ಉತ್ತರ ಪ್ರದೇಶ: ಸೋಲುವ ಭಯದಲ್ಲಿ ಬಿಜೆಪಿ ಆರೋಪ ಮಾಡುತ್ತಿದೆ ಎಂದ ರಾವತ್
ನಾಗ್ಪುರ, ಫೆಬ್ರವರಿ 21: ಬಿಜೆಪಿಯು ಸೋಲುವ ಭಯದಿಂದಾಗಿ ವಿರೋಧ ಪಕ್ಷಗಳ ವಿರುದ್ಧ ಆರೋಪ ಮಾಡುತ್ತಿದೆ ಎಂದು ಶಿವಸೇನಾ ನಾಯಕ ಸಂಜಯ್ ರಾವತ್ ಹೇಳಿದ್ದಾರೆ.
2008ರಲ್ಲಿ ಅಹಮದಾಬಾದ್‌ನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ 56 ಮಂದಿ ಮೃತಪಟ್ಟಿದ್ದು, 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಈ ಪ್ರಕರಣಗಳ ವಿಚಾರಣೆ ನಡೆಸಿದ್ದ ಗುಜರಾತ್‌ನ ವಿಶೇಷ ನ್ಯಾಯಾಲಯ , 49 ಮಂದಿಯನ್ನು ತಪ್ಪಿತಸ್ಥರು ಎಂದು ಫೆಬ್ರವರಿ 8 ರಂದು ತೀರ್ಪು ನೀಡಿತ್ತು.
ಫೆಬ್ರವರಿ 18ರಂದು, 38 ಅಪರಾಧಿಗಳಿಗೆ ಮರಣದಂಡನೆ, 11 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿತ್ತು. 2008ರ ಅಹಮದಾಬಾದ್ ಸರಣಿ ಸ್ಫೋಟ ಪ್ರಕರಣದ ಅಪರಾಧಿಯಾಗಿ ತಂದೆ ಎಸ್‌ಪಿ ಪರ ಚುನಾವಣಾ ಪ್ರಚಾರ ನಡೆಸಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆರೋಪಿಸಿದ್ದರು.

ಈ ಕುರಿತು ಮಾತನಾಡಿರುವ ರಾವತ್, ಸೋಲಿನ ಅಂಚಿನಲ್ಲಿರುವಾಗ ಬಿಜೆಪಿ ನಾಯಕರು ಈ ರೀತಿಯ ಆರೋಪಗಳನ್ನು ಮಾಡುತ್ತಾರೆ, ಉತ್ತರ ಪ್ರದೇಶದಲ್ಲಿ ಬಿಜೆಪಿ ಸೋಲುತ್ತಿದ್ದು, ಅದರ ನಾಯಕರು ಹತಾಶ ಪ್ರಯತ್ನಗಳನ್ನು ಮಾಡುತ್ತಿದ್ದಾರೆ, ದೇಶದಲ್ಲಿ ಪ್ರಜಾಪ್ರಭುತ್ವವು ಕೊನೆಗೊಳ್ಳುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಅಖಿಲೇಶ್ ಮೌನವಾಗಿರುವುದೇಕೆ ಎಂದು ಪ್ರಶ್ನಿಸಿರುವ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅಹಮದಾಬಾದ್‌ನ ಸರಣಿ ಸ್ಫೋಟ ಪ್ರಕರಣಗಳ 49 ಅಪರಾಧಿಗಳಿಗೂ ಸಮಾಜವಾದಿ ಪಕ್ಷಕ್ಕೂ ಸಂಬಂಧವಿದೆಯೇ, ಎಸ್‌ಪಿ ನಾಯಕ ಶಹಬಾದ್ ಅಹ್ಮದ್ ಅವರ ಮಗ ಮೊಹಮ್ಮದ್ ಸೈಫ್, ಸ್ಫೋಟ ಪ್ರಕರಣಗಳ ಮಾಸ್ಟರ್‌ಮೈಂಡ್‌ಗಳಲ್ಲಿ ಒಬ್ಬ, ಈ ಸಮಾಜವಾದಿ ಪಕ್ಷದ ನಾಯಕ ಯಾರು?, ಅಖಿಲೇಶ್ ಯಾದವ್ ಈ ಬಗ್ಗೆ ಮೌನ ಮುರಿಯಬೇಕು ಎಂದು ಒತ್ತಾಯಿಸಿದ್ದಾರೆ.
ಇಂಡಿಯನ್ ಮುಜಾಹಿದೀನ್ ಸಂಘಟನೆಯ ಉಗ್ರರು 2008ರ ಜು.26ರಂದು 70 ನಿಮಿಷಗಳ ಅವಧಿಯಲ್ಲಿ ಅಹಮದಾಬಾದ್ ನಗರದ ಸರ್ಕಾರಿ ಆಸ್ಪತ್ರೆ, ಬಸ್ ಸೇರಿದಂತೆ 21 ಕಡೆ ಸರಣಿ ಸ್ಫೋಟ ನಡೆಸಿದ್ದರು. ಘಟನೆಯಲ್ಲಿ 56 ಜನರು ಸಾವನ್ನಪ್ಪಿ, 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. 2002ರ ಗೋಧ್ರೋತ್ತರ ದಂಗೆಗೆ ಪ್ರತಿಯಾಗಿ ಈ ದಾಳಿ ನಡೆಸಲಾಗಿತ್ತು ಎಂದು ಉಗ್ರರು ವಿಚಾರಣೆ ವೇಳೆ ಹೇಳಿಕೊಂಡಿದ್ದರು.
ಅಹಮದಾಬಾದ್ ಕ್ರೈಂ ಬ್ರಾಂಚ್‌ನ ಅಧಿಕಾರಿಗಳ ತಂಡ ಪ್ರಕರಣದ ಕುರಿತು ವಿಸ್ತೃತ ತನಿಖೆ ನಡೆಸಿ ದೋಷಾರೋಪ ಪಟ್ಟಿಸಲ್ಲಿಸಿತ್ತು. ನಂತರದ ದಿನಗಳಲ್ಲಿ ಒಟ್ಟು 9 ನ್ಯಾಯಾಧೀಶರು ಪ್ರಕರಣದ ವಿಚಾರಣೆ ನಡೆಸಿದ್ದರು. ಈ ಪೈಕಿ 2017ರಲ್ಲಿ ವಿಚಾರಣೆ ಹೊಣೆ ವಹಿಸಿಕೊಂಡ ನ್ಯಾ.ಎ.ಆರ್.ಪಟೇಲ್ ಇದೀಗ ತೀರ್ಪು ಪ್ರಕಟಿಸಿದ್ದಾರೆ.
ಪ್ರಕರಣ ಸಂಬಂಧ ಒಟ್ಟು ಇಂಡಿಯನ್ ಮುಜಾಹಿದೀನ್ ಸಂಘಟನೆಗೆ ಸೇರಿದ 77 ಜನರನ್ನು ಪೊಲೀಸರು ಬಂಧಿಸಿದ್ದರು. ಈ ಪೈಕಿ ಓರ್ವ ಮಾಫಿ ಸಾಕ್ಷಿಯಾಗಿ ಬದಲಾಗಿದ್ದ. ಉಳಿದ 76 ಜನರ ಪೈಕಿ 49 ಜನರನ್ನು ದೋಷಿಗಳೆಂದು ಫೆ.8ರಂದು ನ್ಯಾಯಾಲಯ ಘೋಷಿಸಿತ್ತು. 28 ಜನರನ್ನು ಸೂಕ್ತ ಸಾಕ್ಷ್ಯಾಧಾರಗಳ ಕೊರತೆ ಕಾರಣ ಬಿಡುಗಡೆ ಮಾಡಿತ್ತು.
14 ವರ್ಷಗಳ ಹಿಂದೆ ಗುಜರಾತಿನ ಅಹಮದಾಬಾದ್‌ನಲ್ಲಿ ಸರಣಿ ಬಾಂಬ್ ಸ್ಫೋಟ ನಡೆಸಿ 56 ಮಂದಿಯನ್ನು ಬಲಿ ಪಡೆದಿದ್ದ ಪ್ರಕರಣ ಸಂಬಂಧ ಇಂಡಿಯನ್ ಮುಜಾಹಿದೀನ್ ಉಗ್ರ ಸಂಘಟನೆಗೆ ಸೇರಿದ 38 ಜನರಿಗೆ ವಿಶೇಷ ನ್ಯಾಯಾಲಯವೊಂದು ಶುಕ್ರವಾರ ಗಲ್ಲು ಶಿಕ್ಷೆ ವಿಧಿಸಿದೆ. ಇದೇ ವೇಳೆ, 11 ಮಂದಿಗೆ ಜೀವಾವಧಿ ಶಿಕ್ಷೆ ನೀಡಿದೆ.












Click it and Unblock the Notifications