌ಪಿಯಿಂದ ಗೆದ್ದಿದ್ದರು. ಗೋರಖ್‌ಪುರ ಸದರ್ ಸೀಟ್ (ನಗರ) ನಲ್ಲಿ ಯೋಗಿ ಆದಿತ್ಯನಾಥ್ ಅವರು ಎಸ್ಪಿಯ ಶಭಾವತಿ ಶುಕ್ಲಾ ಅವರನ್ನು 1,03,390 ಮತಗಳ ಅಂತರದಿಂದ ಸೋಲಿಸಿ ಗೆಲುವು ಸಾಧಿಸಿದ್ದಾರೆ. (ಚಿತ್ರ: ಪಿಟಿಐ)

ಗೋರಖ್‌ಪುರದಲ್ಲಿ ಅಖಿಲೇಶ್ ಯಾದವ್ ಜಾದೂ
ಖಜಾನಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಶ್ರೀರಾಮ್ ಚೌಹಾಣ್ ಅವರು ಎಸ್ಪಿಯ ರೂಪಾವತಿ ಬೆಲ್ದಾರ್ ವಿರುದ್ದ ಗೆಲುವು ಸಾಧಿಸಿದ್ದಾರೆ. ಕೆಂಪಿಯಾರಗಂಜ್ ಕ್ಷೇತ್ರದಲ್ಲಿ ಬಿಜೆಪಿಯ ಫತೇ ಬಹಾದ್ದೂರ್ ಅವರು ಎಸ್ಪಿಯ ಕಾಜಲ್ ನಿಷಾದ್ ವಿರುದ್ದ ಗೆಲುವು ಸಾಧಿಸಿದ್ದಾರೆ. ಇನ್ನು, ಪಿಪ್ರಿಚ್ ಕ್ಷೇತ್ರದಲ್ಲಿ ಬಿಜೆಪಿಯ ಮಹೇಂದ್ರ ಪಾಲ್ ಸಿಂಗ್ ಅವರು ಆಮ್ ಆದ್ಮಿ ಪಕ್ಷದ ಧೀರೇಂದ್ರ ಪ್ರತಾಪ್ ಜೈಸ್ವಾಲ್ ಅವರನ್ನು ಸೋಲಿಸಿದ್ದಾರೆ. (ಚಿತ್ರ: ಪಿಟಿಐ)

37 ವರ್ಷಗಳ ನಂತರ ಸರ್ಕಾರ ಪುನರಾವರ್ತನೆ
ಗೋರಖ್‌ಪುರ ಗ್ರಾಮೀಣ ಕ್ಷೇತ್ರದಿಂದ ಬಿಜೆಪಿಯ ಬಿಪಿನ್ ಸಿಂಗ್ ಅವರು ಬಿಎಸ್ಪಿಯ ದಾರಾ ಸಿಂಗ್ ನಿಷಾದ್ ಅವರನ್ನು ಸೋಲಿಸಿದ್ದಾರೆ. ಶಹಜಾನ್ವ ಕ್ಷೇತ್ರದಿಂದ ಬಿಜೆಪಿಯ ಪ್ರದೀಪ್ ಶುಕ್ಲಾ ಅವರು ಎಸ್ಪಿಯ ಯಶಪಾಲ್ ರಾವತ್ ಅವರನ್ನು ಸೋಲಿಸಿದ್ದಾರೆ. ಚೌರಿಚೌರಾ ಕ್ಷೇತದಲ್ಲಿ ಬಿಜೆಪಿಯ ಶರ್ವಣ್ ಕುಮಾರ್ ನಿಷಾದ್ ಅವರು ಬಿಎಸ್ಪಿಯ ವೀರೇಂದ್ರ ಅವರನ್ನು ಸೋಲಿಸಿದ್ದಾರೆ. ಇನ್ನು, ಬಾನ್ಸಗಾಂ ಕ್ಷೇತ್ರದಲ್ಲಿ ಡಾ.ವಿಮಲೇಶ್ ಪಾಸ್ವಾನ್ ಅವರು ಬಿಎಸ್ಪಿಯ ರಾಮನಯನ್ ಆಜಾದ್ ಅವರನ್ನು ಸೋಲಿಸಿದ್ದಾರೆ. (ಚಿತ್ರ: ಪಿಟಿಐ)












Click it and Unblock the Notifications