ಸೂರ್ಯ ಸಂಕ್ರಮಣದಿಂದ ಈ ರಾಶಿಯವರಿಗೆ ಅಶುಭ ಫಲ:ವೃತ್ತಿ ಜೀವನದಲ್ಲಿ ಎದುರಾಗುವುದು ತೊಂದರೆ
ಜ್ಯೋತಿಷ್ಯದ ಪ್ರಕಾರ, ಗ್ರಹಗಳ ರಾಜ ಸೂರ್ಯ ವೃಷಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಸೂರ್ಯ ಮತ್ತು ವೃಷಭ ರಾಶಿಯ ನಡುವೆ ಇರುವುದು ದ್ವೇಷ ಭಾವ. ಆದ್ದರಿಂದ, ಮೇ 15, 2026 ರಂದು ಸೂರ್ಯ ವೃಷಭ ರಾಶಿಯನ್ನು ಪ್ರವೇಶಿಸುವುದು ನಾಲ್ಕು ರಾಶಿಯವರಗೆ ಅಶುಭ ಫಲ ನೀಡಲಿದೆ. ಹಾಗಾಗಿ ಈ ಸಂದರ್ಭದಲ್ಲಿ ನಾಲ್ಕು ರಾಶಿಯವರು ಅತ್ಯಂತ ಜಾಗರೂಕರಾಗಿರಬೇಕು.
ವೃತ್ತಿಜೀವನದ ಮೇಲೆ ನಕಾರಾತ್ಮಕ ಪರಿಣಾಮ:
ವೃಷಭ ರಾಶಿಯನ್ನು ಸೂರ್ಯನ ಶತ್ರು ರಾಶಿ ಎಂದೇ ಹೇಳಲಾಗುತ್ತದೆ. ಆದ್ದರಿಂದ, ಈ ರಾಶಿಗೆ ಸೂರ್ಯನ ಸಂಚಾರ ಕೆಲವು ರಾಶಿಯವರಿಗೆ ಸವಾಲಿನದ್ದಾಗಿರಬಹುದು. ವೃಷಭ ರಾಶಿಯಲ್ಲಿ ಸೂರ್ಯನ ಸಂಚಾರ ವೃತ್ತಿ, ಆರೋಗ್ಯ ಮತ್ತು ವೈಯಕ್ತಿಕ ಸಂಬಂಧಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ವೃಷಭ ರಾಶಿಯಲ್ಲಿ ಸೂರ್ಯನ ಸಂಚಾರ ಯಾವ ರಾಶಿಯವರಿಗೆ ಅನುಕೂಲಕರವಾಗಿಲ್ಲ ಎನ್ನುವುದನ್ನು ನೋಡೋಣ.

ವೃಷಭ ರಾಶಿ:
ವೃಷಭ ರಾಶಿಯಲ್ಲಿ ಸೂರ್ಯನ ಸಂಕ್ರಮಣದ ಪರಿಣಾಮವಾಗಿ ಕಚೇರಿಯಲ್ಲಿ ಮೇಲಾಧಿಕಾರಿಗಳೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಹುಟ್ಟಿಕೊಳ್ಳಬಹುದು.ಕೆಲಸದಲ್ಲಿ ವಿಳಂಬ ಮತ್ತು ಅಡೆತಡೆಗಳು ಎದುರಾಗಬಹುದು. ಆತ್ಮವಿಶ್ವಾಸ ಕಡಿಮೆಯಾಗಬಹುದು. ಸಣ್ಣ ಸಣ್ಣ ವಿಚಾರಗಳಿಗೂ ಅನಗತ್ಯ ಕೋಪ ಮತ್ತು ಕಿರಿಕಿರಿ ಹೆಚ್ಚಾಗಬಹುದು. ತಲೆನೋವು ಅಥವಾ ಕಣ್ಣಿನ ಸಮಸ್ಯೆಗಳು ಎದುರಾಗುವ ಅಪಾಯವಿದೆ.
ತುಲಾ ರಾಶಿ:
ತುಲಾ ರಾಶಿಯ ಅಧಿಪತಿ ಶುಕ್ರ. ಇದು ಕೂಡಾ ಸೂರ್ಯನಿಗೆ ಪ್ರತಿಕೂಲ. ಸೂರ್ಯ ಸಂಕ್ರಮಣದ ಫಲವಾಗಿ ಉದ್ಯೋಗದಲ್ಲಿರುವವರು ಕಚೇರಿ ರಾಜಕೀಯಕ್ಕೆ ಬಲಿಯಾಗುವ ಸಾಧ್ಯತೆ ಇದೆ. ಕಠಿಣ ಪರಿಶ್ರಮಕ್ಕೆ ಅನುಗುಣವಾಗಿ ಫಲ ಸಿಗುವುದು ಕಷ್ಟ. ಆರ್ಥಿಕ ನಷ್ಟವಾಗುವ ಸಾಧ್ಯತೆಯಿದೆ. ಆದ್ದರಿಂದ ಹೂಡಿಕೆ ಮಾಡುವ ಮೊದಲು ಅನುಭವಿಗಳ ಸಲಹೆ ಪಡೆದೇ ಮುಂದುವರಿಯುವುದು ಸೂಕ್ತ. ಮಾತಿನ ಮೇಲೆ ನಿಯಂತ್ರಣವಿಲ್ಲದಿರುವುದು ಕುಟುಂಬ ಮತ್ತು ಸಂಗಾತಿಯೊಂದಿಗಿನ ಸಂಬಂಧಗಳು ಏರುಪೇರಾಗುವುದಕ್ಕೆ ಕಾರಣವಾಗಬಹುದು.
ಮಕರ ರಾಶಿ:
ಮಕರ ರಾಶಿಯ ಅಧಿಪತಿ ಶನಿ. ಶನಿ ಮತ್ತು ಸೂರ್ಯ ಪರಸ್ಪರ ವೈರಿಗಳಂತೆ ಇರುವವರು. ಹಾಗಾಗಿ ಸೂರ್ಯ ಸಂಚಾರದ ಪ್ರಭಾವದಿಂದಾಗಿ ವೃತ್ತಿಜೀವನದಲ್ಲಿ ಸಮಸ್ಯೆ ಉಂಟು ಮಾಡಬಹುದು. ಹಠಾತ್ ವರ್ಗಾವಣೆ ಅಥವಾ ಜವಾಬ್ದಾರಿಗಳಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ. ಭವಿಷ್ಯದ ಭಯ ಕಾಡುವುದು. ಮಾನಸಿಕ ಒತ್ತಡ ಉಂಟಾಗಬಹುದು. ಸಹೋದ್ಯೋಗಿಗಳನ್ನು ಕುರುಡಾಗಿ ನಂಬಬೇಡಿ, ದ್ರೋಹಕ್ಕೆ ಬಲಿಯಾಗುವ ಸಾಧ್ಯತೆಯೂ ಇದೆ.
ಕುಂಭ ರಾಶಿ:
ಕುಂಭ ರಾಶಿ ಶನಿಯ ಎರಡನೇ ರಾಶಿ. ಹಾಗಾಗಿ ಸೂರ್ಯನು ಇಲ್ಲಿ ಕೂಡಾ ಪ್ರತಿಕೂಲ ಪರಿಣಾಮ ಬೀರಬಹುದು. ವ್ಯವಹಾರದಲ್ಲಿ ನಿಧಾನಗತಿ ಎದುರಿಸಬೇಕಾಗಬಹುದು. ಪ್ರಮುಖ ವ್ಯವಹಾರಗಳು ಅಥವಾ ಯೋಜನೆಗಳು ಕೊನೆಯ ಕ್ಷಣದಲ್ಲಿ ಪೂರ್ಣವಾಗದೆ ಇರಬಹುದು. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಸಾಮಾಜಿಕ ಪ್ರತಿಷ್ಠೆಯಲ್ಲಿ ಕುಸಿತವಾಗುವ ಸಾಧ್ಯತೆಯಿದೆ. ವಿವಾದಗಳಲ್ಲಿ ಸಿಲುಕಿಕೊಳ್ಳುವುದನ್ನು ಸಾಧ್ಯವಾದಷ್ಟು ತಪ್ಪಿಸಿ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications